ಸಾರಾಂಶ
ಉತ್ತಮ ಜೀವನ ಶೈಲಿಯಿಂದಾಗಿ ಮಾರಣಾಂತಿಕ ಕ್ಯಾನ್ಸರ್‌ನಂತಹ ಕಾಯಿಲೆಯಿಂದಲೂ ನಾವು ನಮ್ಮನ್ನು ರಕ್ಷಿಸಿಕೊಳ್ಳಬಹುದಾಗಿದ್ದು, ರೋಗದ ಲಕ್ಷಣಗಳು ತಿಳಿದಾಗ ವೈದ್ಯರನ್ನು ಸಂಪರ್ಕಿಸಿ ಸಲಹೆ ಪಡೆಯಬೇಕೆಂದು ಗದುಗಿನ ಸ್ತ್ರೀರೋಗ ತಜ್ಞೆ ಡಾ.ರಾಧಿಕಾ ಕುಲಕರ್ಣಿ ಹೇಳಿದರು.
ಗದಗ: ಕ್ಯಾನ್ಸರ್ ಎಂದರೆ ಸಾಮಾನ್ಯವಾಗಿ ಎಲ್ಲರೂ ಭಯಭೀತರಾಗುತ್ತಾರೆ, ಆದರೆ ಉತ್ತಮ ಜೀವನ ಶೈಲಿಯಿಂದಾಗಿ ಮಾರಣಾಂತಿಕ ಕ್ಯಾನ್ಸರ್‌ನಂತಹ ಕಾಯಿಲೆಯಿಂದಲೂ ನಾವು ನಮ್ಮನ್ನು ರಕ್ಷಿಸಿಕೊಳ್ಳಬಹುದಾಗಿದ್ದು, ರೋಗದ ಲಕ್ಷಣಗಳು ತಿಳಿದಾಗ ವೈದ್ಯರನ್ನು ಸಂಪರ್ಕಿಸಿ ಸಲಹೆ ಪಡೆಯಬೇಕೆಂದು ಗದುಗಿನ ಸ್ತ್ರೀರೋಗ ತಜ್ಞೆ ಡಾ.ರಾಧಿಕಾ ಕುಲಕರ್ಣಿ ಹೇಳಿದರು.
ಅವರು ಭಾನುವಾರ ಕರ್ನಾಟಕ ರಾಜ್ಯ ಲೇಖಕಿಯರ ಸಂಘದ ಜಿಲ್ಲಾ ಘಟಕ, ಅಕ್ಕ ಮಹಾದೇವಿ ಕದಳಿಶ್ರೀ ವೇದಿಕೆಯಿಂದ ಜರುಗಿದ ವಿಶ್ವಮಹಿಳಾ ವೈದ್ಯರ ದಿನಾಚರಣೆ, ಆರೋಗ್ಯ ಜಾಗೃತಿ ಕಾರ್ಯಕ್ರಮದಲ್ಲಿ ಸನ್ಮಾನಗೊಂಡು ಮಾತನಾಡಿದರು.ಅಧಿಕ ತೂಕ, ಸ್ಥೂಲ ಕಾಯದಂತಹ ಮುಖ್ಯ ಅಂಶಗಳು ಹಲವು ಬಗೆಯ ಕ್ಯಾನ್ಸರ್‌ಗಳಿಗೆ ದಾರಿಮಾಡಿಕೊಡುತ್ತವೆ. ಮಹಿಳೆಯರು ಮುಖ್ಯವಾಗಿ ನಿತ್ಯ ವ್ಯಾಯಾಮ, ಕೆಲಸದಲ್ಲಿ ತೊಡಗಿಸಿಕೊಳ್ಳುವಿಕೆ, ಆರೋಗ್ಯವಂತ ಜೀವನ ಶೈಲಿ ರೂಢಿಸಿಕೊಳ್ಳುವದು ಮುಖ್ಯವಾಗಿದ್ದು, ಇತ್ತೀಚೆಗೆ ಗರ್ಭಕಂಠದ ಕ್ಯಾನ್ಸರ್, ಸ್ತನ ಕ್ಯಾನ್ಸರ್ ಮಹಿಳೆಯರಲ್ಲಿ ಅಧಿಕವಾಗಿ ಕಂಡುಬರುತ್ತಿರುವದು ವಿಷಾದನೀಯ ಎಂದರು.
ಕವಿತಾ ದಂಡಿನ ಪ್ರಾಸ್ತಾವಿಕವಾಗಿ ಮಾತನಾಡಿ, ಮಹಿಳಾ ವೈದ್ಯರು ಮಾತೃ ಸ್ವರೂಪಿಯಾಗಿಯಾಗಿದ್ದಾರೆ. ಹೀಗಾಗಿ ಮಹಿಳಾ ವೈದ್ಯರ ಸಂಖ್ಯೆ ಹೆಚ್ಚಾಗಬೇಕೆಂದರು. ಗಾಯಕಿ ದೀಪ್ತಿ ಪಾಠಕ ಪ್ರಾರ್ಥಿಸಿದರು, ಜಯಶ್ರೀ ಶ್ರೀಗಿರಿ ಸ್ವಾಗತಿಸಿದರು, ಜಯಶ್ರೀ ಪಾಟೀಲ ಪರಿಚಯಿಸಿದರು. ಸುವರ್ಣಾ ವಸ್ತ್ರದ ನಿರೂಪಿಸಿದರು. ಸುಧಾ ಬಂಡಾ ವಂದಿಸಿದರು. ಸುಮಾ ಪಾಟೀಲ, ಜ್ಯೋತಿ ಭರಮಗೌಡ್ರ, ಶಶಿಕಲಾ ಲಕ್ಕನಗೌಡ್ರ, ಪದ್ಮಾ ಕಬಾಡಿ, ಮಹಾಲಕ್ಷ್ಮೀ ತೊಂಡಿಹಾಳ, ಕಾವ್ಯಾ ದಂಡಿನ, ಅನುಸೂಯಾ ಪಾಟೀಲ, ರತ್ನಾ ಗುಂಟೂರ ಮುಂತಾದವರು ಹಾಜರಿದ್ದರು.