ಕನ್ನಡಪ್ರಭ ವಾರ್ತೆ ಮಡಿಕೇರಿ
ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ ಬೋಧಕ ಆಸ್ಪತ್ರೆಯ ಕಿವಿ, ಮೂಗು ಗಂಟಲು ವಿಭಾಗ ವತಿಯಿಂದ ‘ವಿಶ್ವ ಶ್ರವಣ ದಿನ’ ಪ್ರಯುಕ್ತ ಮಂಗಳವಾರ ಸಂಸ್ಥೆಯ ಎರಡನೇ ವರ್ಷದ ಪದವಿ ವೈದ್ಯಕೀಯ ವಿದ್ಯಾರ್ಥಿಗಳಿಂದ ನಗರದ ರಾಜಾಸೀಟು ಉದ್ಯಾನವನ ಆವರಣದಲ್ಲಿ ಶ್ರವಣದ ಮಹತ್ವ ಕುರಿತು ಬೀದಿನಾಟಕ ಮೂಲಕ ಜಾಗೃತಿ ಮತ್ತು ಜಾಥಾ ನಡೆಯಿತು. ಜಾಗೃತಿ ಜಾಥಾಗೆ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ.ಎ.ಜೆ.ಲೋಕೇಶ್ ಚಾಲನೆ ನೀಡಿದರು. ಜಾಥಾವು ರಾಜಾಸೀಟು ರಸ್ತೆ ಮೂಲಕ ನಗರದ ಮಂಗೇರಿರ ಮುತ್ತಣ್ಣ ವೃತ್ತ, ಜನರಲ್ ಕೆ.ಎಸ್.ತಿಮ್ಮಯ್ಯ ವೃತ್ತದ ಮೂಲಕ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಬೋಧಕ ಆಸ್ಪತ್ರೆ ತಲುಪಿತು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಡಾ.ಎ.ಜೆ.ಲೋಕೇಶ್ ಅವರು ಕಿವಿ ಸಂಬಂಧಿತ ತೊಂದರೆಗಳಿಗೆ ಶೀಘ್ರ ಚಿಕಿತ್ಸೆ ಪಡೆಯುವ ಅಗತ್ಯತೆ ಹಾಗೂ ಹೆಚ್ಚು ಶಬ್ದದ ಮಟ್ಟದಲ್ಲಿ ಇಯರ್ ಪೋನ್ ಬಳಕೆ ತಪ್ಪಿಸುವ ಕುರಿತು ಸಲಹೆ ನೀಡಿದರು.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ಕುಮಾರ್ ಅವರು, 6 ವರ್ಷದೊಳಗಿನ ಮಕ್ಕಳಲ್ಲಿ ಶ್ರವಣದೋಷ ಉಂಟಾದಲ್ಲಿ ಅಗತ್ಯ ಶಸ್ತ್ರ ಚಿಕಿತ್ಸೆಯನ್ನು ಮಾಡಿಸಬಹುದಾಗಿದೆ. ಸುಮಾರು 8 ಲಕ್ಷ ರು. ವೆಚ್ಚವಾಗಲಿದ್ದು, ಸರ್ಕಾರವೇ ಭರಿಸಲಿದೆ ಎಂದರು.
ಜಿಲ್ಲಾ ಸರ್ಜನ್ ಡಾ.ನಂಜುಂಡಯ್ಯ ಅವರು ಪ್ರತಿದಿನ ನಡೆಯುತ್ತಿರುವ ನವಜಾತ ಶಿಶುಗಳ ಶ್ರವಣ ತಪಾಸಣೆ, ಶೀಘ್ರ ಪತ್ತೆ ಮತ್ತು ಪುನರ್ವಸತಿಯ ಮಹತ್ವ ವಿವರಿಸಿದರು.ಶ್ರವಣ ಬಗ್ಗೆ ತಿಳಿದವರೇ ತಪ್ಪು ಮಾಡುತ್ತಿದ್ದಾರೆ. ಹುಟ್ಟಿದ ಎಲ್ಲಾ ಮಕ್ಕಳಿಗೂ ಶ್ರವಣ ಪರೀಕ್ಷೆ ಮಾಡಬೇಕು. ಶ್ರವಣ ದೋಷ ಉಂಟಾದಲ್ಲಿ ಇಡೀ ಕುಟುಂಬವೇ ಪರಿತಪಿಸಬೇಕಾಗುತ್ತದೆ. ಇದರಿಂದ ಸಮಾಜಕ್ಕೂ ನಷ್ಟ, ಆದ್ದರಿಂದ ಶ್ರವಣ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದರು. ಸ್ಥಾನಿಕ ವೈದ್ಯಾಧಿಕಾರಿ ಡಾ.ಅಭಿನಂದನ್ ಮಾತನಾಡಿ, ಪ್ರತಿಯೊಬ್ಬರ ಸಮೂಹ ಸಂವಹನಕ್ಕೆ ಶ್ರವಣ ಅತೀ ಮುಖ್ಯ ಅಂಗವಾಗಿದೆ. ಆದ್ದರಿಂದ ಈ ಬಗ್ಗೆ ಉದಾಸೀನ ಮಾಡದೆ ತಜ್ಞ ವೈದ್ಯರಿಂದ ಪರೀಕ್ಷಿಸಿ ಕೊಳ್ಳಬೇಕು ಎಂದರು.ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಕಿವಿ, ಮೂಗು ಮತ್ತು ಗಂಟಲು ವಿಭಾಗದ ಮುಖ್ಯಸ್ಥ ಡಾ.ಶ್ವೇತಾ, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಡಾ.ಪೂಜಾ ಮಾಹಿತಿ ನೀಡಿದರು.ಜಾಗೃತಿ ಅಭಿಯಾನದ ಭಾಗವಾಗಿ ಆಯೋಜಿಸಲಾದ ಪೋಸ್ಟರ್ ಹಾಗೂ ಮೀಮ್ಸ್ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸಮುದಾಯದಲ್ಲಿ ಕಿವಿ ಆರೈಕೆಗೆ ಆದ್ಯತೆ ನೀಡುವ ಬಗ್ಗೆ ಪರಿಣಾಮಕಾರಿಯಾಗಿ ಮಾಹಿತಿ ನೀಡಲಾಯಿತು. ಶ್ರವಣ ಶಕ್ತಿ ದೋಷ ಜಿಲ್ಲಾ ಕಾರ್ಯಕ್ರಮ ಅಧಿಕಾರಿ ಡಾ.ಸನತ್ ಕುಮಾರ್, ಡಾ.ಸಾತ್ಯಕಿ, ಡಾ.ನಳಿನ, ಡಾ.ಶರತ್ ಕುಮಾರ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಾಂತಿ, ಡಾ.ಮೆರಿನ್ ನಿರೂಪಿಸಿದರು, ವಂದಿಸಿದರು.
ನಗರದ ರಾಜಾಸೀಟು ಉದ್ಯಾನವನ ಬಳಿ ನಡೆದ ಬೀದಿ ನಾಟಕದೊಂದಿಗೆ ಪ್ರಾರಂಭವಾಯಿತು. ಕಿವಿ ಆರೋಗ್ಯದ ನಿರ್ಲಕ್ಷ್ಯ, ಹೆಚ್ಚು ಶಬ್ದದ ಮಟ್ಟದಲ್ಲಿ ಇಯರ್ ಫೋನ್‍ಗಳ ಬಳಕೆ ಹಾಗೂ ಸಮಯಕ್ಕೆ ಸರಿಯಾದ ವೈದ್ಯಕೀಯ ಚಿಕಿತ್ಸೆ ಪಡೆಯುವ ಅಗತ್ಯತೆಯನ್ನು ನಾಟಕದ ಮೂಲಕ ಪರಿಣಾಮಕಾರಿಯಾಗಿ ತಿಳಿಸಲಾಯಿತು.