ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಸಂತನರಾಮನ್ ಗೆ ಹೃದಯಸ್ಪರ್ಶಿ ಅಭಿನಂದನೆ

| Published : Oct 07 2025, 01:02 AM IST

ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಸಂತನರಾಮನ್ ಗೆ ಹೃದಯಸ್ಪರ್ಶಿ ಅಭಿನಂದನೆ
Share this Article
  • FB
  • TW
  • Linkdin
  • Email

ಸಾರಾಂಶ

ನ್ಯಾಮನಹಳ್ಳಿಯಲ್ಲಿ 16 ವರ್ಷ ಮುಖ್ಯಶಿಕ್ಷಕರಾಗಿ ಸೇವೆ ಮಾಡಿದ ಸಂತಾನರಾಮನ್ ಗ್ರಾಮಸ್ಥರ ಹಾಗೂ ಡೇರಿ ಸಂಘದ ಮನವೊಲಿಸಿ ಗ್ರಾಮದ ಮಧ್ಯ ಭಾಗದ ಲಕ್ಷಾಂತರ ರು. ನಿವೇಶನವನ್ನು ಇಲಾಖೆಗೆ ಕೊಡಿಸಿ ಶಾಲಾ ಕೊಠಡಿಗಳನ್ನು ಮಂಜೂರು ಮಾಡಿಸಿ ಅಚ್ಚುಕಟ್ಟಾಗಿ ನಿರ್ಮಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮೇಲುಕೋಟೆ

ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ಹೋಬಳಿಯ ನ್ಯಾಮನಹಳ್ಳಿ ಸರ್ಕಾರಿ ಶಾಲೆಯ ಹಿಂದಿನ ಮುಖ್ಯಶಿಕ್ಷಕ ಸಂತಾನರಾಮನ್‌ಗೆ ಶಾಲಾಭಿವೃದ್ಧಿ ಸಮಿತಿ, ಹಿರಿಯ ವಿದ್ಯಾರ್ಥಿಗಳು ಗ್ರಾಮಸ್ಥರು ಯುವಕರು ಪುಟಾಣಿ ಮಕ್ಕಳು ಸೇರಿ ಹೃದಯಸ್ಪರ್ಶಿ ಅಭಿನಂದನೆ ಸಲ್ಲಿಸಿದರು.

ಸಮಾರಂಭದಲ್ಲಿ ಮೈಸೂರುಪೇಟ ತೊಡಿಸಿ ಅಭಿನಂದಿಸಿದ ನಂತರ ಹಿರಿಯ ಕೆಎಎಸ್ ಅಧಿಕಾರಿ ವೇಣುಗೋಪಾಲ್ ಮಾತನಾಡಿ, ನ್ಯಾಮನಹಳ್ಳಿಯಲ್ಲಿ 16 ವರ್ಷ ಮುಖ್ಯಶಿಕ್ಷಕರಾಗಿ ಸೇವೆ ಮಾಡಿದ ಸಂತಾನರಾಮನ್ ಗ್ರಾಮಸ್ಥರ ಹಾಗೂ ಡೇರಿ ಸಂಘದ ಮನವೊಲಿಸಿ ಗ್ರಾಮದ ಮಧ್ಯ ಭಾಗದ ಲಕ್ಷಾಂತರ ರು. ನಿವೇಶನವನ್ನು ಇಲಾಖೆಗೆ ಕೊಡಿಸಿ ಶಾಲಾ ಕೊಠಡಿಗಳನ್ನು ಮಂಜೂರು ಮಾಡಿಸಿ ಅಚ್ಚುಕಟ್ಟಾಗಿ ನಿರ್ಮಿಸಿದ್ದಾರೆ ಎಂದರು.

ಇಲ್ಲಿಂದ ವರ್ಗಾವಣೆಯಾದ ನಂತರ ಮೇಲುಕೋಟೆ ಶತಮಾನದ ಶಾಲೆಯನ್ನೂ ಉಳಿಸಿ ಮಾದರಿಯಾಗಿಸಿದ್ದಾರೆ. ಶಾಲೆ ಈ ವರ್ಷ150 ರ ಸಂಭ್ರಮ ಆಚರಿಸಿಕೊಳ್ಳುತ್ತಿದೆ. ಮುಖ್ಯಶಿಕ್ಷಕಿ ಪೂರ್ಣಿಮ ಪರಿಶ್ರಮದಲ್ಲಿ ನ್ಯಾಮನಹಳ್ಳಿ ಶಾಲೆ ಮೇಲುಕೋಟೆ ಹೋಬಳಿಯಲ್ಲೇ ಮಾದರಿಯಾಗಿದೆ ಎಂದರು.

ತಾಲೂಕಿಗೆ 30 ವರ್ಷದ ನಂತರ ರಾಜ್ಯಪ್ರಶಸ್ತಿ ನಮ್ಮೂರಿನಲ್ಲಿ ಸೇವೆ ಮಾಡಿದ ಶಿಕ್ಷಕರಿಗೆ ಲಭಿಸಿರುವುದು ಅತ್ಯಂತ ಖುಷಿಕೊಡುವ ವಿಚಾರ. ಶಿಕ್ಷಣ ಇಲಾಖೆ ರಾಜ್ಯಪ್ರಶಸ್ತಿಯನ್ನು ಅರ್ಹಶಿಕ್ಷಕರಿಗೆ ನೀಡಿ ಗೌರವಿಸಿದೆ. ಈ ಸಂಭ್ರಮವನ್ನು ಹಿರಿಯ ವಿದ್ಯಾರ್ಥಿಗಳು ಹಬ್ಬದ ರೀತಿಯಲ್ಲಿ ಆಚಸಿರುವುದು ಗುರು-ಶಿಷ್ಯಪರಂಪರೆಯ ಭಾಂದವ್ಯದ ದೃಷ್ಟಿಯಲ್ಲಿ ಅತ್ಯಂತ ಅರ್ಥಪೂರ್ಣವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಅಭಿನಂದನೆ ಸ್ಮೀಕರಿಸಿದ ಮುಖ್ಯಶಿಕ್ಷಕ ಸಂತಾನರಾಮನ್ ಮಾತನಾಡಿ, ಶಾಲೆಯಲ್ಲಿ ಮುಖ್ಯಶಿಕ್ಷಕಿ ಪೂರ್ಣಿಮ ಯೋಜಿಸಿದ ಅಭಿವೃದ್ಧಿಯ ಕನಸು ನವೆಂಬರ್‌ನಲ್ಲಿ ನನಸಾಗಬೇಕು. ವೈಯುಕ್ತಿಕವಾಗಿ 10 ಸಾವಿರ ಒಂದು ರು. ನೀಡುತ್ತೇನೆ. ಹಿರಿಯ ವಿದ್ಯಾರ್ಥಿಗಳು ಮುಖಂಡರು ನೀವು ವ್ಯಾಸಂಗ ಮಾಡಿದ ಶಾಲೆಗೆ ಕೊಡುಗೆ ನೀಡಬೇಕು. ಉಳಿದ ಸಹಕಾರವನ್ನು ಶಿಕ್ಷಣಪ್ರೇಮಿ ಅರವಿಂದರಾಘವನ್‌ರಿಂದ ಪಡೆಯಬಹುದು ಎಂದರು.

ವಿದ್ಯಾರ್ಥಿಗಳು ಹಾಗೂ ಯುವಕರೇ ಗ್ರಾಮದ ಶಕ್ತಿ ಎಂಬುದನ್ನು ತೋರಿಸಿ ನಮ್ಮೂರ ಶಾಲಾಭಿವೃದ್ಧಿಯಲ್ಲಿ ಕೈಜೋಡಿಸಿ ನವೆಂಬರ್ ಮಾಹೆಯಲ್ಲಿ ಕನ್ನಡರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸೋಣ ಎಂದರು.

ಸಮಾರಂಭದಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ರಮ್ಯ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಸತೀಶ್ ಮುಖ್ಯಶಿಕ್ಷಕಿ ಪೂರ್ಣಿಮ ಸಹಶಿಕ್ಷಕಿ ಜ್ಯೋತಿ ಇದ್ದರು. ಹಿರಿಯ ವಿದ್ಯಾರ್ಥಿಗಳಾದ ಅನಿಲ್, ಗಗನ ವಿಜಯ್ ಗುರುಗಳ ಬಗ್ಗೆ ಮಾತನಾಡಿದರು. ಇದಕ್ಕೂ ಮುನ್ನ ರಾಜ್ಯ ಪ್ರಶಸ್ತಿ ಪುರಸ್ಕೃತ ಸನ್ಮಾನಿತರನ್ನು ಪಟಾಕಿ ಸಿಡಿಸಿ ತಮಟೆ ಸದ್ದು ಮತ್ತು ಪುಟಾಣಿಗಳ ಪೂರ್ಣಕುಂಬಸ್ವಾಗತದೊಂದಿಗೆ ಸ್ವಾಗತಿಸಿ ಬೆಲ್ಲದಾರತಿ ಮಾಡಿ ವೇದಿಕೆಗೆ ಬರಮಾಡಿಕೊಳ್ಳಲಾಯಿತು.