ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ ಡಾ। ಮಂಜುನಾಥ್‌ಗೆ ಬೀಳ್ಕೊಡುಗೆ

| Published : Jan 31 2024, 02:17 AM IST / Updated: Jan 31 2024, 11:56 AM IST

ಸಾರಾಂಶ

ಯಾವ ಖಾಸಗಿ ಆಸ್ಪತ್ರೆಗಳಿಗೂ ಕಡಿಮೆ ಇಲ್ಲದಂತೆ ಏಷ್ಯಾದಲ್ಲೇ ಅತಿ ದೊಡ್ಡ ಆಸ್ಪತ್ರೆಯಾಗಿ ಜಯದೇವ ಹೃದ್ರೋಗ ಸಂಸ್ಥೆ ಬೆಳೆಯಲು ಶ್ರಮಿಸಿದ್ದ ನಿರ್ದೇಶಕ ಡಾ.ಸಿ.ಎನ್‌.ಮಂಜುನಾಥ್‌ ಅವರಿಗೆ ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ಭಾರವಾದ ಹೃದಯದಿಂದ ಬೀಳ್ಕೊಡುಗೆ ನೀಡಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಯಾವ ಖಾಸಗಿ ಆಸ್ಪತ್ರೆಗಳಿಗೂ ಕಡಿಮೆ ಇಲ್ಲದಂತೆ ಏಷ್ಯಾದಲ್ಲೇ ಅತಿ ದೊಡ್ಡ ಆಸ್ಪತ್ರೆಯಾಗಿ ಜಯದೇವ ಹೃದ್ರೋಗ ಸಂಸ್ಥೆ ಬೆಳೆಯಲು ಶ್ರಮಿಸಿದ್ದ ನಿರ್ದೇಶಕ ಡಾ.ಸಿ.ಎನ್‌.ಮಂಜುನಾಥ್‌ ಅವರಿಗೆ ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ಭಾರವಾದ ಹೃದಯದಿಂದ ಬೀಳ್ಕೊಡುಗೆ ನೀಡಿದರು.

ಡಿ.31 ರಂದು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಸ್ಥಾನದಿಂದ ನಿರ್ಗಮಿಸುತ್ತಿರುವ ಮಂಜುನಾಥ್‌ ಅವರಿಗೆ ಸಂಸ್ಥೆಯಲ್ಲಿ ಮಂಗಳವಾರ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭಕ್ಕೆ ಆಗಮಿಸಿದಾಗ ಇಲ್ಲಿನ ನೂರಾರು ಸಿಬ್ಬಂದಿ ಆರತಿ ಬೆಳಗಿ, ಪುಷ್ಪವೃಷ್ಟಿ ಸುರಿಸಿ, ಹೂಗುಚ್ಛ ನೀಡಿ ಭಾರವಾದ ಹೃದಯದಿಂದ ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮಂಜುನಾಥ್‌, ನಾನು ನಿರ್ದೇಶಕನಾದಾಗ ಬಡವರ ಆರೋಗ್ಯ ನಿಧಿ ₹5 ಲಕ್ಷ ಇತ್ತು ಈಗ ₹150 ಕೋಟಿ ಆಗಿದೆ. ದೇಣಿಗೆಯ ಮೊತ್ತ ಕೂಡ ₹5 ಲಕ್ಷ ಇದ್ದದ್ದು, ₹50 ಕೋಟಿ ಆಗಿದೆ. ಆಸ್ಪತ್ರೆ ಎಂದರೆ ಕೇವಲ ಕಟ್ಟಡ, ಉಪಕರಣ, ಚಿಕಿತ್ಸೆ ಇದ್ದರಷ್ಟೇ ಸಾಲದು, ಮಾನವೀಯತೆ, ಹೃದಯವಂತಿಕೆಯಿಂದ ಚಿಕಿತ್ಸೆ ನೀಡುವ ಮನೋಭಾವ ಇರಬೇಕು ಎಂಬು ವಾತಾವರಣ ಇಲ್ಲಿ ನಿರ್ಮಿಸಲಾಗಿದೆ ಎಂದರು.

ಜಯದೇವ ಆಸ್ಪತ್ರೆಯನ್ನು ವಿಶ್ವ ದರ್ಜೆಯ ಆಸ್ಪತ್ರೆ ಮಾಡುವ ಕನಸಿತ್ತು. ಆದರೆ, ಈ ಮಟ್ಟಕ್ಕೆ ಆಗುತ್ತದೆ ಎಂದು ನನಗೂ ಗೊತ್ತಿರಲಿಲ್ಲ. ನಮ್ಮ ಸೇವೆ, ಸಾಧನೆ ಬಗ್ಗೆ ಜನತೆ ಮಾತನಾಡುತ್ತಿದ್ದಾರೆ. ಸಂಸ್ಥೆಗೆ, ನನಗೆ ಹಲವು ಪ್ರಶಸ್ತಿ ಸಂದಿರಬಹುದು. 

ಆದರೆ ಸಾಮಾನ್ಯ ಜನರು ಎದುರು ಸಿಕ್ಕಾಗ ‘ನಿಮ್ಮಿಂದ ಒಳ್ಳೆಯ ಕೆಲಸ ಆಗುತ್ತಿದೆ’ ಎನ್ನುವುದು ಎಲ್ಲ ಪ್ರಶಸ್ತಿಗಳಿಗಿಂತ ದೊಡ್ಡದು ಎಂದು ಬಣ್ಣಿಸಿದರು.

ಇಡೀ ಏಷ್ಯಾದಲ್ಲೇ ದೊಡ್ಡ ಹೃದ್ರೋಗ ಸಂಸ್ಥೆಯಾಗಿ ಜಯದೇವ ಆಸ್ಪತ್ರೆ ಬೆಳೆದಿದೆ. ದಾನಿಗಳು ನಿರಂತರ ದೇಣಿಗೆ ನೀಡುತ್ತಿದ್ದಾರೆ. ಇಲ್ಲಿ ಹಣ ನೀಡಿದರೆ ಸದ್ವಿನಿಯೋಗ ಆಗುತ್ತದೆ ಎನ್ನುವುದು ಖಾತರಿಯಾಗಿದೆ. ಹಾಗಾಗಿ ಕೊಡುತ್ತಿದ್ದಾರೆ. 

ಜನರಿಗೂ ಇಲ್ಲಿ ಕಡಿಮೆ ಬೆಲೆಗೆ ಚಿಕಿತ್ಸೆ ಸಿಗುತ್ತದೆ. ಚಿಕಿತ್ಸಾ ವೆಚ್ಚದಲ್ಲಿ ರಿಯಾಯಿತಿ, ವಿನಾಯಿತಿ ಸಿಗುತ್ತದೆ ಎಂದು ಖಾತರಿಯಾಗಿದೆ. ಇದಕ್ಕೆ ಕಾರಣರಾದ ಎಲ್ಲ ಸಿಬ್ಬಂದಿಗೂ ಅಭಿನಂದಿಸುತ್ತೇನೆ. ಮುಂದಿನ ದಿನಗಳಲ್ಲೂ ಜಯದೇವ ಅಭಿವೃದ್ಧಿ ಹೊಂದುತ್ತದೆ ಎನ್ನುವ ನಂಬಿಕೆ ಇದೆ. 

ನಿವೃತ್ತಿ ಬಳಿಕ ನಾನು ವೈದ್ಯನಾಗಿ ವೃತ್ತಿ ಮುಂದುವರೆಸುತ್ತೇನೆ ಎಂದು ತಿಳಿಸಿದರು.

ಮುಂದುವರಿಸಲು ಸರ್ಕಾರಕ್ಕೆಮನವಿ ಮಾಡಿದ್ದೆ: ಸುಧಾಕರ್‌
ಉನ್ನತ ಶಿಕ್ಷಣ ಸಚಿವ ಡಾ। ಎಂ.ಸಿ.ಸುಧಾಕರ್‌ ಈ ವೇಳೆ ಮಾತನಾಡಿ, ಜಯದೇವ ಹೃದ್ರೋಗ ಆಸ್ಪತ್ರೆಯು ಏಷ್ಯಾದಲ್ಲೇ ಅತಿ ದೊಡ್ಡ ಆಸ್ಪತ್ರೆಯಾಗಿ ಬೆಳೆಯಲು ಹಲವು ವರ್ಷಗಳಿಂದ ಈ ಸಂಸ್ಥೆಯ ನಿರ್ದೇಶಕರಾಗಿ ಸೇವೆ ಸಲ್ಲಿಸಿದ ಡಾ। ಮಂಜುನಾಥ್‌ ಅವರ ಕೊಡುಗೆ ಅಪಾರವಾದುದು. 

ಇವರನ್ನೇ ಮುಂದುವರಸಲು ನಾನು ಸರ್ಕಾರಕ್ಕೆ ಮನವಿ ಮಾಡಿದ್ದೆ ಎಂದು ಎಂದು ಹೇಳಿದರು.

ನಾನು ಒಬ್ಬ ಅಭಿಮಾನಿಯಾಗಿ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೇನೆ. ಇದು ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸುವ ಎಲ್ಲರಿಗೂ ನೋವಿನ ದಿನವಾಗಿದೆ. ಮಂಜುನಾಥ್‌ ಅವರ ಸೇವೆ ಮುಂದುವರೆಸುವುದು ಅಗತ್ಯ ಎಂದು ಸರ್ಕಾರಕ್ಕೆ ಹೇಳಿದ್ದೆ. 

ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್ ಅವರ ಬಳಿಯೂ ಚರ್ಚೆ ಮಾಡಿದ್ದೆ. ಆದರೆ ಎಲ್ಲದಕ್ಕೂ ಒಂದು ಆರಂಭ ಹಾಗೂ ಅಂತ್ಯ ಎಂದು ಇರುತ್ತದೆ. ಅದರನ್ವಯ ನಾವು ನಡೆದುಕೊಳ್ಳಬೇಕಾಗಿದೆ ಎಂದು ತಿಳಿಸಿದರು.

ಇಂದು ಹೊಸ ನಿರ್ದೇಶಕರ ನೇಮಕ: ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಸ್ಥಾನದಿಂದ ಡಾ। ಸಿ.ಎನ್‌.ಮಂಜುನಾಥ್‌ ಅವರು ನಿರ್ಗಮಿಸುತ್ತಿರುವ ಹಿನ್ನೆಲೆಯಲ್ಲಿ ಸೇವಾ ಹಿರಿತನ ಪರಿಗಣಿಸಿ ಸಂಸ್ಥೆಯ ಹಿರಿಯ ವೈದ್ಯರನ್ನು ಉಸ್ತುವಾರಿವಾಗಿ ನೇಮಕ ಮಾಡಲಾಗುವುದು.

ಸೇವಾ ಹಿರಿತನ ಪರಿಗಣಿಸಿದರೆ ಹಿರಿಯ ವೈದ್ಯ ಕೆ.ಎಚ್‌.ಶ್ರೀನಿವಾಸ್‌ ಅವರನ್ನು ಆಯ್ಕೆ ಮಾಡಲಾಗುವುದೋ ಅಥವಾ ಸರ್ಕಾರದ ನಿಯಮಗಳನ್ವಯ ಬೇರೆಯವರನ್ನು ಆಯ್ಕೆ ಮಾಡಲಾಗುವುದೋ ಎಂಬುದು ಬುಧವಾರ ಮುಖ್ಯಮಂತ್ರಿಗಳ ನಡೆಸಲಿರುವ ಸಭೆಯಲ್ಲಿ ಅಂತಿಮವಾಗಲಿದೆ.

ನಿರ್ದೇಶಕ ಹುದ್ದೆಗೆ ಈಗಾಗಲೇ ಅರ್ಜಿ ಆಹ್ವಾನಿಸಿದ್ದು, 20ಕ್ಕೂ ಅಧಿಕ ಅರ್ಜಿ ಸಲ್ಲಿಕೆಯಾಗಿವೆ. ಫೆಬ್ರವರಿ ಎರಡನೇ ವಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಆಡಳಿತ ಮಂಡಳಿ ಸಭೆಯಲ್ಲಿ ನಿರ್ದೇಶಕರನ್ನು ಆಯ್ಕೆ ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ.