ಆಯುರ್ವೇದ ಚಿಕಿತ್ಸಾ ಪದ್ಧತಿಯ ಕುರಿತು ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವ ಅಗತ್ಯವಿದೆ. ಉತ್ತಮ ಆಹಾರ ಪದ್ಧತಿ ಹಾಗೂ ಆರೋಗ್ಯಕರ ಜೀವನಶೈಲಿಯನ್ನು ರೂಢಿಸಿಕೊಂಡರೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು. ಜಿಲ್ಲಾದ್ಯಂತ ಆಯುರ್ವೇದ ಆರೋಗ್ಯ ಶಿಬಿರಗಳನ್ನು ನಡೆಸಲಾಗುತ್ತಿದ್ದು, ಶಾಲಾ-ಕಾಲೇಜುಗಳಲ್ಲಿ ಆಯುರ್ವೇದ ಮಹತ್ವ, ಔಷಧೀಯ ಸಸ್ಯಗಳ ಸಂರಕ್ಷಣೆ ಹಾಗೂ ಆರೋಗ್ಯಕರ ಜೀವನಶೈಲಿ ಕುರಿತು ಅರಿವು ಮೂಡಿಸಲಾಗುತ್ತಿದೆ .
ಕನ್ನಡಪ್ರಭ ವಾರ್ತೆ ಗುಬ್ಬಿ
ಆಯುರ್ವೇದ ಚಿಕಿತ್ಸಾ ಪದ್ಧತಿ ಆರೋಗ್ಯ ಸಂರಕ್ಷಣೆ ಜೊತೆಗೆ ರೋಗನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಬದಲಾಗುತ್ತಿರುವ ಜೀವನಶೈಲಿಯಿಂದ ಉಂಟಾಗುತ್ತಿರುವ ಆರೋಗ್ಯ ಸಮಸ್ಯೆಗಳಿಗೆ ನೈಸರ್ಗಿಕ ಹಾಗೂ ಸಾಂಪ್ರದಾಯಿಕ ಚಿಕಿತ್ಸಾ ಪದ್ಧತಿಯತ್ತ ಜನರು ಹೆಚ್ಚಿನ ಗಮನಹರಿಸಬೇಕು ಎಂದು ಲಯನ್ಸ್ ಕ್ಲಬ್ ಅಧ್ಯಕ್ಷ ಡಿ.ಎಸ್. ಕುಮಾರಸ್ವಾಮಿ ದೊಡ್ಡಗುಣಿ ಹೇಳಿದರು.ಪಟ್ಟಣದ ಲಯನ್ಸ್ ಕಚೇರಿ ಆವರಣದಲ್ಲಿ ತುಮಕೂರು ಜಿಲ್ಲಾ ಆಯುಷ್ ಇಲಾಖೆ, ಹರದಗೆರೆ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ, ಲಯನ್ಸ್ ಕ್ಲಬ್, ಗುಬ್ಬಿ ಲಯನ್ಸ್ ಸರ್ವಿಸ್ ಟ್ರಸ್ಟ್ ಹಾಗೂ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ಉಚಿತ ಆಯುರ್ವೇದ ಆರೋಗ್ಯ ಶಿಬಿರದಲ್ಲಿ ಅವರು ಮಾತನಾಡಿದರು.
ಆಯುರ್ವೇದವು ಕೇವಲ ಕಾಯಿಲೆ ಬಂದ ಬಳಿಕ ಚಿಕಿತ್ಸೆ ನೀಡುವ ಪದ್ಧತಿಯಲ್ಲ. ಆಹಾರ ಪದ್ಧತಿ, ಜೀವನಶೈಲಿ ಹಾಗೂ ನೈಸರ್ಗಿಕ ಚಿಕಿತ್ಸಾ ವಿಧಾನಗಳ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳುವ ಸಮಗ್ರ ಪದ್ಧತಿಯಾಗಿದೆ. ಗ್ರಾಮೀಣ ಭಾಗದ ಜನರಿಗೆ ಆಯುರ್ವೇದ ಚಿಕಿತ್ಸೆಯ ಮಹತ್ವದ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಇಂತಹ ಉಚಿತ ಆರೋಗ್ಯ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಶಿಬಿರದಲ್ಲಿ 250ಕ್ಕೂ ಹೆಚ್ಚು ಮಂದಿ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಸಲಹೆ ಪಡೆದುಕೊಂಡರು ಎಂದರು.ಜಿಲ್ಲಾ ಆಯುಷ್ ಅಧಿಕಾರಿ ಡಾ. ಸಿ. ಗಂಗಾಧರ್ ಮಾತನಾಡಿ, ಆಯುರ್ವೇದ ಚಿಕಿತ್ಸಾ ಪದ್ಧತಿಯ ಕುರಿತು ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವ ಅಗತ್ಯವಿದೆ. ಉತ್ತಮ ಆಹಾರ ಪದ್ಧತಿ ಹಾಗೂ ಆರೋಗ್ಯಕರ ಜೀವನಶೈಲಿಯನ್ನು ರೂಢಿಸಿಕೊಂಡರೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು. ಜಿಲ್ಲಾದ್ಯಂತ ಆಯುರ್ವೇದ ಆರೋಗ್ಯ ಶಿಬಿರಗಳನ್ನು ನಡೆಸಲಾಗುತ್ತಿದ್ದು, ಶಾಲಾ-ಕಾಲೇಜುಗಳಲ್ಲಿ ಆಯುರ್ವೇದ ಮಹತ್ವ, ಔಷಧೀಯ ಸಸ್ಯಗಳ ಸಂರಕ್ಷಣೆ ಹಾಗೂ ಆರೋಗ್ಯಕರ ಜೀವನಶೈಲಿ ಕುರಿತು ಅರಿವು ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.
ನಾವು ಸೇವಿಸುವ ಆಹಾರದಲ್ಲಿಯೇ ಔಷಧೀಯ ಗುಣಗಳಿದ್ದು, ಸಾವಯವ ಹಾಗೂ ಪೌಷ್ಟಿಕ ಆಹಾರ ಸೇವನೆಯಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಕಾಯಿಲೆ ಬರುವ ಮುನ್ನವೇ ಮುನ್ನೆಚ್ಚರಿಕೆ ವಹಿಸುವುದು ಉತ್ತಮ. ಯೋಗ, ಧ್ಯಾನ ಹಾಗೂ ಆಯುರ್ವೇದವನ್ನು ಜೀವನಶೈಲಿಯ ಭಾಗವನ್ನಾಗಿಸಿಕೊಳ್ಳುವ ಮೂಲಕ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಸಹಕರಿಸಬೇಕು ಎಂದು ತಿಳಿಸಿದರು.ಗುಬ್ಬಿ ಲಯನ್ಸ್ ಸರ್ವಿಸ್ ಟ್ರಸ್ಟ್ ಅಧ್ಯಕ್ಷ ಅಶೋಕ್ ಕುಮಾರ್ ಮಾತನಾಡಿ, ಲಯನ್ಸ್ ಸಂಸ್ಥೆಯ ವತಿಯಿಂದ ನಿರಂತರವಾಗಿ ಸಮಾಜಮುಖಿ ಹಾಗೂ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಬಡವರು ಹಾಗೂ ಅಗತ್ಯವಿರುವವರಿಗೆ ಉಚಿತ ಆರೋಗ್ಯ ಸೇವೆ ತಲುಪಿಸುವ ಉದ್ದೇಶದಿಂದ ಇಂತಹ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ ಎಂದು ಹೇಳಿದರು.
ಲಯನ್ಸ್ ಸಂಸ್ಥೆಯ ಎಲ್.ವಿ. ಸಾವಂತ್ ಮಾತನಾಡಿ, ಬದಲಾಗುತ್ತಿರುವ ಜೀವನಶೈಲಿ ಹಾಗೂ ಜಂಕ್‌ಫುಡ್ ಸೇವನೆಯಿಂದ ವಿವಿಧ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿವೆ. ಇವುಗಳ ನಿಯಂತ್ರಣಕ್ಕೆ ಆರೋಗ್ಯಕರ ಆಹಾರ ಪದ್ಧತಿ, ಯೋಗ, ಧ್ಯಾನ ಹಾಗೂ ಆಯುರ್ವೇದ ಚಿಕಿತ್ಸಾ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಂಜುಳಾದೇವಿ, ಡಾ. ಸೈಯಿದಾ ಪರ್ವೀನ್, ಕಾರ್ಯದರ್ಶಿ ವಿವೇಕಾನಂದ ಸ್ವಾಮಿ, ಉಂಡೆ ರಾಮಣ್ಣ, ಮಲ್ಲಪ್ಪ, ರೇಣುಕಯ್ಯ, ಸಿದ್ದಪ್ಪ ಗುಜ್ಜರ್, ಮಾಜಿ ಅಧ್ಯಕ್ಷರಾದ ಕರೇಗೌಡ, ಜಯದೇವ ಕುಮಾರ್, ಉಪಾಧ್ಯಕ್ಷೆ ಪ್ರೇಮಲೀಲಾ, ನಿರ್ದೇಶಕ ಕಮಲನಾಭಚಾರಿ, ಆಯುರ್ವೇದ ವೈದ್ಯರಾದ ಡಾ. ಗುರುಪ್ರಸಾದ್, ಡಾ. ಶೇಖರಯ್ಯ ಮಠಪತಿ, ಡಾ. ವಸಂತ, ಡಾ. ಜಯಶ್ರೀ, ಡಾ. ವಿಶ್ವಾಸ್ ಸೇರಿದಂತೆ ಲಯನ್ಸ್ ಕ್ಲಬ್ ಸದಸ್ಯರು, ಮಾಜಿ ಸೈನಿಕರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.