ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಆಧುನಿಕ ಅಸ್ಪತ್ರೆಗಳ ಜೊತೆಗೆ ಪರಿಣಿತ ಮತ್ತು ಸಂವೇಧನಾಶೀಲ ಶುಶ್ರೂಷಕರಿಂದ ಮಾತ್ರ ದೇಶದ ಆರೋಗ್ಯ ವ್ಯವಸ್ಥೆ ಉನ್ನತಿಯಾಗುತ್ತದೆ ಎಂದು ಬೆಂಗಳೂರಿನ ಸರ್ಕಾರಿ ನರ್ಸಿಂಗ್ ಕಾಲೇಜಿನ ಮುಖ್ಯಸ್ಥೆ, ಪ್ರಾಧ್ಯಾಪಕಿ ಪ್ರೊ. ಜಿ.ಜಿ. ರೆಡ್ಡಮ್ಮ ಅಭಿಪ್ರಾಯಪಟ್ಟರು.ತಾಲೂಕಿನ ಪೆರೇಸಂದ್ರ ಗ್ರಾಮದ ಶಾಂತಾ ನರ್ಸಿಂಗ್ ಕಾಲೇಜಿನಲ್ಲಿ ಆಯೋಜಿಸಿದ್ದ ಶುಶ್ರೂಷಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಮಕಾಲೀನ ಜಗತ್ತಿನಲ್ಲಿ ನರ್ಸಿಂಗ್ ಸೇವೆಯಿಲ್ಲದ ಆರೋಗ್ಯ ವ್ಯವಸ್ಥೆಯನ್ನು ಕಲ್ಪಿಸಿಕೊಳ್ಳಲಾಗುವುದಿಲ್ಲ. ಆಧುನಿಕ ವೈದ್ಯಕೀಯ ಸೌಲಭ್ಯಗಳು ಹಾಗೂ ವೈದ್ಯರ ಚಿಕಿತ್ಸೆಯ ನಡುವೆ ಸೇತುಬಂಧವಾಗಿ ದುಡಿಯುವ ನರ್ಸಿಂಗ್ ಸಮುದಾಯವು ಮಾನವನಿಗೆ ಆಧಾರವಾಗಿದೆ ಎಂದರು.
ದೇಶದ ಆರೋಗ್ಯ ವ್ಯವಸ್ಥೆಯು ಅತ್ಯಾಧುನಿಕ ತಾಂತ್ರಿಕತೆಯಿಂದ ಮುಂದುವರೆದಿದ್ದರೂ ಆ ಸೇವೆಯನ್ನು ಸಮರ್ಪಕವಾಗಿ ರೋಗಿಗಳಿಗೆ ನೀಡುವಲ್ಲಿ ಶುಶ್ರೂಷಕರು ವೈದ್ಯರಿಗೆ ನೆರವಾಗುತ್ತಾರೆ ಎಂದು ಶುಶ್ರೂಷಕರ ಸೇವೆಯನ್ನು ಶ್ಲಾಘಿಸಿದರು.ಭಾರತೀಯ ನರ್ಸಿಂಗ್ ಸಮುದಾಯಕ್ಕೆ ಜಾಗತಿಕ ಬೇಡಿಕೆ:
ಭಾರತೀಯ ಶುಶ್ರೂಷಕ ಸಮುದಾಯವು ತಮ್ಮ ಜ್ಞಾನ, ಕೌಶಲ್ಯ, ಕಾರುಣ್ಯ ಮತ್ತು ಸೇವಾ ನೆಲೆಯಲ್ಲಿ ಉತ್ತಮ ಹೆಸರು ಪಡೆದಿದ್ದು, ಭಾರತೀಯ ಶುಶ್ರೂಷಕರಿಗೆ ಜಗತ್ತಿನೆಲ್ಲೆಡೆ ಅವಕಾಶಗಳಿವೆ. ಜಗತ್ತಿನ ನರ್ಸಿಂಗ್ ವ್ಯವಸ್ಥೆಯ ತಾರೆ ಫ್ಲಾರೆನ್ಸ್ ನೈಟಿಂಗೆಲ್ ಅವರ ಜನ್ಮದಿನವನ್ನು ಜಾಗತಿಕ ಶುಶ್ರೂಷಕರ ದಿನವನ್ನಾಗಿ ಆಚರಿಸುತ್ತಿದ್ದು, ಈ ಸಂದರ್ಭದಲ್ಲಿ ಶುಶ್ರೂಷಕರನ್ನು ನಾವು ಗೌರವಿಸಬೇಕು. ಈ ವರ್ಷದ ಶುಶ್ರೂಷಕರ ದಿನವನ್ನು ‘ಶುಶ್ರೂಷಕರು ನಮ್ಮ ಭವಿಷ್ಯ, ಶುಶ್ರೂಷಕರು ಆರೈಕೆಯ ಶಕ್ತಿ’ ಎಂಬ ಘೋಷ ವಾಕ್ಯದೊಂದಿಗೆ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.ಕೋವಿಡ್ 19 ರ ಸಂದರ್ಭದಲ್ಲಿ ನಮ್ಮ ವೈದ್ಯ ಮತ್ತು ನರ್ಸಿಂಗ್ ಸಮುದಾಯವು ಹಗಲು ರಾತ್ರಿಯೆನ್ನದೇ ತಮ್ಮ ಪ್ರಾಣಗಳನ್ನು ಒತ್ತೆ ಇಟ್ಟು ಸಲ್ಲಿಸಿರುವ ಸೇವೆಯನ್ನು ಸಮಾಜ ಎದೆತುಂಬಿ ಆಭಿಮಾನಿಸಿದೆ. ಆದ್ದರಿಂದ ನರ್ಸಿಂಗ್ ಸೇವೆಗೆ ಬೆಲೆಕಟ್ಟಲಾಗುವುದಿಲ್ಲ. ಇಂತಹ ದೂರದೃಷ್ಟಿಯಿಂದ ನರ್ಸಿಂಗ್ ವಿದ್ಯಾರ್ಥಿಗಳು ತಮ್ಮ ಭೌದ್ಧಿಕ ಉನ್ನತಿ, ಕೌಶಲ್ಯ, ಸಂವಹನ, ಸಹನೆ ಮತ್ತು ಕಾಳಜಿಯುಳ್ಳ ಸೇವಾಗುಣಗಳನ್ನು ನಿರಂತರ ಅಧ್ಯಯನ ಮತ್ತು ಸೇವೆಯಿಂದ ಮಾತ್ರ ಕಟ್ಟಿಕೊಳ್ಳಲು ಸಾಧ್ಯವೆಂದು ಕಿವಿಮಾತು ಕೇಳಿದರು.
ಜೀವನ್ ಮತ್ತು ಆನನ್ಯ ಆಸ್ಪತ್ರೆಯ ಶುಶ್ರೂಷಕಿಯರಾದ ಶೀಲಾ ಮತ್ತು ಮೆಹಬೂಬಿ, ಪೆರೇಸಂದ್ರ ಆರೋಗ್ಯ ಕೇಂದ್ರದ ಆಶಾರಾಣಿ, ಸರ್ಕಾರಿ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಶಾಂತಿ ಅವರನ್ನು ಮತ್ತು ನರ್ಸಿಂಗ್ ನಲ್ಲಿ ಅತ್ಯುನ್ನತ ದರ್ಜೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ನರ್ಸಿಂಗ್ ವಿದ್ಯಾರ್ಥಿಗಳು ಶುಶ್ರೂಷಕ ಶಿಕ್ಷಣ ಹಾಗೂ ಸೇವಾ ಸಂಹಿತೆಯನ್ನು ಬಿಂಬಿಸುವ ಗೀತೆ, ನೃತ್ಯ ಮತ್ತು ಪ್ರದರ್ಶಗಳನ್ನು ನಡೆಸಿಕೊಟ್ಟರು.
ಶಾಂತಾ ಸಮೂಹ ವಿದ್ಯಾಸಂಸ್ಥೆಗಳ ನಿರ್ದೇಶಕ ಡಾ.ಕೋಡಿರಂಗಪ್ಪ, ಜೈನ್ ಮಿಷನ್ ಆಸ್ಪತ್ರೆಯ ನರ್ಸಿಂಗ್ ವಿಭಾಗದ ನಿರ್ದೇಶಕಿ ಮೇರಿ ಸಬಾಸ್ಟಿನ್, ಉಪಪ್ರಾಂಶುಪಾಲೆ ಡಯಾನ, ಸುರೇಶ್ ಮತ್ತು ಡಾ. ತಿಪ್ಪೇಸ್ವಾಮಿ ಮತ್ತಿತರರು ಇದ್ದರು.