ಲಸಿಕಾ ಶಿಬಿರದಲ್ಲಿ ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಮೂಗಪ್ಪ ಹೇಳಿಕೆ
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಮಕ್ಕಳು ದೇಶದ ನಿಜವಾದ ಸಂಪತ್ತಾಗಿದ್ದು, ಅವರನ್ನು ಮಾರಕ ರೋಗಗಳಿಂದ ರಕ್ಷಿಸಲು ಆರೋಗ್ಯ ಇಲಾಖೆಯಿಂದ ನೀಡಲಾಗುವ ಲಸಿಕೆಗಳನ್ನು ತಪ್ಪದೇ ಕೊಡಿಸಬೇಕು ಎಂದು ಚಿತ್ರದುರ್ಗ ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ ಕರೆ ನೀಡಿದರು.ನಗರದ ವಿದ್ಯಾವಿಕಾಸ ಸಂಸ್ಥೆಯಲ್ಲಿ ಶುಕ್ರವಾರ ಆರೋಗ್ಯ ಇಲಾಖೆ ವತಿಯಿಂದ ಶಾಲಾ ಮಕ್ಕಳಿಗೆ ಹಮ್ಮಿಕೊಳ್ಳಲಾಗಿದ್ದ ಲಸಿಕಾ ಶಿಬಿರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಹಿಂದಿನ ಕಾಲದಲ್ಲಿ ಸಾಂಕ್ರಾಮಿಕ ರೋಗಗಳು ವ್ಯಾಪಕವಾಗಿ ಹರಡಿ ಅನೇಕ ಪ್ರಾಣಹಾನಿಗೆ ಕಾರಣವಾಗುತ್ತಿದ್ದವು. ಆದರೆ ವಿಜ್ಞಾನ ಮುಂದುವರಿದಂತೆ ಲಸಿಕೆಗಳು ಮಕ್ಕಳ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ಮಗು ಜನಿಸಿದಂದಿನಿಂದ 16 ವರ್ಷದವರೆಗೆ 13 ಮಾರಕ ರೋಗಗಳ ವಿರುದ್ಧ ಸರ್ಕಾರ ಸಂಪೂರ್ಣ ಉಚಿತವಾಗಿ ಗುಣಮಟ್ಟದ ಲಸಿಕೆಗಳನ್ನು ನೀಡುತ್ತಿದೆ ಎಂದು ತಿಳಿಸಿದರು.ಡಿ.ಪಿ.ಟಿ ಲಸಿಕೆಯು ಗಂಟಲುಮಾರಿ, ಧನುರ್ವಾಯು ಮತ್ತು ನಾಯಿಕೆಮ್ಮು ರೋಗಗಳ ವಿರುದ್ಧ ರಕ್ಷಣೆ ನೀಡಿದರೆ, ಟಿ.ಡಿ ಲಸಿಕೆಯು ಗಂಟಲುಮಾರಿ ಹಾಗೂ ಧನುರ್ವಾಯು ರೋಗಗಳಿಂದ ಮಗುವನ್ನು ಕಾಯುತ್ತದೆ. ಶಾಲೆಗಳಲ್ಲಿ ನೀಡಲಾಗುವ ಈ ಲಸಿಕೆಗಳಿಂದ ಯಾವುದೇ ಮಗು ವಂಚಿತವಾಗದಂತೆ ಪೋಷಕರು ಜಾಗ್ರತೆ ವಹಿಸಬೇಕು ಎಂದರು.
ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಟಿ. ಶ್ರೀನಿವಾಸಮೂರ್ತಿ ಮಾತನಾಡಿ, ವಿದ್ಯಾರ್ಥಿಗಳು ಬಾಲ್ಯದಲ್ಲೇ ವೈಯಕ್ತಿಕ ಹಾಗೂ ಪರಿಸರ ಸ್ವಚ್ಛತೆಗೆ ಆದ್ಯತೆ ನೀಡುವುದರಿಂದ ಸಾಂಕ್ರಾಮಿಕ ರೋಗಗಳು ಹರಡುವುದನ್ನು ತಡೆಯಬಹುದು ಎಂದು ಸಲಹೆ ನೀಡಿದರು. ಶಿಬಿರದಲ್ಲಿ ಒಟ್ಟು 99 ಮಕ್ಕಳಿಗೆ ಡಿಪಿಟಿ ಹಾಗೂ 238 ಮಕ್ಕಳಿಗೆ ಟಿಡಿ ಲಸಿಕೆ ನೀಡಲಾಯಿತು.ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯ ಕಚೇರಿಯ ಬಿಪಿಎಂ ಮೆಹಬೂಬ್ ಆಲಿ, ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿಗಳಾದ ಭಾಗ್ಯಲಕ್ಷ್ಮಿ, ಎಂ.ಆರ್. ರೂಪ, ಎಚ್‌ಐಓ ಸುಪ್ರೀತಾ, ಎಲ್.ಡಿ.ಸಿ. ಐಶ್ವರ್ಯ, ಆಶಾ ಕಾರ್ಯಕರ್ತೆ ಕೌಸರ್, ಶಾಲೆಯ ಮುಖ್ಯ ಶಿಕ್ಷಕ ಎನ್.ಜಿ.ತಿಪ್ಪೇಸ್ವಾಮಿ ಹಾಗೂ ಸಹಶಿಕ್ಷಕರಾದ ಎಚ್.ಸೌಭಾಗ್ಯ, ಎಚ್.ದೀಪ, ಸಹನಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.