ಒಂದೂವರೆ ವರ್ಷದಲ್ಲಿ ಆರೋಗ್ಯ ವಿವಿ ಪೂರ್ಣ: ಶಾಸಕ ಇಕ್ಬಾಲ್ ಹುಸೇನ್

| Published : Jul 27 2025, 12:00 AM IST

ಒಂದೂವರೆ ವರ್ಷದಲ್ಲಿ ಆರೋಗ್ಯ ವಿವಿ ಪೂರ್ಣ: ಶಾಸಕ ಇಕ್ಬಾಲ್ ಹುಸೇನ್
Share this Article
  • FB
  • TW
  • Linkdin
  • Email

ಸಾರಾಂಶ

ರಾಮನಗರದ ಅರ್ಚಕರಹಳ್ಳಿಯಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಶ್ವ ವಿದ್ಯಾಲಯ ಕ್ಯಾಂಪಸ್ 800 ಕೋಟಿ ರುಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿದೆ.

ಕನ್ನಡಪ್ರಭ ವಾರ್ತೆ ರಾಮನಗರದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಕ್ಯಾಂಪಸ್ ನಿರ್ಮಾಣ ಕಾರ್ಯ ವೇಗವಾಗಿ ನಡೆಯುತ್ತಿದ್ದು, ಮುಂದಿನ ಒಂದೂವರೆ ವರ್ಷಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಶಾಸಕ ಇಕ್ಬಾಲ್ ಹುಸೇನ್ ಹೇಳಿದರು.ತಾಲೂಕಿನ ಮಾಯಗಾನಹಳ್ಳಿಯಲ್ಲಿ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ಅಡಿಯಲ್ಲಿ ಮುಖ್ಯರಸ್ತೆಯಿಂದ ಕೆಂಜಿಗಾರನಹಳ್ಳಿ ಕಾಲೋನಿವರೆಗೆ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ಅವರು, ಆರೋಗ್ಯ ವಿವಿ ಕ್ಯಾಂಪಸ್ ನಿರ್ಮಾಣ ಕಾರ್ಯ ಪೂರ್ಣಗೊಂಡ ಬಳಿಕ ಸಹಸ್ರಾರು ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಇಲ್ಲಿಗೆ ಆಗಮಿಸುತ್ತಾರೆ. ಆನಂತರ ರಾಮನಗರ ಆರೋಗ್ಯ ನಗರವಾಗಿ ರೂಪುಗೊಳ್ಳಲಿದೆ ಎಂದರು.ರಾಮನಗರದ ಅರ್ಚಕರಹಳ್ಳಿಯಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಶ್ವ ವಿದ್ಯಾಲಯ ಕ್ಯಾಂಪಸ್ 800 ಕೋಟಿ ರುಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿದೆ. ಹಗಲು ರಾತ್ರಿ ಎನ್ನದೆ ಕಾಮಗಾರಿ ಮುಂದುವರೆದಿದ್ದು, ಈಗಾಗಲೇ 400 ಕೋಟಿ ಬಿಡುಗಡೆಯಾಗಿದ್ದು, ಉಳಿಕೆ 400 ಕೋಟಿ ರುಪಾಯಿ ಬಿಡುಗಡೆಯಾಗುವುದು ಬಾಕಿಯಿದೆ ಎಂದು ತಿಳಿಸಿದರು.ಅರ್ಕಾವತಿ ರಿವರ್ ಫ್ರಂಟ್ ನಿರ್ಮಾಣ ಕಾರ್ಯ ಪ್ರಾರಂಭವಾಗಿದ್ದು, ಇದಕ್ಕಾಗಿ 157 ಕೋಟಿ ರುಪಾಯಿ ಬಿಡುಗಡೆಯಾಗಿದೆ. 150 ಕೋಟಿ ವೆಚ್ಚದಲ್ಲಿ ನಗರ ಪ್ರದೇಶದ ಪ್ರತಿ ವಾರ್ಡುಗಳಲ್ಲಿ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾರ್ಯ ನಡೆಯುತ್ತಿದೆ. ಸಿ.ಎಂ. ಲಿಂಗಪ್ಪರವರು ಬಡವರಿಗೆ ನಿವೇಶನ ಕೊಟ್ಟಿದ್ದು, ಹೊರತುಪಡಿಸಿದರೆ ಆನಂತರ ಯಾರು ನಿವೇಶನ ಹಂಚಿಕೆ ಮಾಡಿಯೇ ಇಲ್ಲ. ಈಗ ನಾನು 200 ಎಕರೆ ಸರ್ಕಾರಿ ಜಮೀನು ಗುರುತಿಸಿ 6 ಸಾವಿರ ನಿವೇಶನ ರಹಿತರಿಗೆ ನಿವೇಶನ ನೀಡುವ ಕೆಲಸ ನಡೆಯುತ್ತಿದೆ ಎಂದು ಹೇಳಿದರು.ಮಾಯಗಾನಹಳ್ಳಿಗೆ 8 ಕೋಟಿ 30 ಲಕ್ಷ ಅನುದಾನ:ಮಾಯಗಾನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ರಸ್ತೆ, ಚರಂಡಿ, ಅಂಗನವಾಡಿ ನಿರ್ಮಾಣ, ಆಸ್ಪತ್ರೆ ದುರಸ್ಥಿ, ಕೆರೆ ಅಭಿವೃದ್ಧಿ ಸೇರಿದಂತೆ ವಿವಿಧ ಕಾಮಗಾರಿಗಳಿಗೆ 8 ಕೋಟಿ 30 ಲಕ್ಷ ರುಪಾಯಿ ಅನುದಾನ ಬಿಡುಗಡೆ ಮಾಡಿದ್ದೇನೆ ಎಂದು ತಿಳಿಸಿದರು.ಇಕ್ಬಾಲ್ ಹುಸೇನ್ ಮಾದರಿ ಶಾಸಕ:

ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಚೇತನ್ ಕುಮಾರ್ ಮಾತನಾಡಿ, ಕಳೆದ 10 ವರ್ಷ ದಿಂದ ನೆನೆಗುದಿಗೆ ಬಿದ್ದಿದ್ದ ಮಾಯಗಾನಹಳ್ಳಿ - ಕೆಂಜಿಗಾರನಹಳ್ಳಿ ರಸ್ತೆ ಕಾಮಗಾರಿಗೆ ಚಾಲನೆ ನೀಡುವ ಮೂಲಕ ಶಾಸಕರು ಯಾವ ಕೆಲಸ ಮಾಡಲು ಇಚ್ಛಾಶಕ್ತಿ ಇರಬೇಕು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಸರ್ಕಾರಿ ರಜೆ ದಿನವನ್ನು ಲೆಕ್ಕಿಸದೆ ಕ್ಷೇತ್ರದಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.ಬಕ್ಷಿಕೆರೆ ಒಡೆದು ನಗರ ಪ್ರದೇಶದಲ್ಲಿ ಪ್ರವಾಹ ಉಂಟಾಗಿತ್ತು. ಆಗ ಜನಪ್ರತಿನಿಧಿಗಳು ಬಂದು ನೋಡಿ ಹೋದರೆ ವಿನಾಃ ಕೆರೆ ಏರಿಯನ್ನು ಸರಿಪಡಿಸುವ ಕೆಲಸ ಮಾಡಲಿಲ್ಲ. ಆದರೆ, ಶಾಸಕ ಇಕ್ಬಾಲ್ ಹುಸೇನ್ ರವರು ವಿಶೇಷ ಕಾಳಜಿ ವಹಿಸಿ ಬಕ್ಷಿಕೆರೆಯನ್ನು ಅಭಿವೃದ್ಧಿ ಪಡಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ ಎಂದು ಹೇಳಿದರು.ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಎಚ್.ರಾಜು ಮಾತನಾಡಿ, ಶಾಸಕರ ಜೊತೆ ಅನೇಕ ಭಾಗಗಳಲ್ಲಿ ಪ್ರವಾಸ ಮಾಡಿದ್ದೇನೆ. ಅವರಷ್ಟು ಸಕ್ರಿಯವಾಗಿ ಕೆಲಸ ಮಾಡುವ ಮತ್ತೊಬ್ಬ ಶಾಸಕನನ್ನು ನಾನು ನೋಡಿಲ್ಲ. ಕ್ಷೇತ್ರದಲ್ಲಿ ಬೇರೆ ಯಾರು ಮಾಡದ ಅಭಿವೃದ್ಧಿ ಕಾರ್ಯಗಳನ್ನು ಇಕ್ಬಾಲ್ ಹುಸೇನ್ ರವರು ಮಾಡಿ ತೋರಿಸುತ್ತಿದ್ದಾರೆ.ಡಿಕೆ ಸಹೋದರರು ಅವರಿಗೆ ಬೆನ್ನುಲುಬಾಗಿ ನಿಂತು ಕೆಲಸ ಮಾಡಿಸುತ್ತಿದ್ದಾರೆ ಎಂದು ತಿಳಿಸಿದರು.ಕಾಂಗ್ರೆಸ್ ಮುಖಂಡ ಲೋಕೇಶ್ ಮಾತನಾಡಿದರು. ಜಿಲ್ಲಾ ಗ್ಯಾರಂಟಿ ಯೋಜನೆ ಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ.ರಾಜು, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ರೇವಣ್ಣ, ಗ್ರಾಪಂ ಮಾಜಿ ಅಧ್ಯಕ್ಷ ರಂಜಿತ್ ಕುಮಾರ್ , ಮುಖಂಡರಾದ ರವಿ, ರಾಮಣ್ಣ, ಜಯರಾಮಣ್ಣ, ಚಿಕ್ಕಸ್ವಾಮಿ ಮತ್ತಿತರರು ಹಾಜರಿದ್ದರು.

...ಕೋಟ್ ...ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ ಎರಡು ವರ್ಷಗಳಲ್ಲಿ ರಾಮನಗರ ಕ್ಷೇತ್ರಕ್ಕೆ ಒಂದೂವರೆ ಸಾವಿರ ಕೋಟಿ ರುಪಾಯಿ ಅನುದಾನ ತಂದಿದ್ದೇನೆ. ಆ ಅನುದಾನದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಅವುಗಳಲ್ಲಿ ಅನೇಕ ಕಾಮಗಾರಿಗಳು ಪ್ರಗತಿ ಹಂತದಲ್ಲಿವೆ. ಸುಳ್ಳು ಹೇಳುವುದು ಕಾಂಗ್ರೆಸ್ ಪಕ್ಷದ ಜಾಯಮಾನ ಅಲ್ಲ.- ಇಕ್ಬಾಲ್ ಹುಸೇನ್ , ಶಾಸಕ26ಕೆಆರ್ ಎಂಎನ್ 1.ಜೆಪಿಜಿರಾಮನಗರ ತಾಲೂಕಿನ ಮಾಯಗಾನಹಳ್ಳಿಯಲ್ಲಿ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ಅಡಿಯಲ್ಲಿ ಮುಖ್ಯರಸ್ತೆಯಿಂದ ಕೆಂಜಿಗಾರನಹಳ್ಳಿ ಕಾಲೋನಿವರೆಗೆ ರಸ್ತೆ ನಿರ್ಮಾಣ ಕಾಮಗಾರಿಗೆ ಶಾಸಕ ಇಕ್ಬಾಲ್ ಹುಸೇನ್ ರವರು ಭೂಮಿ ಪೂಜೆ ನೆರವೇರಿಸಿದರು.