ದಾವಣಗೆರೆ: ಹರಿಹರ ಪಂಚಮಸಾಲಿ ಪೀಠದ ಉಚ್ಚಾಟಿತ ಶ್ರೀ ವಚನಾನಂದ ಸ್ವಾಮೀಜಿ ವಿರುದ್ಧ ದಾಖಲಾದ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಾಮೀಜಿ ಜಾಮೀನು ಅರ್ಜಿ ವಿಚಾರಣೆಯನ್ನು ಶುಕ್ರವಾರ ದಾವಣಗೆರೆ ಜಿಲ್ಲಾ ವಿಶೇಷ ಪೋಕ್ಸೋ ನ್ಯಾಯಾಲಯದ ಜು.4ಕ್ಕೆ ಮುಂದೂಡಿದೆ.
ನಗರದ ಜಿಲ್ಲಾ ವಿಶೇಷ ಪೋಕ್ಸೋ ನ್ಯಾಯಾಲಯಕ್ಕೆ ಜಾಮೀನು ಕೋರಿ ವಚನಾನಂದ ಸ್ವಾಮೀಜಿ ಜಾಮೀನು ಅರ್ಜಿ ವಿಚಾರಣೆಯಲ್ಲಿ ಸ್ವಾಮೀಜಿ ಪರ ವಕೀಲರ ವಾದ ಆಲಿಸಿದ ನ್ಯಾಯಾಧೀಶರು ವಿಚಾರಣೆಯನ್ನು ಜುಲೈ 4ರಂದು ಶನಿವಾರಕ್ಕೆ ಮುಂದೂಡಿದರು. ಶನಿವಾರ ವಿಚಾರಣೆಯಲ್ಲಿ ಸರ್ಕಾರಿ ಅಭಿಯೋಜಕರು ವಾದ ಮಂಡಿಸಲಿದ್ದಾರೆ.ಸ್ವಾಮೀಜಿ ಪರ ವಕೀಲ ಎಸ್.ವಿ.ಪಾಟೀಲ ಜಾಮೀನು ಕೋರಿ ಶುಕ್ರವಾರ ವಾದ ಮಂಡಿಸಿದರು. ಬಳಿಕ ನ್ಯಾಯಾಧೀಶರು ತಕರಾರು ಅರ್ಜಿ ಸಲ್ಲಿಸಿದ ಸರ್ಕಾರದ ಪರ ಅಭಿಯೋಜಕರಿಗೆ ಶನಿವಾರ ವಾದ ಮಂಡಿಸಲು ಅವಕಾಶ ನೀಡಿ, ವಿಚಾರಣೆ ಮುಂದೂಡಿದರು. ಸಂತ್ರಸ್ಥ ಬಾಲಕರು, ಬಾಲಕನ ತಾಯಿ ಶುಕ್ರವಾರದ ವಿಚಾರಣೆಯಲ್ಲಿ ಭಾಗವಹಿಸಿದ್ದರು. ಶನಿವಾರ ಮಧ್ಯಾಹ್ನ 3 ಗಂಟೆಗೆ ಸ್ವಾಮೀಜಿ ಜಾಮೀನು ಅರ್ಜಿ ವಿಚಾರಣೆಯನ್ನು ನ್ಯಾಯಾಲಯ ಕೈಗೆತ್ತಿಕೊಳ್ಳಲಿದೆ.
ವಚನಾನಂದ ಸ್ವಾಮೀಜಿಗೆ ಜಾಮೀನು ಮಂಜೂರು ಮಾಡದಂತೆ ಸಂತ್ರಸ್ಥ ಬಾಲಕನ ತಾಯಿಯ ಪರವಾಗಿ ವಕೀಲರು ಪ್ರತ್ಯೇಕವಾಗಿ ತಕರಾರು ಅರ್ಜಿ ಸಲ್ಲಿಸಿದ್ದು, ಶನಿವಾರ ಅಥವಾ ಸೋಮವಾರ ತಕರಾರು ಅರ್ಜಿ ಸಲ್ಲಿಸಿದ ವಕೀಲರಿಗೆ ವಾದ ಮಂಡಿಸಲು ಅವಕಾಶ ಸಿಗುವ ಸಾಧ್ಯತೆ ಇದೆ ಎನ್ನಲಾಗಿದೆ.ಹರಿಹರದ ಪಂಚಮಸಾಲಿ ಮಠದಲ್ಲಿದ್ದ 16 ವರ್ಷದ ಅಪ್ರಾಪ್ತ ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇರೆಗೆ ಶ್ರೀ ವಚನಾನಂದ ಸ್ವಾಮೀಜಿ ವಿರುದ್ಧ ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ. ಇದಕ್ಕೂ ಮುನ್ನವೇ ವಚನಾನಂದ ಸ್ವಾಮೀಜಿ ನಿರೀಕ್ಷಣಾ ಜಾಮೀನು ಪಡೆದಿದ್ದರು. ಸಂತ್ರಸ್ಥ ಬಾಲಕನ ತಾಯಿ ಹೈಕೋರ್ಟ್ ಮೆಟ್ಟಿಲೇರಿದ್ದರಿಂದ ಇದು ರದ್ದಾಗಿತ್ತು.
- - -
(ಫೋಟೋ: ವಚನಾನಂದ ಸ್ವಾಮೀಜಿ)