ಸಾರಾಂಶ
ಖುಷಿಯಿಂದ ದೂರ ದೂರುಗಳಿಗೆ ತೆರಳಿದ ಪ್ರಯಾಣಿಕರು । ಎಸ್ಪಿಯಿಂದ ಬಸ್ ನಿಲ್ದಾಣದಲ್ಲಿ ಪರಿಶೀಲನೆ
ಕನ್ನಡಪ್ರಭ ವಾರ್ತೆ ಹೊಸಪೇಟೆವಿಜಯನಗರ ಜಿಲ್ಲೆಯಲ್ಲಿ ಸಾರಿಗೆ ಮುಷ್ಕರಕ್ಕೆ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮ ಕೈಗೊಂಡ ಹಿನ್ನೆಲೆ ಮುಷ್ಕರದ ಎಫೆಕ್ಟ್ ತಾಗದೇ ಯಥಾಪ್ರಕಾರ ಜಿಲ್ಲೆಯಾದ್ಯಂತ ಬಸ್‌ಗಳು ಮಂಗಳವಾರ ಸಂಚರಿಸಿದವು. ಇದರಿಂದ ಪ್ರಯಾಣಿಕರು ಕೂಡ ಅಡೆತಡದೇ ಇಲ್ಲದೇ ಪ್ರಯಾಣಿಸಿದರು. ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿ ಸಂಘ ಕರೆ ನೀಡಿದ್ದ ಮುಷ್ಕರದ ಹಿನ್ನೆಲೆ ವಿಜಯನಗರ ಎಸ್ಪಿ ಅರುಣಾಂಗ್ಷು ಗಿರಿ ಖುದ್ದು ನಗರದ ಕೇಂದ್ರೀಯ ಬಸ್ ನಿಲ್ದಾಣಕ್ಕೆ ಆಗಮಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ತಿಮ್ಮಾರೆಡ್ಡಿ ಹೀರಾ ಅವರಿಂದ ಮಾಹಿತಿ ಪಡೆದುಕೊಂಡರು. ಈ ವೇಳೆ ಪ್ರಯಾಣಿಕರಿಗೆ ತೊಂದರೆಯಾಗದಂತೆ ಕ್ರಮ ವಹಿಸಲು ಸೂಚಿಸಿದರು.
ಬಸ್ ಸಂಚಾರ:ಜಿಲ್ಲೆಯ ಸಾರಿಗೆ ಡಿಪೋಗಳಲ್ಲಿ 472 ಸಾರಿಗೆ ಬಸ್ ಗಳಿದ್ದು, ಚಾಲಕ, ನಿರ್ವಾಹಕರು ಸೇರಿ 1720 ನೌಕರರು ಕೆಲಸ ನಿರ್ವಹಿಸುತ್ತಿದ್ದಾರೆ. 122 ಜನ ಹೊರಗುತ್ತಿಗೆ ನೌಕರರು ಇದ್ದಾರೆ. ಜಿಲ್ಲೆಯಲ್ಲಿ ಸಾರಿಗೆ ನೌಕರರ ಮುಷ್ಕರದ ಹಿನ್ನೆಲೆಯಲ್ಲಿ ಮುಂಜಾಗ್ರತೆಗಾಗಿ 90 ಖಾಸಗಿ ಬಸ್ , 1000 ಮ್ಯಾಕ್ಸಿಕ್ಯಾಬ್ ಸೇರಿದಂತೆ ಶಾಲಾ ಬಸ್ ಕೂಡ ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿತ್ತು. ಪ್ರಯಾಣಿಕರಿಗೆ ತೊಂದರೆಯಾಗದಂತೆ ಕ್ರಮವಹಿಸಲು ಮುಂದಾಗಿತ್ತು. ಮುಷ್ಕರ ನಡೆಸುವ ಮುಖಂಡರು ಯಾರೂ ಬಸ್ ನಿಲ್ದಾಣದತ್ತ ಸುಳಿಯದ್ದರಿಂದ ಬಸ್‌ಗಳನ್ನು ಎಂದಿನಂತೆ ಓಡಿಸಲಾಯಿತು.
ನಗರದ ಕೇಂದ್ರೀಯ ಬಸ್ ನಿಲ್ದಾಣದಿಂದ ಬಳ್ಳಾರಿ, ಕೊಪ್ಪಳ, ಕಲಬುರಗಿ, ಶಿವಮೊಗ್ಗ, ದಾವಣಗೆರೆ, ಧರ್ಮಸ್ಥಳ ನಗರಗಳಿಗೆ ಸಾರಿಗೆ ಬಸ್ ಗಳ ಓಡಾಟ ನಡೆಸಲಾಯಿತು. ಹೊಸಪೇಟೆ ತಾಲೂಕಿನ ಹಂಪಿ, ಹುಲಿಗಿ ಸೇರಿದಂತೆ ಸುತ್ತಮುತ್ತಲ ನಗರ, ಪಟ್ಟಣಗಳಿಗೂ ಸಾರಿಗೆ ಬಸ್ ಗಳ ಓಡಾಟ ನಡೆಸಲಾಯಿತು. ದೂರ ದೂರುಗಳಿಂದ ಆಗಮಿಸಿದ್ದ ಪ್ರಯಾಣಿಕರು ಖುಷಿಯಿಂದ ತೆರಳಿದರು.ಶೇ.94.33ರಷ್ಟು ಬಸ್‌ಗಳ ಓಡಾಟ:
ವಿಜಯನಗರ ಜಿಲ್ಲೆಯ ಹೊಸಪೇಟೆ ಘಟಕದಲ್ಲಿ ಶೇ.90.48 ಬಸ್‌ಗಳು ಓಡಾಟ ನಡೆಸಿದರೆ, ಕೂಡ್ಲಿಗಿ ಮತ್ತು ಹಗರಿಬೊಮ್ಮನಹಳ್ಳಿ ಘಟಕಗಳಲ್ಲಿ ಶೇ. 100ರಷ್ಟು ಬಸ್‌ಗಳು ಸಂಚರಿಸಿವೆ. ಹೂವಿನ ಹಡಗಲಿ ಘಟಕದಲ್ಲಿ ಶೇ. 96.36, ಹರಪನಹಳ್ಳಿ ಘಟಕದಲ್ಲಿ ಶೇ. 86.96 ಬಸ್‌ಗಳು ಓಡಾಟ ನಡೆಸಿವೆ. ವಿಜಯನಗರ ಜಿಲ್ಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಮುಷ್ಕರದ ಎಫೆಕ್ಟ್ ಬೀಳದ್ದರಿಂದ ಮುಂಜಾಗ್ರತಾ ಕ್ರಮಕ್ಕಾಗಿ ತರಲಾಗಿದ್ದ 90 ಬಸ್‌ಗಳನ್ನು ಓಡಿಸಲಾಗಲಿಲ್ಲ. ಸರ್ಕಾರಿ ಬಸ್‌ಗಳೇ ಪ್ರಯಾಣಿಕರ ಸೇವೆಗೆ ವ್ಯವಸ್ಥೆ ಮಾಡಲಾಯಿತು ಎಂದು ಜಿಲ್ಲೆಯ ವಿಭಾಗೀಯ ನಿಯಂತ್ರಣಾಧಿಕಾರಿ ತಿಮ್ಮಾರೆಡ್ಡಿ ಹೀರಾ ತಿಳಿಸಿದ್ದಾರೆ.