ಸಾರಾಂಶ
ಕುಮಟಾ: ಪಟ್ಟಣದ ಚಿತ್ರಗಿಯ ಮಹಾತ್ಮಾಗಾಂಧಿ ಪ್ರೌಢಶಾಲೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮವನ್ನು ಶನಿವಾರ ಹಮ್ಮಿಕೊಳ್ಳಲಾಯಿತು.
ತಾಲೂಕು ಯೋಜನಾಧಿಕಾರಿ ಕಲ್ಮೇಶ್ ಕಾರ್ಯಕ್ರಮ ಉದ್ಘಾಟಿಸಿ, ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮಗಳು ಹಾಗೂ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮದ ಪ್ರಯೋಜನ ವಿವರಿಸಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮುಖ್ಯ ಶಿಕ್ಷಕ ಪಾಂಡುರಂಗ ವಾಗ್ರೇಕರ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಹತ್ತು ಹಲವು ಜನಪರ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಾ ಬಂದಿದೆ. ನಮ್ಮ ಶಾಲೆಯಲ್ಲಿ ಹಮ್ಮಿಕೊಂಡಿರುವ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮದಿಂದ ಯುವ ಪೀಳಿಗೆಗೆ ದುರಭ್ಯಾಸಗಳಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಲು ಕಾರಣವಾಗಿದೆ. ಡಿ.ವೀರೇಂದ್ರ ಹೆಗ್ಗಡೆ ಮಾರ್ಗದರ್ಶನದಲ್ಲಿ ನಡೆಯುವ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಮತ್ತು ಮದ್ಯವರ್ಜನ ಶಿಬಿರ ಇನ್ನಿತರ ಕಾರ್ಯಕ್ರಮಗಳು ಸಮಾಜದ ಸ್ವಾಸ್ಥ್ಯವನ್ನು ಉಳಿಸುತ್ತದೆ ಎಂದರು.
ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ಸಮಿತಿ ಸದಸ್ಯ ಯೋಗಾನಂದ ಗಾಂಧಿ, ಶಾಲಾ ಮಕ್ಕಳು ಮದ್ಯಪಾನ, ಧೂಮಪಾನ, ತಂಬಾಕು ಸೇವನೆ ಮುಂತಾದ ಹಲವು ದುಶ್ಚಟಗಳಿಂದ ದೂರವಿರಬೇಕು. ದುಶ್ಚಟಗಳ ನಿರ್ಮೂಲನೆ ಹಾಗೂ ಹತೋಟಿಗೆ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳನ್ನಿ ವಿವರಿಸಿದರು.ವಿದ್ಯಾರ್ಥಿನಿ ಭೂಮಿಕಾ ಸಂಗಡಿಗರು ಪ್ರಾರ್ಥನೆ ಮಾಡಿದರು. ಶಿಕ್ಷಕ ಅನಿಲ್ ರೊಡ್ರಿಗೀಸ್ ಸ್ವಾಗತಿಸಿದರು. ವಲಯ ಮೇಲ್ವಿಚಾರಕ ಮಂಜುನಾಥ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ಗೋಪಾಲ ನಾಯಕ ವಂದಿಸಿದರು. ಸೇವಾಪ್ರತಿನಿಧಿ ರೂಪಾ ನಾಗೇಶ, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.