ಸಾರಾಂಶ
ಗೋವುಗಳ ರಕ್ಷಣೆ, ಸಾಕಣೆಯಿಂದ ಮಾತ್ರ ಆರೋಗ್ಯಕರ ಜೀವನ ಸಾಗಿಸಲು ಸಾಧ್ಯ
ಕಂಪ್ಲಿ: ಗೋವುಗಳ ರಕ್ಷಣೆ, ಸಾಕಣೆಯಿಂದ ಮಾತ್ರ ಆರೋಗ್ಯಕರ ಜೀವನ ಸಾಗಿಸಲು ಸಾಧ್ಯ ಎಂದು ಇಲ್ಲಿನ ಕಲ್ಯಾಣಿ ಚೌಕಿಮಠದ ಬಸವರಾಜ ಶಾಸ್ತ್ರಿ ಹೇಳಿದರು.
ಬಂಟ್ವಾಳ ತಾಲೂಕಿನ ಪುದು ಗ್ರಾಮದ ರಾಧಾ ಸುರಭಿ ಗೋಮಂದಿರ ರಾಷ್ಟ್ರೀಯ ಗೋಸೇವಾ ಸಂಸ್ಥಾನ ಟ್ರಸ್ಟ್ ಸಹಯೋಗದಲ್ಲಿ ಹಮ್ಮಿಕೊಂಡಿರುವ ನಂದಿ ರಥಯಾತ್ರೆಯನ್ನು ಉದ್ಭವ ಮಹಾಗಣಪತಿ ದೇವಸ್ಥಾನದ ಬಳಿ ಗುರುವಾರ ಸ್ವಾಗತಿಸಿ ಅವರು ಮಾತನಾಡಿದರು.ಹಸುಗಳು ಎಲ್ಲ ಜೀವಿಗಳ ತಾಯಿ. ಗೋವುಗಳು 33 ಕೋಟಿ ದೇವತೆಗಳ ಆವಾಸ ಸ್ಥಾನ. ಅದು ಬ್ರಹ್ಮಾಂಡದಾದ್ಯಂತ ಭೌತಿಕ ಅಸ್ತಿತ್ವದಲ್ಲಿ ಸೃಷ್ಟಿಯನ್ನು ನಿರ್ವಹಿಸುತ್ತದೆ. ಗೋವುಗಳು ದೇವತೆಗಳ ದೇವತೆಗಳು ಮತ್ತು ಎಲ್ಲ ಐಶ್ವರ್ಯಗಳ ಆಶ್ರಯ. ಹಸುಗಳು ಎಲ್ಲ ರೀತಿಯ ಸಂತೋಷ ನೀಡುತ್ತವೆ. ಅಲ್ಲದೇ ಮನುಷ್ಯನಿಗೆ ಉತ್ತಮ ಆರೋಗ್ಯವನ್ನು ಕಲ್ಪಿಸುತ್ತದೆ. ಗೋವು ಸಂರಕ್ಷಣೆ ನಿರ್ಲಕ್ಷಿಸಿದ್ದರಿಂದ ವಿಷ ವರ್ತುಲದಲ್ಲಿ ಜೀವಿಸುವಂತಾಗಿದೆ. ಈ ದಿಸೆಯಲ್ಲಿ ಪ್ರತಿಯೊಬ್ಬರೂ ದೇಶಿಯ ಗೋವು ಸಂತತಿ ರಕ್ಷಣೆಗೆ ಮುಂದಾಗಬೇಕು ಎಂದರು.
ಇಲ್ಲಿನ ಉದ್ಭವ ಮಹಾ ಗಣಪತಿ ದೇವಸ್ಥಾನದಿಂದ ಆರಂಭಗೊಂಡ ನಂದಿ ರಥಯಾತ್ರೆ ಪ್ರಮುಖ ಬೀದಿಗಳಲ್ಲಿ ಸಾಗಿ ಅಂಬೇಡ್ಕರ್ ವೃತ್ತದಲ್ಲಿ ಸಮಾವೇಶಗೊಂಡಿತು. ರಥಯಾತ್ರೆಯ ಸಂಚಾಲಕ ಧನುಷ್, ನವೀನ್, ಪ್ರಭು, ಪ್ರಮುಖರಾದ ಡಿ. ಮಂಜೇಶ, ಹರಿಶಂಕರ, ವಿಷ್ಣು, ಎಚ್.ನಾಗರಾಜ, ಎಸ್.ಡಿ. ಬಸವರಾಜ, ಎಲಿಗಾರ ವೆಂಕಟರೆಡ್ಡಿ, ಯು.ಎಂ. ವಿದ್ಯಾಶಂಕರ, ಅರವಿ ಅಮರೇಶ, ವಿಶ್ವ ಹಿಂದೂ ಪರಿಷತ್ ಸ್ವಯಂ ಸೇವಕರು ಇದ್ದರು.