ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಸರ್ಕಾರಿ ನೌಕರರು ಒತ್ತಡ ನಿವಾರಣೆಗಾಗಿ ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ ನಿಂಬರಗಿ ಹೇಳಿದರು.ನಗರದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಜಿಲ್ಲಾ ಪಂಚಾಯತಿ, ಆರ್.ಡಿ.ಪಿ.ಆರ್ ಇಲಾಖೆಯ ಎಲ್ಲ ವೃಂದ ಸಂಘಗಳ ಹಾಗೂ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ೪ನೇ ವಾರ್ಷಿಕ ಕ್ರೀಡಾಕೂಟ-೨೦೨೪ ಉದ್ಘಾಟಿಸಿ ಮಾತನಾಡಿದರು. ಕ್ರೀಡಾಕೂಟದಲ್ಲಿ ಭಾಗವಹಿಸುವುದರಿಂದ ಸಾಕಷ್ಟು ಅನುಭವಗಳನ್ನು ಪಡೆದುಕೊಳ್ಳಬಹುದು. ದೇಹ ಮತ್ತು ಆರೋಗ್ಯವನ್ನು ಚೇತೋಹಾರಿಯಾಗಿರಿಸಲು ಕ್ರೀಡೆ ಸಹಕಾರಿ ಎಂದರು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಡಿ ಗ್ರಾಮೀಣ ಮಟ್ಟದಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಲು ನಿಮ್ಮೆಲ್ಲರಿಗೂ ಅವಕಾಶ ಸಿಕ್ಕಿದೆ. ಪ್ರತಿದಿನ ನಿರಂತರ ಕೆಲಸದ ಒತ್ತಡದಲ್ಲಿ ಆರೋಗ್ಯದ ಕಡೆಗೂ ಸಹ ಗಮನ ವಹಿಸಬೇಕು. ಇದಕ್ಕೆ ಪೂರಕವಾಗಿ ಕ್ರೀಡೆಗಳಲ್ಲಿ ಭಾಗವಹಿಸಿ, ಸದೃಢರಾಗಬೇಕು. ನಮ್ಮ ದೇಹ ಸದೃಢ ಇದ್ದಾಗ ಮಾತ್ರ ಆರೋಗ್ಯ ಸ್ಥಿರವಾಗಿರಲು ಸಾಧ್ಯ ಎಂದು ಅಭಿಪ್ರಾಯ ಪಟ್ಟರು.
ಸಿಇಒ ರಿಷಿ ಆನಂದ ಮಾತನಾಡಿ, ಕ್ರೀಡೆಗಳಿಂದ ಆರೋಗ್ಯಕ್ಕೆ ತುಂಬ ಉಪಯುಕ್ತವಿದೆ. ಕ್ರೀಡೆಯು ಪ್ರತಿಯೊಬ್ಬರ ಜೀವನದಲ್ಲಿ ವಿಶೇಷ ಪಾತ್ರ ವಹಿಸುತ್ತದೆ. ಕ್ರೀಡೆಗಳು ಯಾವಾಗಲೂ ಒಬ್ಬ ವ್ಯಕ್ತಿಯನ್ನು ಆರೋಗ್ಯಕರವಾಗಿ, ಸಮೃದ್ಧವಾಗಿ ಮತ್ತು ಕ್ರಿಯಾಶೀಲವಾಗಿರುವಂತೆ ಮಾಡುತ್ತದೆ. ಆರೋಗ್ಯವಂತ ದೇಹದಿಂದ ಮಾತ್ರ ಮನಸ್ಸು ಆರೋಗ್ಯವಾಗಿರಲು ಸಾಧ್ಯ. ನಾವು ಎಲ್ಲಾ ಸಮಯದಲ್ಲೂ ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಂಡಾಗ ಮಾತ್ರ ಜೀವನದಲ್ಲಿ ಉತ್ತಮ ಸಾಧನೆ ಮಾಡಬಹುದು ಎಂದರು.ಜಿಲ್ಲೆಯ ೧೩ ತಾಲೂಕುಗಳ ಎಲ್ಲ ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾಗವಹಿಸುತ್ತಿರುವುದು ಬಹಳ ಹೆಮ್ಮೆಯ ವಿಷಯ. ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನಾವು ಪ್ರತಿನಿತ್ಯ ವಿವಿಧ ಕೆಲಸಗಳಲ್ಲಿ ನಿರತರಾಗಿರುತ್ತೇವೆ. ಈ ಮಧ್ಯ ನಮ್ಮಲ್ಲಿ ಸಾಂಸ್ಕೃತಿಕ ಪ್ರತಿಭೆಗಳು ಹಾಗೂ ಕ್ರೀಡೆಗಳು ಇರುತ್ತವೆ. ಅವುಗಳನ್ನು ಪ್ರದರ್ಶಿಸಲು ಮುಕ್ತ ಅವಕಾಶ ಕಲ್ಪಿಸಲಾಗಿದೆ. ಜೊತೆಗೆ ಈ ಕ್ರೀಡಾಕೂಟದಲ್ಲಿ ಕೆಲವು ತಂಡಗಳಿಗೆ ಗೆಲುವು ಸಿಗುತ್ತದೆ ಮತ್ತು ಕೆಲವು ತಂಡಗಳಿಗೆ ಸೋಲು ಸಿಗುತ್ತದೆ. ಸೋಲು ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸುವಂತೆ ಸಲಹೆ ನೀಡಿದರು.
ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯ್ಯಕ್ಷ ಸುರೇಶ ಶೇಡಶ್ಯಾಳ, ಪಿಡಿಒ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸಿ.ಜಿ.ಪಾರೆ ಮಾತನಾಡಿದರು. ಜಿಪಂ ಮುಖ್ಯ ಯೋಜನಾಧಿಕಾರಿ ನಿಂಗಪ್ಪ ಗೋಠೆ, ಯೋಜನಾ ನಿರ್ದೇಶಕ ಬಿ.ಎಸ್.ರಾಠೋಡ, ಮುಖ್ಯ ಲೆಕ್ಕಾಧಿಕಾರಿ ರಾಮಣ್ಣ ಅಥಣಿ, ಸಹಾಯಕ ಕಾರ್ಯದರ್ಶಿ ಅನುಸೂಯಾ ಚಲವಾದಿ, ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರಾಜಶೇಖರ ದೈವಾಡಿ, ಇ.ಇ ನಬಿಲಾಲ ಗಬಸಾವಳಗಿ, ಇಇ ಬಿ.ಎಸ್.ಕುಂಬಾರ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕೋಶಾಧ್ಯಕ್ಷ ಜುಬೇರ ಕೆರೂರ, ಅಧಿಕಾರಿಗಳಾದ ಎ.ಬಿ.ಅಲ್ಲಾಪೂರ, ಅರುಣಕುಮಾರ ದಳವಾಯಿ, ಎಸ್.ಜೆ.ನಾಯಕ ಉಪಸ್ಥಿತರಿದ್ದರು.