ಸಾರಾಂಶ
ಗಜೇಂದ್ರಗಡ: ಪಟ್ಟಣದ ಎಸ್.ಎಂ.ಭೂಮರಡ್ಡಿ ಪದವಿ ಕಾಲೇಜಿನಲ್ಲಿ ಬಿಎ ಹಾಗೂ ಬಿಕಾಂ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ, ಸಾಂಸ್ಕೃತಿಕ, ಎನ್‌ಎಸ್‌ಎಸ್ ಮತ್ತು ರೆಡ್ ಕ್ರಾಸ್ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ಸೂಡಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಹಿರಿಯ ವೈದ್ಯಾಧಿಕಾರಿ ಶರಣು ಗಾಣಿಗೇರ ಮಾತನಾಡಿ, ಇಂದಿನ ವಿದ್ಯಾರ್ಥಿಗಳು ಸಾಮಾಜಿಕವಾಗಿ ಸಬಲರಾಗಲು ಶಿಕ್ಷಣ ಅವಶ್ಯಕತೆಯಿದೆ. ವಿದ್ಯಾರ್ಥಿಗಳು ಯಾವುದೇ ಕೆಟ್ಟ ಚಟಗಳಿಗೆ, ಆಮಿಷಗಳಿಗೆ ಬಲಿಯಾಗದೆ ಉತ್ತಮ ಶಿಕ್ಷಣ ಪಡೆದು ದೈಹಿಕವಾಗಿ ಕ್ಷಮತೆ ಹೊಂದಿ ರಾಷ್ಟ್ರದ ಭವಿಷ್ಯದ ನಾಯಕರಾಗಬೇಕು ಎಂದ ಅವರು, ಉತ್ತಮ ಆರೋಗ್ಯವಂತ ಯುವ ಸಮೂಹವೇ ನಮ್ಮ ರಾಷ್ಟ್ರದ ನಿಜವಾದ ಸಂಪತ್ತು. ಓದುವ ಹವ್ಯಾಸ ಬೆಳೆಸಿಕೊಂಡರೆ ಕೆಎಎಸ್, ಐಎಎಸ್, ಐಪಿಎಸ್ ಗಳಂತಹ ಉತ್ತಮ ಅಧಿಕಾರಿಗಳಾಗಲು ಸಾಧ್ಯವಾಗುತ್ತದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಪ್ರತಿಭಾವಂತರಾಗಿದ್ದು, ದೈಹಿಕವಾಗಿಯೂ ಸಹ ಸದೃಢರಾಗಿರುತ್ತಾರೆ. ಹೀಗಾಗಿ ಮಾನಸಿಕವಾಗಿ ಸಮರ್ಥರಾಗಲು ಪ್ರಯತ್ನಿಸಿದರೆ ಒಳ್ಳೆಯ ಅಧಿಕಾರಗಳಾಗಿ ಬದುಕನ್ನು ರೂಪಿಸಿಕೊಳ್ಳಲು ಸಾಧ್ಯ ಎಂದರು.ಹಿರಿಯ ಉಪನ್ಯಾಸಕ ಬಿ.ವಿ. ಮುನವಳ್ಳಿ ಮಾತನಾಡಿ, ವಿದ್ಯಾಲಯದಲ್ಲಿ ಕಲಿತ ಹಲವಾರು ವಿದ್ಯಾರ್ಥಿಗಳು ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಪ್ರಸ್ತುತ ಪದವಿ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಕ್ರೀಡಾ ವಿಶ್ವವಿದ್ಯಾಲಯ ಮಟ್ಟಕ್ಕೆ ಆಯ್ಕೆಯಾಗಿದ್ದು ಬಾಲ್ ಬ್ಯಾಡ್ಮಿಂಟನ್ ಎರಡು ವರ್ಷಗಳಿಂದ ವಿಶ್ವ ವಿದ್ಯಾಲಯ ಮಟ್ಟಕ್ಕೆ ಚಾಂಪಿಯನ್ನಾಗಿ ಹೊರಹೊಮ್ಮಿದ್ದಾರೆ. ಕಳೆದ ಬಾರಿ ನಮ್ಮ ಕಾಲೇಜಿನ ಬಾಲಕಿಯರ ತಂಡವು ವಿಶ್ವವಿದ್ಯಾಲಯ ಮಟ್ಟದ ಬಾಲ್ಮಿಂಟನ್ ಟೂರ್ನಿಯಲ್ಲಿ ತೃತೀಯ ಸ್ಥಾನ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಎನ್ ಎಸ್ ಎಸ್ ವಿಭಾಗದಿಂದ ನಮ್ಮ ಕಾಲೇಜಿನ ವಿದ್ಯಾರ್ಥಿಗಳು ರಾಜ್ಯ ಮತ್ತು ರಾಷ್ಟ್ರಮಟ್ಟದ ಎನ್‌ಎಸ್‌ಎಸ್ ಪಥಸಂಚನದಲ್ಲಿ ಭಾಗವಹಿಸಿ ಕಾಲೇಜಿನ ಕೀರ್ತಿ ಹೆಚ್ಚಿಸಿದ್ದಾರೆ ಎಂದರು.
ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಚಾರ್ಯ ಡಾ.ಎಸ್.ಎನ್.ಶಿವರೆಡ್ಡಿ ಮಾತನಾಡಿ, ಪದವಿ ಮಹಾವಿದ್ಯಾಲಯವದಲ್ಲಿ ವ್ಯಾಸಂಗ ಮಾಡಿರುವ ಸಾವಿರಾರು ಪ್ರತಿಭಾವಂತ ವಿದ್ಯಾರ್ಥಿಗಳು ತಮ್ಮ ಬದುಕನ್ನು ರೂಪಿಸಿಕೊಂಡು ಕುಟುಂಬಕ್ಕೆ ಆಧಾರವಾಗಿದ್ದಾರೆ ಎಂದರು.ಎನ್.ಎಸ್.ಎಸ್ ಅಧಿಕಾರಿ ಎಸ್.ಕೆ. ಕಟ್ಟಿಮನಿ, ಎಂ.ಎಲ್. ಕ್ವಾಟಿ, ಎಸ್.ಎಸ್. ಚುಂಚಾ, ಡಾ.ಎಸ್.ಎಚ್. ಪವಾರ, ಎಲ್.ಕೆ. ವದ್ನಾಳ್, ಎಲ್. ಕೆ. ಹಿರೇಮಠ, ಎಸ್.ವಿ. ಪತ್ತಾರ, ಮಹಾದೇವಿ ವಕ್ರಾಣಿ, ಯು.ಎಸ್. ತಿಮ್ಮನಗೌಡ ಸೇರಿದಂತೆ ಇತರರು ಇದ್ದರು.