ನಿಯಮಿತ ಆಹಾರ ಪದ್ಧತಿ, ಶಿಸ್ತುಬದ್ಧ ಜೀವನದಿಂದ ಆರೋಗ್ಯವಂತ ಬದುಕು: ಡಾ.ಪ್ರಗತಿ

| Published : Dec 24 2024, 12:46 AM IST

ನಿಯಮಿತ ಆಹಾರ ಪದ್ಧತಿ, ಶಿಸ್ತುಬದ್ಧ ಜೀವನದಿಂದ ಆರೋಗ್ಯವಂತ ಬದುಕು: ಡಾ.ಪ್ರಗತಿ
Share this Article
  • FB
  • TW
  • Linkdin
  • Email

ಸಾರಾಂಶ

ಅನಿಮಿತ ಆಹಾರ ಸೇವನೆ ಮಾಡಿ ಶಿಸ್ತು ಬದ್ಧ ಜೀವನ ನಡೆಸದೇ ವ್ಯರ್ಥ ಕಾಲಹರಣ ಮಾಡುವುದರಿಂದ ನಮ್ಮ ದೇಹದ ತೂಕವು ಹೆಚ್ಚಾಗಿ ಬೊಜ್ಜು ಬೆಳೆಯುವುದರಿಂದ ರಕ್ತದೊತ್ತಡ, ಸಕ್ಕರೆ ಕಾಯಿಲೆ, ಕ್ಯಾನ್ಸರ್, ಮೂಳೆ ರೋಗ, ಸಂಧಿ ನೋವು ಸೇರಿದಂತೆ ಹಲವು ಕಾಯಿಲೆಗಳಿಗೆ ನಾವು ತುತ್ತಾಗಿ ಅಕಾಲಿಕವಾಗಿ ಸಾವಿಗೆತುತ್ತಾಗಬೇಕಾಗುತ್ತದೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ನಿಯಮಿತ ಆಹಾರ ಪದ್ಧತಿ ಹಾಗೂ ಶಿಸ್ತು ಬದ್ಧ ಜೀವನದೊಂದಿಗೆ ರೋಗಮುಕ್ತ ಆರೋಗ್ಯವಂತ ಬದುಕು ನಡೆಸುವಂತೆ ತಜ್ಞ ವೈದ್ಯೆ ಡಾ.ಪ್ರಗತಿ ಕರೆ ನೀಡಿದರು.

ತಾಲೂಕಿನ ಮುರುಕನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಪ್ರಗತಿ ಆಯುರ್ವೇದಾಲಯದ ವತಿಯಿಂದ ಆಯೋಜಿಸಿದ್ದ ಆರೋಗ್ಯ ಉಚಿತ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಅನಿಮಿತ ಆಹಾರ ಸೇವನೆ ಮಾಡಿ ಶಿಸ್ತು ಬದ್ಧ ಜೀವನ ನಡೆಸದೇ ವ್ಯರ್ಥ ಕಾಲಹರಣ ಮಾಡುವುದರಿಂದ ನಮ್ಮ ದೇಹದ ತೂಕವು ಹೆಚ್ಚಾಗಿ ಬೊಜ್ಜು ಬೆಳೆಯುವುದರಿಂದ ರಕ್ತದೊತ್ತಡ, ಸಕ್ಕರೆ ಕಾಯಿಲೆ, ಕ್ಯಾನ್ಸರ್, ಮೂಳೆ ರೋಗ, ಸಂಧಿ ನೋವು ಸೇರಿದಂತೆ ಹಲವು ಕಾಯಿಲೆಗಳಿಗೆ ನಾವು ತುತ್ತಾಗಿ ಅಕಾಲಿಕವಾಗಿ ಸಾವಿಗೆತುತ್ತಾಗಬೇಕಾಗುತ್ತದೆ ಎಂದರು.ಈ ಜನ್ಮ ದೇವರು ಕೊಟ್ಟ ವರ. ಅಮೂಲ್ಯ ಜೀವನ ಕಳೆದುಕೊಳ್ಳುವ ಜೊತೆಗೆ ನಮ್ಮನ್ನೇ ನಂಬಿರುವ ನಮ್ಮ ಕುಟುಂಬ ವರ್ಗದವರನ್ನು ನಡು ನೀರಿನಲ್ಲಿಯೇ ಕೈಬಿಟ್ಟು ಅನಾಥರನ್ನಾಗಿ ಮಾಡಿ ಹೋಗಬೇಕಾಗುತ್ತದೆ. ಆದ್ದರಿಂದ ನಾವುಗಳು ಸಾಧ್ಯವಾದಷ್ಟು ಮಟ್ಟಿಗೆ ಶಿಸ್ತು ಬದ್ಧ ಜೀವನ ನಡೆಸುವ ಜೊತೆಗೆ ಯೋಗ, ಧ್ಯಾನ ಮಾಡಿ ಬೆಳಗ್ಗೆ ಮತ್ತು ಸಂಜೆ ವಾಕಿಂಗ್ ಮಾಡುವ ಅಭ್ಯಾಸವನ್ನು ಜೀವನದಲ್ಲಿ ಅಳವಡಿಸಿ ಕೊಳ್ಳಲೇಬೇಕಾದ ಅನಿವಾರ್ಯ ಪರಿಸ್ಥಿತಿಯಲ್ಲಿ ಇಂದು ನಾವಿದ್ದೇವೆ ಎಂದರು.

ಬಾಯಿ ಚಪಲಕ್ಕೆ ನಾವು ಆಸೆಪಟ್ಟು ಎಣ್ಣೆ ಪದಾರ್ಥಗಳು, ಬೇಕರಿ ಹಾಗೂ ರಸ್ತೆ ಬದಿಯಲ್ಲಿ ಮಾರಾಟ ಮಾಡುವ ಕುರುಕಲು ತಿಂಡಿಗಳ ವ್ಯಾಮೋಹಕ್ಕೆ ಒಳಗಾದರೆ ಜೀವನಪಯಂತ ಅನಾರೋಗ್ಯದಿಂದ ಬಳಲಿ ಇಹಲೋಕವನ್ನು ತ್ಯಜಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಸೊಪ್ಪು, ತರಕಾರಿ, ಹಾಲು ಮೊಟ್ಟೆ, ಹಣ್ಣು ಹಂಪಲುಗಳು ಸೇರಿದಂತೆ ಪೌಷ್ಟಿಕಾಂಶದಿಂದ ಕೂಡಿರುವ ಆಹಾರ ಪದಾರ್ಥಗಳನ್ನು ಸೇವಿಸಿ ಆರೋಗ್ಯವಂತರಾಗಿ ಸಮೃದ್ಧ ಸ್ವಾಭಿಮಾನಿ ಜೇವನ ನಡೆಸಿ ಇತರರಿಗೆ ಮಾದರಿಯಾಗಬೇಕು ಎಂದರು.

ಗ್ರಾಮೀಣ ಪ್ರದೇಶದಲ್ಲಿ ಪೌಷ್ಟಿಕಾಂಶದ ಕೊರತೆಯಿಂದ ತಾಯಿ ಮತ್ತು ಮಕ್ಕಳ ಮರಣ ಪ್ರಮಾಣವು ಹೆಚ್ಚಾಗುತ್ತಿದೆ. ಬಾಣಂತಿಯರು ಹಾಗೂ ಮಗುವಿಗೆ ಪೌಷ್ಟಿಕಾಂಶದ ಕೊರತೆಯಾಗದಂತೆ ಎಚ್ಚರ ವಹಿಸಬೇಕು ಎಂದರು.

ಈ ವೇಳೆ ತಜ್ಞ ವೈದ್ಯರಾದ ಡಾ.ಚೈತ್ರಾ, ಡಾ.ಸುಷ್ಮ, ಡಾ.ವಿಕಾಸ್, ಡಾ.ವರ್ಷ ಉಚಿತ ಆರೋಗ್ಯ ಶಿಬಿರಕ್ಕೆ ಆಗಮಿಸಿ ತಪಾಸಣೆಗೆ ಒಳಗಾದ ಗ್ರಾಮೀಣ ಪ್ರದೇಶದ ಕೃಷಿ ಕೂಲಿ ಕಾರ್ಮಿಕರು, ಬಡ ಜನರು ಹಾಗೂ ಹಿರಿಯ ನಾಗರಿಕರಿಗೆ ಔಷಧಗಳನ್ನು ಉಚಿತವಾಗಿ ವಿತರಿಸಿದರು.