ನಕಲಿ ಕ್ಲಿನಿಕ್ ಗಳ ಮೇಲೆ ಆರೋಗ್ಯ ಅಧಿಕಾರಿಗಳ ದಾಳಿ

| Published : Dec 12 2024, 12:31 AM IST

ಸಾರಾಂಶ

ತಾಲೂಕಿನಾದ್ಯಂತ ನಕಲಿ ಕ್ಲಿನಿಕ್ ಗಳ ಕುರಿತು ಸುದ್ದಿ ಬಂದ ಹಿನ್ನೆಲೆಯಲ್ಲಿ ನಾಮಕೇ ವಾಸ್ತೆಗೆ ಕೆಲವೇ ಕೆಲವು ನಕಲಿ ವೈದ್ಯರ ಮೇಲೆ ಮಾತ್ರ ಅಧಿಕಾರಿಗಳು ದಾಳಿ ನಡೆಸಿ ಕೈ ತೊಳೆದುಕೊಂಡಿದ್ದಾರೆ ಎಂಬ ಆರೋಪಗಳು ಸಾರ್ವಜನಿಕ ವಲಯಗಳಲ್ಲಿ ಕೇಳಿ ಬರುತ್ತಿವೆ.

ಕನ್ನಡಪ್ರಭ ವಾರ್ತೆ ಚೇಳೂರು

ಬಾಗೇಪಲ್ಲಿ ತಾಲೂಕಿನ ಪಾತಪಾಳ್ಯ, ಚೇಳೂರು ತಾಲೂಕಿನ ಸೋಮನಾಥಪುರ, ನಲ್ಲಗುಟ್ಲಪಲ್ಲಿ, ಪಾಳ್ಯಕೆರೆ ಗ್ರಾಮಗಳಲ್ಲಿನ ಕೆಪಿಎಂಇ ಲೈಸೆನ್ಸ್ ಹೊಂದಿರದ ನಕಲಿ ಕ್ಲಿನಿಕ್ ಗಳ ಮೇಲೆ ಆರೋಗ್ಯ ಅಧಿಕಾರಿಗಳು ದಾಳಿ ನಡೆಸಿ ಸೀಜ್ ಮಾಡಿರುವ ಘಟನೆ ಸೋಮವಾರ ನಡೆದಿದೆ.

‘ನಕಲಿ ಕ್ಲಿನಿಕ್ ಗಳ ವಿರುದ್ಧ ಕ್ರಮಕ್ಕೆ ಒತ್ತಾಯ’ ಎಂಬ ಎಂಬ ಸುದ್ದಿ ಕನ್ನಡಪ್ರಭ ಪತ್ರಿಕೆಯಲ್ಲಿ ಪ್ರಕಟಗೊಂಡ ಬೆನ್ನಲ್ಲೇ ತಾಲೂಕಿನಲ್ಲಿ ಆರ್ ಎಂಪಿ ವೈದ್ಯರು ನಡೆಸುತ್ತಿರುವ ಆಸ್ಪತ್ರೆಗಳನ್ನು ತಪಾಸಣೆ ನಡೆಸಿದ ಬಾಗೇಪಲ್ಲಿ ತಾಲೂಕು ಆರೋಗ್ಯಾಧಿಕಾರಿ ಸತ್ಯ ನಾರಯಣ ರೆಡ್ಡಿ ಹಾಗೂ ಅವರ ಸಿಬ್ಬಂದಿಯು ಒಟ್ಟು ೬. ನಕಲಿ ಕ್ಲಿನಿಕ್‌ಗಳನ್ನು ಪತ್ತೆ ಮಾಡಿದ್ದು, ಈ ಪೈಕಿ ಮೂರು ಕ್ಲಿನಿಕ್‌ಗಳನ್ನು ಬಂದ್‌ ಮಾಡಲಾಗಿದ್ದು, ಉಳಿದ ಮೂವರು ನಕಲಿ ವೈದ್ಯರಿಗೆ ಎಚ್ಚರಿಕೆ ನೋಟಿಸ್‌ ನೀಡಲಾಗಿದೆ.

ಆರೋಗ್ಯ ಇಲಾಖೆ ಪರವಾನಗಿ, ವೈದ್ಯ ವೃತ್ತಿಯ ಅರ್ಹತಾ ಪ್ರಮಾಣಪತ್ರ ಹೊಂದಿಲ್ಲದೆ ಬಾಗೇಪಲ್ಲಿ, ಚೇಳೂರು ತಾಲೂಕು ವ್ಯಾಪ್ತಿಯಲ್ಲಿ ಕ್ಲಿನಿಕ್ ತೆರೆದು ಚಿಕಿತ್ಸೆ ನೀಡುತ್ತಿರುವ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ದಾಳಿ ಮಾಡಿ, ಅನಧಿಕೃತ ದವಾಖಾನೆಗಳನ್ನು ಸೀಜ್ ಮಾಡಿ ಮುಂದಿನ ಕ್ರಮಕ್ಕಾಗಿ ಜಿಲ್ಲಾ ವೈದ್ಯಾಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದೆ ಎಂದು ತಾಲೂಕು ಅಧಿಕಾರಿಗಳು ತಿಳಿಸಿದರು.

ಈ ವೇಳೆ ಕಾರ್ಯಾಚರಣೆಯಲ್ಲಿ ಆರೋಗ್ಯ ನಿರೀಕ್ಷಕ ಫಕ್ರುದ್ದೀನ್, ವ್ಯವಸ್ಥಾಪಕ ‌ ಮುಸ್ತಾಕ್ ಅಹಮದ್‌ ಮತ್ತಿತರರು ಇದ್ದರು.

ಎಚ್ಚೆತ್ತುಕೊಳ್ಳದ ಚಿಂತಾಮಣಿ ಆರೋಗ್ಯ ಅಧಿಕಾರಿಗಳು: ನೂತನ ಚೇಳೂರು ತಾಲೂಕಿಗೆ ಚಿಲಕಲನೇರ್ಪು,ಬುರುಡಗುಂಟೆ, ಏನಿಗದಲೆ, ಗ್ರಾಮ ಪಂಚಾಯತಿಗಳು ಸೇರಿದ್ದು ಇವುಗಳಲ್ಲಿ ಕೂಡ ಖಾಸಗಿ ಆಸ್ಪತ್ರೆಗಳು ಆರೋಗ್ಯ ಇಲಾಖೆ ಪರವಾನಗಿ, ವೈದ್ಯ ವೃತ್ತಿಯ ಅರ್ಹತಾ ಪ್ರಮಾಣಪತ್ರ ಹೊಂದಿಲ್ಲದೆ ಸಾರ್ವಜನಿಕರಿಗೆ ಚಿಕಿತ್ಸೆ ನೀಡುತ್ತಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ. ಆದರೂ ಅಧಿಕಾರಿಗಳು ಯಾವುದೇ ರೀತಿ ಕಾರ್ಯಾಚರಣೆ ನಡೆಸದೆ ಅವರ ಬಳಿ ತಿಂಗಳ ಮಾಮೂಲಿ ಪಡೆದು ಸುಮ್ಮನಿದ್ದಾರೆ ಎಂಬ ವದಂತಿಗಳು ಹರಡಿವೆ.

ಚೇಳೂರು ತಾಲೂಕಿನ ಪುಲ್ಲಗಲ್ಲು, ಚಾಕವೇಲು ಗ್ರಾಮಗಳಲ್ಲಿ ಇನ್ನೂ ಯಾವುದೇ ಆಸ್ಪತ್ರೆಗಳ ಮೇಲೆ ದಾಳಿ ನಡೆಸಿಲ್ಲ.

ಕೆಲವು ಕಡೆ ಮಾತ್ರ ಸೀಜ್: ತಾಲೂಕಿನಾದ್ಯಂತ ನಕಲಿ ಕ್ಲಿನಿಕ್ ಗಳ ಕುರಿತು ಸುದ್ದಿ ಬಂದ ಹಿನ್ನೆಲೆಯಲ್ಲಿ ನಾಮಕೇ ವಾಸ್ತೆಗೆ ಕೆಲವೇ ಕೆಲವು ನಕಲಿ ವೈದ್ಯರ ಮೇಲೆ ಮಾತ್ರ ಅಧಿಕಾರಿಗಳು ದಾಳಿ ನಡೆಸಿ ಕೈ ತೊಳೆದುಕೊಂಡಿದ್ದಾರೆ ಎಂಬ ಆರೋಪಗಳು ಸಾರ್ವಜನಿಕ ವಲಯಗಳಲ್ಲಿ ಕೇಳಿ ಬರುತ್ತಿವೆ.

ಪಟ್ಟಣದಲ್ಲಿಲ್ಲ ಸೀಜ್; ಚೇಳೂರು ಪಟ್ಟಣದಲ್ಲಿ ೧೦ಕ್ಕೂ ಹೆಚ್ಚು ಖಾಸಗಿ ಆಸ್ಪತ್ರೆಗಳು ಇವೆ, ಆದರೆ ಅವುಗಳಲ್ಲಿ ಹಲವು ಆಸ್ಪತ್ರೆಗಳಿಗೆ ಸರ್ಕಾರದ ನಿಯಮದ ಪ್ರಕಾರ ಪರವಾನಗಿ ಇಲ್ಲ ಎಂಬ ಆರೋಪಗಳೂ ಇವೆ, ಆದರೆ ತಾಲೂಕಿನ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಸೀಜ್ ಮಾಡದೆ ಕೇವಲ ನೋಟಿಸ್ ನೀಡಲಾಗಿದೆ ಎಂದು ಹೇಳಿದ್ದು ಕೂಡ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.