ಸಾರಾಂಶ
ಬೆಂಗಳೂರು : ರಾಜ್ಯದಲ್ಲಿ ಹೃದಯಾಘಾತದ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಶುಕ್ರವಾರ ಮತ್ತೆ ನಾಲ್ವರು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.
ಹಾಸನ ಜಿಲ್ಲೆಯಲ್ಲಿ ಶುಕ್ರವಾರ ಮತ್ತಿಬ್ಬರು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಹಾಸನದ ವಿದ್ಯಾನಗರ ನಿವಾಸಿ 55 ವರ್ಷದ ವಿಮಲಾ ಹಾಗೂ ಹಾಸನ ತಾಲೂಕಿನ ಚಿಟ್ಟನಹಳ್ಳಿಯ 21 ವರ್ಷದ ಮದನ್ ಸಾವನ್ನಪ್ಪಿದವರು. ವಿಮಲಾಗೆ ಇದ್ದಕ್ಕಿದ್ದಂತೆ ಎದೆನೋವು ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ಸಾಗಿಸುವ ದಾರಿಮಧ್ಯೆ ಅಸುನೀಗಿದ್ದಾರೆ. ಮದನ್, ತನ್ನ ಬಾವನ ಮನೆಯಿಂದ ಬೈಕಿನಲ್ಲಿ ಬರುವಾಗ ಕುಸಿದು ಬಿದ್ದಿದ್ದು, ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಬೆಂಗಳೂರಿನಲ್ಲಿ ನಡೆಯುತ್ತಿರುವ ರೈತಪರ ಹೋರಾಟದಲ್ಲಿ ಭಾಗವಹಿಸಲು ತೆರಳುತ್ತಿದ್ದಾಗ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಕುರುಬರಹುಂಡಿ ಗ್ರಾಮದ ರೈತ ಈಶ್ವರ (55) ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಈಶ್ವರ ಅವರು ಮೈಸೂರಿನಿಂದ ಬೆಂಗಳೂರಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಸಂಗೊಳ್ಳಿ ರಾಯಣ್ಣ ಸರ್ಕಲ್ ಬಳಿ ಕುಸಿದ್ದು ಬಿದ್ದಿದ್ದಾರೆ. ಕೂಡಲೇ ಹತ್ತಿರದ ಶೇಷಾದ್ರಿಪುರಂನ ಅಪೋಲೋ ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ.
ಮಂಡ್ಯ ಜಿಲ್ಲೆ ಹಲಗೂರು ಪಟ್ಟಣ ಸಮೀಪದ ಬಾಳೆಹೊನ್ನಿಗ ಗ್ರಾಮದಲ್ಲಿ ಶುಕ್ರವಾರ ಬೆಳಗ್ಗೆ ಶೀಲಾ (38) ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಮನೆಗೆ ನೀರು ತರಲು ಕೊಳಾಯಿ ಹತ್ತಿರ ತೆರಳಿದ್ದ ಶೀಲಾ, ನೀರು ಹಿಡಿಯುತ್ತಿದ್ದಾಗ ಕೆಳಕ್ಕೆ ಕುಸಿದು ಬಿದ್ದು, ಕೊನೆಯುಸಿರೆಳೆದಿದ್ದಾರೆ.
ಈ ಮಧ್ಯೆ, ಕಲಬುರಗಿಯಲ್ಲಿ ಕರ್ತವ್ಯಕ್ಕೆ ಹೊರಟಿದ್ದ ಪೊಲೀಸ್ ಇನ್‌ಸ್ಪೆಕ್ಟರ್‌ಗೆ ಹೃದಯಾಘಾತವಾಗಿದ್ದು, ಅವರನ್ನು ಬೆಂಗಳೂರಿಗೆ ಶಿಫ್ಟ್ ಮಾಡಲಾಗಿದೆ. ಕಲಬುರಗಿಯ ರಾಘವೇಂದ್ರ ಠಾಣೆ ಸರ್ಕಲ್ ಇನ್‌ಸ್ಪೆಕ್ಟರ್ ಕುಬೇರ ರಾಯಮಾನೆಗೆ ಶುಕ್ರವಾರ ಬೆಳಗ್ಗೆ ಎದೆನೋವು ಕಾಣಿಸಿಕೊಂಡಿದ್ದು, ಕಲಬುರಗಿ ಖಾಸಗಿ ಆಸ್ಪತ್ರೆಯಲ್ಲಿ ತಪಾಸಣೆ ನಡೆಸಿ, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಶಿಫ್ಟ್ ಮಾಡಲಾಗಿದೆ.