ವಿಜಯಪುರ: ಭೂತಾಯಿ ಮಡಿಲಿಗೆ ರಾಸಾಯನಿಕಗಳೆಂಬವಿಷ ಸುರಿದು ಭೂಮಿಯ ಫಲವತ್ತತೆ ನಾಶಪಡಿಸುವುದಲ್ಲದೆ, ಅನಾರೋಗ್ಯಕರ ಆಹಾರ ಸೇವಿಸಿ ನಮ್ಮ ಆರೋಗ್ಯವನ್ನೂ ಹಾಳುಮಾಡಿಕೊಳ್ಳುವುದನ್ನು ತಡೆಯಲು ರೈತರು ಸಾವಯವ ಕೃಷಿಯನ್ನು ಅಳವಡಿಸಿಕೊಳ್ಳಬೇಕು ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠಾಧ್ಯಕ್ಷರಾದ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಕರೆ ನೀಡಿದರು.
ಹೋಬಳಿಯ ಬಿಜ್ಜವಾರದಲ್ಲಿ ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿವಿ, ಬೆಂಗಳೂರು ತೋಟಗಾರಿಕೆ ಮಹಾವಿದ್ಯಾಲಯ ಹಾಗೂ ಕೃಷಿ-ತೋಟಗಾರಿಕೆ ಇಲಾಖೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಬಿ.ಎಸ್ಸಿ (ತೋಟಗಾರಿಕೆ) ಅಂತಿಮ ವರ್ಷದ ವಿದ್ಯಾರ್ಥಿಗಳ ಗ್ರಾಮೀಣ ತೋಟಗಾರಿಕಾ ಕಾರ್ಯಾನುಭವ ಕಾರ್ಯಕ್ರಮದ ''''''''ಧರಣಿ ಸಮೃದ್ಧಿ'''''''' ಸಮಾರೋಪ ಸಮಾರಂಭ ಹಾಗೂ ತೋಟಗಾರಿಕಾ ವಸ್ತು ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.ತಂತ್ರಜ್ಞಾನದ ಬಳಸಿ: ಭಾರತದಲ್ಲಿ ಶೇ. ೬೦ರಷ್ಟು ಕೃಷಿಯನ್ನೇ ಅವಲಂಬಿಸಿದ್ದರೂ, ದೇಶದ ಆರ್ಥಿಕತೆಗೆ ಕೃಷಿ ವಲಯದಿಂದ ಸಿಗುತ್ತಿರುವ ಉತ್ಪತ್ತಿ ಕೇವಲ ಶೇ. ೧೮ರಷ್ಟಿದೆ. ಇದನ್ನು ಹೆಚ್ಚಿಸಲು ಇನ್ನಷ್ಟು ಸಂಶೋಧನೆಗಳು ನಡೆಯಬೇಕಿದೆ. ಸಾಫ್ಟ್‌ವೇರ್ ರಂಗದ ''''''''ವರ್ಕ್ ಫ್ರಂ ಹೋಮ್'''''''' ಮಾದರಿಯಲ್ಲೇ, ಕೃಷಿಯಲ್ಲೂ ಮನೆಯಲ್ಲೇ ಕುಳಿತು ಯಾವ ಗಿಡಕ್ಕೆ ರೋಗ ತಗುಲಿದೆ ಎಂಬುದನ್ನು ಪತ್ತೆಹಚ್ಚಿ, ಕೇವಲ ಆ ಗಿಡಕ್ಕೆ ಮಾತ್ರ ಔಷಧ ಸಿಂಪಡಿಸುವ ಅತ್ಯಾಧುನಿಕ ತಂತ್ರಜ್ಞಾನವನ್ನು ನಾವು ಬೆಳೆಸಿಕೊಳ್ಳಬೇಕಿದೆ ಎಂದು ಹೇಳಿದರು.
ಈ ಹಿಂದೆ ಕೇವಲ ವೈದ್ಯಕೀಯ ರಂಗದಲ್ಲಿದ್ದ ''''''''ಇಂಟರ್ನ್‌ಶಿಪ್'''''''' ವ್ಯವಸ್ಥೆ ಈಗ ಕೃಷಿ ಶಿಕ್ಷಣಕ್ಕೂ ಬಂದಿದೆ. ವಿದ್ಯಾರ್ಥಿಗಳು ಪ್ರಾಯೋಗಿಕವಾಗಿ ಮಣ್ಣಿನಲ್ಲಿ ಇಳಿದು ಕೆಲಸ ಮಾಡದ ಹೊರತು ಅವರ ತೋಟಗಾರಿಕಾ ಪದವಿ ಪೂರ್ಣಗೊಳ್ಳುವುದಿಲ್ಲ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.ಬಾಗಲಕೋಟೆ ತೋಟಗಾರಿಕಾ ವಿಜ್ಞಾನಗಳ ವಿವಿ ಕುಲಪತಿ ಡಾ.ವಿಷ್ಣುವರ್ಧನ್ ಮಾತನಾಡಿ, ಯಾವುದೇ ದೇಶ ಅಥವಾ ಮನುಷ್ಯನಿಗೆ ಆಹಾರ, ಆರೋಗ್ಯ ಮತ್ತು ಆದಾಯ ಈ ಮೂರೂ ಪ್ರಮುಖ ಅಂಶಗಳಾಗಿವೆ. ತೋಟಗಾರಿಕಾ ಬೆಳೆಗಳಿಂದ ಉತ್ತಮ ಆದಾಯ ಬರುವುದಲ್ಲದೆ, ಪೋಷಕಾಂಶಯುಕ್ತ ಹಣ್ಣು-ತರಕಾರಿಗಳ ಸೇವನೆಯಿಂದ ಆರೋಗ್ಯ ವೃದ್ಧಿಸುತ್ತದೆ. ಕಳೆದ ೭ ವರ್ಷಗಳಿಂದ ತೋಟಗಾರಿಕಾ ಸಂಶೋಧನೆ ಹಾಗೂ ಬೆಳೆ ಇಳುವರಿ ಉತ್ಪಾದನೆಯಲ್ಲಿ ಕರ್ನಾಟಕ ರಾಜ್ಯ ದೇಶದಲ್ಲೇ ಪ್ರಥಮ ಸ್ಥಾನ ಕಾಯ್ದುಕೊಂಡಿದೆ ಎಂದು ಹೇಳಿದರು.
ಕಾರ್ಯಕ್ರಮದ ಸಂಯೋಜಕರಾದ ಡಾ. ಇಟಗಿ ಪ್ರಭಾಕರ್, ಸಹ ಸಂಯೋಜಕ ಡಾ. ಡಿ.ಎಸ್. ಅಂಬಿಕಾ ಮತ್ತು ಡಾ. ಬಿ. ಪವನ್ ಕುಮಾರ್ ನೇತೃತ್ವದಲ್ಲಿ ತಾಂತ್ರಿಕ ಗೋಷ್ಠಿಗಳು ನಡೆಯಿತು.
ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಕಾರ್ಯದರ್ಶಿಗಳಾದ ಶ್ರೀ ಮಂಗಳನಾಥನಂದ ಸ್ವಾಮೀಜಿ, ಬೆಂಗಳೂರು ತೋಟಗಾರಿಕೆ ಮಹಾವಿದ್ಯಾಲಯದ ಡಾ. ರಾಮಚಂದ್ರ ನಾಯಕ್, ನಿವೃತ್ತ ವಿಜ್ಞಾನಿ ಡಾ. ಜಿ.ಎಸ್. ಕೆ. ಸ್ವಾಮಿ, ಹಾಗೂ ಶಾಶ್ವತ ನೀರಾವರಿ ಹೋರಾಟಗಾರರಾದ ಆಂಜನೇಯರೆಡ್ಡಿ ಉಪಸ್ಥಿತರಿದ್ದರು.
ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ (IIHR) ನಿವೃತ್ತ ಪ್ರಧಾನ ವಿಜ್ಞಾನಿ ಡಾ. ಜಿ.ಎಸ್. ಪ್ರಕಾಶ್ ಅವರು ''''''''ಅಧಿಕ ಇಳುವರಿ ಮತ್ತು ನಿಖರ ಪೋಷಕಾಂಶಗಳ ನಿರ್ವಹಣೆ'''''''' ಬಗ್ಗೆ ಮಾಹಿತಿ ನೀಡಿದರು. ಶೋಲಾಪುರದ ಹಿರಿಯ ವಿಜ್ಞಾನಿಗಳಾದ ಡಾ. ಎನ್. ಮಂಜುನಾಥ್ ಮತ್ತು ಡಾ. ಜಿ. ಬಸವನಗೌಡ ದಾಳಿಂಬೆ ಬೆಳೆ ಸಂರಕ್ಷಣೆ ಕುರಿತು ಉಪನ್ಯಾಸ ನೀಡಿದರು. ಬೆಂಗಳೂರು ತೋಟಗಾರಿಕಾ ಮಹಾವಿದ್ಯಾಲಯದ ಡಾ. ಎಚ್.ಎ. ಯತೀಂದ್ರ ಹಾಗೂ ಪಿ. ಪವನ್ ಕುಮಾರ್ ಅವರು ಸೇವಂತಿಗೆ ಮತ್ತು ಗುಲಾಬಿ ಬೆಳೆಗಳ ಆಧುನಿಕ ಸಮಗ್ರ ಬೇಸಾಯ ಪದ್ಧತಿಗಳ ಕುರಿತು ರೈತರಿಗೆ ಮಾರ್ಗದರ್ಶನ ನೀಡಿದರು.ತೋಟಗಾರಿಕಾ ವಸ್ತು ಪ್ರದರ್ಶನದಲ್ಲಿ ದ್ರಾಕ್ಷಿ, ದಾಳಿಂಬೆ, ಸೇವಂತಿಗೆ, ಗುಲಾಬಿ ಬೆಳೆಗಳ ಸಂರಕ್ಷಣೆ, ಆಧುನಿಕ ನೀರಾವರಿ ಪದ್ಧತಿ, ಮಣ್ಣು ಮತ್ತು ರಾಸಾಯನಿಕ ಗೊಬ್ಬರಗಳ ಸದ್ಬಳಕೆ, ಜಾನುವಾರು ಮೇವು, ಸಾವಯವ ಮತ್ತು ಸುಸ್ಥಿರ ಕೃಷಿ ಯಂತ್ರೋಪಕರಣಗಳು ಹಾಗೂ ಕೃಷಿಯಲ್ಲಿ ಡ್ರೋನ್ ಮತ್ತು ರೊಬೊಟಿಕ್ಸ್ ತಂತ್ರಜ್ಞಾನದ ಬಳಕೆ ಕುರಿತಾದ ಮಳಿಗೆಗಳು ಮತ್ತು ಮಾರಾಟ ಪ್ರದರ್ಶನಗಳು ರೈತರ ಗಮನ ಸೆಳೆದವು.
ಬೆಂಗಳೂರು ತೋಟಗಾರಿಕಾ ಮಹಾವಿದ್ಯಾಲಯದ ಅಂತಿಮ ವರ್ಷದ ಬಿ.ಎಸ್ಸಿ ತೋಟಗಾರಿಕೆಯ ೭೧ ವಿದ್ಯಾರ್ಥಿಗಳು ಕಳೆದ ೧೦೦ ದಿನಗಳ ಕಾಲ ವಿಜಯಪುರ ಹೋಬಳಿಯ ಬಿಜ್ಜವರ, ವೆಂಕಟಗಿರಿ ಕೋಟೆ ಹಾಗೂ ಮರವೇ ಗ್ರಾಮಗಳಲ್ಲಿ ಗ್ರಾಮೀಣ ವಾಸ್ತವ್ಯ ಹೂಡಿದ್ದರು. ಈ ಅವಧಿಯಲ್ಲಿ ವಿದ್ಯಾರ್ಥಿಗಳು ರೈತರೊಂದಿಗೆ ನೇರವಾಗಿ ಹೊಲಗದ್ದೆಗಳಲ್ಲಿ ಬೆರೆತು ಮಣ್ಣಿನ ಗುಣಮಟ್ಟ, ನೀರಾವರಿ ಪದ್ಧತಿ, ಬೆಳೆ ನಿರ್ವಹಣೆ ಹಾಗೂ ರೋಗ ನಿಯಂತ್ರಣದ ಕುರಿತು ಪ್ರಾಯೋಗಿಕ ಕಾರ್ಯಾನುಭವ ಪಡೆದುಕೊಂಡಿರುವುದು ಈ ಸಮಾರೋಪ ಸಮಾರಂಭದ ಪ್ರಮುಖ ಆಕರ್ಷಣೆಯಾಗಿತ್ತು.