ಈ ಹಿಂದೆ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ಮಂದಿ ಆರೋಗ್ಯದಿಂದ ಕೂಡಿರುತ್ತಿದ್ದರು. ಇದಕ್ಕೆ ಜನರಲ್ಲಿದ್ದ ಉತ್ತಮ ಆಹಾರ ಸೇವನಾ ಪದ್ಧತಿ. ಜೊತೆಗೆ ತಾವೇ ಕೊಟ್ಟಿಗೆ ಗೊಬ್ಬರ ಹಾಕಿ ಇತ್ತಲು, ಹೊಲ ಗದ್ದೆಗಳಲ್ಲಿ ಸೊಪ್ಪು, ತರಕಾರಿಗಳನ್ನು ಬೆಳೆದುಕೊಂಡು ಉಪಯೋಗಿಸುತ್ತಿದ್ದರು.
ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಪ್ರಸ್ತುತ ನಗರ ಪ್ರದೇಶದ ಜನರಿಗಿಂತ ಗ್ರಾಮೀಣ ಪ್ರದೇಶದ ಜನರಲ್ಲಿ ಆರೋಗ್ಯದಲ್ಲಿ ಸಮಸ್ಯೆ ಹೆಚ್ಚಾಗಿದೆ ಎಂದು ಕೆಂಗೇರಿ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ನಿಶ್ಚಲಾನಂದನಾಥ ಸ್ವಾಮೀಜಿ ಆತಂಕ ವ್ಯಕ್ತಪಡಿಸಿದರು.ಕೂಳಗೆರೆ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿಗಳ ಬಳಗ, ಅಳಿಲು ಸೇವಾ ಬಳಗ ಸೇರಿ ಇತರೆ ಸಂಸ್ಥೆಗಳ ಸಹಯೋಗದೊಂದಿಗೆ ಆಯೋಜಿಸಿದ್ದ ಆರೋಗ್ಯ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಈ ಹಿಂದೆ ನಗರ ಪ್ರದೇಶಗಳಿಗೆ ಸೀಮಿತವಾಗಿ ಜನರಲ್ಲಿನ ಆರೋಗ್ಯ ಸಮಸ್ಯೆಗಳು ಈಗ ಗ್ರಾಮಾಂತರ ಪ್ರದೇಶಗಳಲ್ಲಿಯೂ ಹೆಚ್ಚು ಕಾಡುತ್ತಿವೆ ಎಂದರು.
ಈ ಹಿಂದೆ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ಮಂದಿ ಆರೋಗ್ಯದಿಂದ ಕೂಡಿರುತ್ತಿದ್ದರು. ಇದಕ್ಕೆ ಜನರಲ್ಲಿದ್ದ ಉತ್ತಮ ಆಹಾರ ಸೇವನಾ ಪದ್ಧತಿ. ಜೊತೆಗೆ ತಾವೇ ಕೊಟ್ಟಿಗೆ ಗೊಬ್ಬರ ಹಾಕಿ ಇತ್ತಲು, ಹೊಲ ಗದ್ದೆಗಳಲ್ಲಿ ಸೊಪ್ಪು, ತರಕಾರಿಗಳನ್ನು ಬೆಳೆದುಕೊಂಡು ಉಪಯೋಗಿಸುತ್ತಿದ್ದರು. ಆದರೆ, ಇಂದು ಅತಿ ಹೆಚ್ಚು ರಾಸಾಯನಿಕ ಗೊಬ್ಬರ, ರಾಸಾಯನಿಕ ಸಿಂಪಡಣೆಗಗಳಿಂದಾಗಿ ಆಹಾರ ಪದಾರ್ಥಗಳಿಗೆ ಜೊತು ಬಿದ್ದು ಅನಾರೋಗ್ಯ ಸಮಸ್ಯೆಗೆ ತುತ್ತಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.ಆಯೋಜಕ ಹಾಗೂ ಉಪನ್ಯಾಸಕ ರವಿಕಿರಣ್ ಮಾತನಾಡಿ, ಹಳ್ಳಿ ಜನತೆ ತಮ್ಮ ಮೂಲ ಸಂಸ್ಕೃತಿ ಮರೆತು ನಗರ ಸಂಸ್ಕೃತಿಗೆ ಜೋತು ಬಿದ್ದು ಪೆಪ್ಸಿ, ಕೋಕೋ ಕೋಲಾ ಸೇರಿದಂತೆ ಇತರೆ ತಂಪು ಪಾನೀಯ, ಜಂಕ್ ಫುಡ್ ಗಳ ಮೊರೆ ಹೋಗಿ ತಾವೇ ಸ್ವತಃ ಅನಾರೋಗ್ಯವನ್ನು ಕೊಂಡುಕೊಳ್ಳುತ್ತಿದ್ದಾರೆ ಎಚ್ಚರಿಸಿದರು.
ದೇಶಿ ಹಸುಗಳ ಹಾಲು, ಮೊಸರು, ಮಜ್ಜಿಗೆ, ಬೆಣ್ಣೆ, ತುಪ್ಪ ಇವುಗಳನ್ನು ಪ್ರತಿದಿನವೂ ಸೇವಿಸಿ, ಸಾಂಪ್ರದಾಯಿಕ ತಿಂಡಿ ತಿನಿಸುಗಳನ್ನು ತಿನ್ನುವ ರೂಢಿಸಿಕೊಂಡು ಉತ್ತಮ ಆರೋಗ್ಯ ಕಾಪಾಡಿಕೊಳ್ಳುವಂತೆ ಕಿವಿಮಾತು ಹೇಳಿದರು.ಬೆಂಗಳೂರಿನ ಹೆಲ್ತ್ ಇಂಡಿಯಾ ಸಂಸ್ಥಾಪಕ ಡಾ.ರಾಜು ಕೃಷ್ಣಮೂರ್ತಿ ಮಾತನಾಡಿ, ಗ್ರಾಮಾಂತರ ಪ್ರದೇಶದಲ್ಲಿರುವ ಅತ್ಯುತ್ತಮ ವಾತಾವರವನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಕರೆ ನೀಡಿದರು.
ಕೊತ್ತಿಪುರ ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಎಂ.ಎಲ್.ಸುನೀಲ್ ಕುಮಾರ್ ಅವರು ಕೇಂದ್ರ, ರಾಜ್ಯ ಸರ್ಕಾರಗಳ ಆರೋಗ್ಯ ಯೋಜನೆಗಳ ಸದ್ಭಳಕೆಗೆ ಕರೆ ನೀಡಿದರು.ಇದೇ ಸಂದರ್ಭದಲ್ಲಿ ಎಸ್ಡಿಎಂಸಿ ಅಧ್ಯಕ್ಷ, ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಸೇರಿದಂತೆ ಬಿಎಂಟಿಸಿ ನೌಕರ ಪುಟ್ಟಸ್ವಾಮಿ ಇತರರಿದ್ದರು. ಕಾರ್ಯಕ್ರಮಕ್ಕೂ ಮುನ್ನ ಗ್ರಾಮದ ಪ್ರಮುಖ ಬೀದಿಗಳಲ್ಲಿ ತಮಟೆ ನಗಾರಿ ಸಮೇತ ಪೂಜಾ ಕುಣಿತ, ವೀರಗಾಸೆ ನೃತ್ಯ ಪ್ರದರ್ಶನ ಜನರನ್ನು ಆಕರ್ಷಿಸಿತು.