ಸಾರಾಂಶ
ದಾಬಸ್‌ಪೇಟೆ: ಕ್ರೀಡೆಗಳು ಆರೋಗ್ಯ ಮತ್ತು ದೈಹಿಕ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತವೆ ಎಂದು ಶಾಸಕ ಎನ್.ಶ್ರೀನಿವಾಸ್ ತಿಳಿಸಿದರು.
ದಾಬಸ್‌ಪೇಟೆ: ಕ್ರೀಡೆಗಳು ಆರೋಗ್ಯ ಮತ್ತು ದೈಹಿಕ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತವೆ ಎಂದು ಶಾಸಕ ಎನ್.ಶ್ರೀನಿವಾಸ್ ತಿಳಿಸಿದರು.
ಸೋಂಪುರ ಹೋಬಳಿಯ ನರಸೀಪುರ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ 2024-25ನೇ ಸಾಲಿನ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ ಜಿಲ್ಲಾ ಮಟ್ಟದ ಕಬ್ಬಡಿ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಕಬಡ್ಡಿ ನಮ್ಮ ಮಣ್ಣಿನ ಕ್ರೀಡೆಯಾಗಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆದಿರುವುದು ನಮ್ಮಗೆಲ್ಲ ಹೆಮ್ಮೆಯ ಸಂಗತಿಯಾಗಿದೆ ಎಂದರು.ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳುವುದರಿಂದ ನಮ್ಮ ಮಾನಸಿಕ ಹಾಗೂ ದೈಹಿಕ ಬೆಳವಣಿಗೆಗೆ ಸಹಕಾರಿಯಾಗುತ್ತವೆ. ಕ್ರೀಡಾಪಟುಗಳು ಸೋಲು-ಗೆಲುವು ಲೆಕ್ಕಕ್ಕೆ ಇಟ್ಟುಕೊಳ್ಳದೇ ಕ್ರೀಡೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಕ್ರೀಡಾಸ್ಫೂರ್ತಿ ಮೆರೆಯಬೇಕಿರುವುದು ಪ್ರತಿಯೊಬ್ಬ ಕ್ರೀಡಾಪಟುವಿನ ಲಕ್ಷಣವಾಗಿದ್ದು, ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಇಂತಹ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಬೇಕು ಎಂದರು.
ಗ್ರಾ.ಪಂ ಅಧ್ಯಕ್ಷ ರಾಮಾಂಜೀನೇಯ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಗೆ ಸ್ಪರ್ಧೆ ಮಾಡಿದವರೆಲ್ಲ ಗೆಲ್ಲಲು ಸಾಧ್ಯವಿಲ್ಲ. ಯಾರಾದರೂ ಒಬ್ಬರು ಮಾತ್ರ ಗೆಲುವು ಪಡೆಯಲು ಸಾಧ್ಯ. ಅದೇ ರೀತಿ ಕ್ರೀಡೆಯಲ್ಲಿಯೂ ಎಲ್ಲರೂ ಗೆಲುವು ಸಾಧಿಸಲು ಸಾಧ್ಯವಿಲ್ಲ. ಪದಕ, ಪ್ರಶಸ್ತಿ ಗಳಿಸುವುದಕ್ಕೆ ಮಾತ್ರ ಸೀಮಿತವಾಗಬಾರದು ಎಂದರು.ಬಿಇಒ ಕೆ.ಸಿ.ರಮೇಶ್ ಮಾತನಾಡಿ, ವಿದ್ಯಾರ್ಥಿಗಳು ಆಟದ ಜೊತೆಗೆ ಓದಿನ ಕಡೆಗೆ ಹೆಚ್ಚು ಗಮನ ಕೊಡಬೇಕು. ಕ್ರೀಡೆಯಲ್ಲಿ ಒಮ್ಮೆ ಸೋತ ತಕ್ಷಣ ಹಿಂದೆ ಸರಿಯಬಾರದು. ಮತ್ತೆ ಸ್ಪರ್ಧೆ ಮಾಡಬೇಕು. ಆಗ ಮಾತ್ರ ಗೆಲುವು ಪಡೆಯಲು ಸಾಧ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ದೈಹಿಕ ಶಿಕ್ಷಣ ನಿರ್ದೇಶಕ ರಮೇಶಪ್ಪ, ಮುಖಂಡ ಅಗಳಕುಪ್ಪೆ ಗೋವಿಂದರಾಜು, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ಪುಟ್ಟರುದ್ರಾರಾಧ್ಯ, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ವಾಸುದೇವಮೂರ್ತಿ, ಗ್ರಾ.ಪಂ.ಸದಸ್ಯರಾದ ನಾಗರಾಜು, ಶೋಭಾ, ಹರೀಶ್, ದಿನೇಶ್ ನಾಯ್ಕ್ ಮುಖಂಡರುಗಳಾದ ಗಂಗರುದ್ರಯ್ಯ, ಸಿದ್ದರಾಜು, ಪಾರ್ಥರಾಜು, ನಯಾಜ್ ಖಾನ್ ಮತ್ತಿತರರಿದ್ದರು.