ಸಾರಾಂಶ
ಶಿವಮೊಗ್ಗ ನಗರದ ಬಸವ ಕೇಂದ್ರದಲ್ಲಿ ಬುಧವಾರ ಸಂಜೆ ಶರಣ ಸಾಹಿತ್ಯ ಪರಿಷತ್ತು , ಬಸವಕೇಂದ್ರ ಸಂಯುಕ್ತವಾಗಿ ಹಮ್ಮಿಕೊಂಡಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ನಾಡೋಜ ಪುರಸ್ಕೃತ ಗೋ.ರು.ಚನ್ನಬಸಪ್ಪ ಉದ್ಘಾಟಿಸಿದರು.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಸ್ವರ್ಗ ಮತ್ತು ನರಕ ಎಂಬುದು ಕೇವಲ ಭ್ರಮೆಯಷ್ಟೇ, ಬೇರೆಯವರಿಗೆ ಒಳಿತು ಮಾಡಿದರೆ ಸ್ವರ್ಗ, ಅದೇ ಕೇಡು ಬಯಸಿದರೆ ಅದುವೇ ನರಕ ಎಂದು ಹಿರಿಯ ವಿದ್ವಾಂಸ ಹಾಗೂ ನಾಡೋಜ ಪುರಸ್ಕೃತ ಗೊ.ರು.ಚನ್ನಬಸಪ್ಪ ಅಭಿಪ್ರಾಯಪಟ್ಟರು.ನಗರದ ಬಸವ ಕೇಂದ್ರದಲ್ಲಿ ಬುಧವಾರ ಸಂಜೆ ಶರಣ ಸಾಹಿತ್ಯ ಪರಿಷತ್ತು , ಬಸವಕೇಂದ್ರ ಸಂಯುಕ್ತವಾಗಿ ಹಮ್ಮಿಕೊಂಡಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು “ಮನೆ ನೋಡಾ ಬಡವರು” ವಿಷಯಾಧಾರಿತವಾಗಿ ಉಪನ್ಯಾಸ ನೀಡಿ, ಯಾವುದು ಒಳ್ಳಯೆದು ಯಾವುದು ಕೆಟ್ಟದ್ದು ಎಂಬುದು ನಾವು ಮಾಡುವ ಆಲೋಚನೆಯಲ್ಲೇ ಇರುತ್ತದೆ, ನಮ್ಮ ಹಾದಿ ಕಾಯಕ ತತ್ವದಲ್ಲಿ ಸಾಗಬೇಕು, ಅಗ ಜೀವನ ಸಾರ್ಥಕತೆ ಪಡೆದುಕೊಳ್ಳುತ್ತದೆ ಎಂದು ಹೇಳಿದರು.
ಡಾ.ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಇಂದಿನ ದಿನಮಾನದಲ್ಲಿ ಶರಣ ಸಾಹಿತ್ಯ ಚಿಂತನೆಗಳು ಅಪಾರ್ಥಕ್ಕೆ ಒಳ ಗಾಗು ತ್ತಿವೆ, ಅಂತಹ ಕೆಲಸವೂ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಶರಣ ತತ್ವದ ಮರು ಚಿಂತನೆ ಮಾಡುವುದು ಇಂದಿನ ಅಗತ್ಯವಾಗಿದೆ. ಶರಣ ಸಾಹಿತ್ಯವು ಎಡ ಪಂಥವೂ ಅಲ್ಲ, ಬಲ ಪಂಥವೂ ಅಲ್ಲ, ಇವೆರಡರ ಹದವರಿತ ಮಿಶ್ರಣವೇ ಶರಣ ತತ್ವ ಎಂದು ಅಭಿಪ್ರಾಯಿಸಿದರು.ವಿಧಾನ ಪರಿಷತ್ತಿನ ಮಾಜಿ ಶಾಸಕ ಎಸ್.ರುದ್ರೇಗೌಡ್ರು ಮಾತನಾಡಿ, ಸರ್ಜಿ ಮನೆತನ ಕಾಯಕ ಮಹತ್ವ ಕೊಟ್ಟಿದೆ, ಈ ನಿಟ್ಟಿನಲ್ಲಿ ಶರಣ ತತ್ವ ಮತ್ತು ಸಂಸ್ಕೃತಿ ಬಿತ್ತುತ್ತಿರುವುದು ನಿಜಕ್ಕೂ ಅಭಿನಂದನೀಯ. ಹಾಗೆಯೇ ಶರಣ ಚಿಂತನೆಗಳು ಬೆಳೆಯಬೇಕು, ಉಳಿಯಬೇಕು, ನಾಡು ಸುಭಿಕ್ಷವಾಗಬೇಕು ಎಂದು ಹೇಳಿದರು.
ದತ್ತಿ ದಾನಿ ಹಾಗೂ ವಿಧಾನ ಪರಿಷತ್ತಿನ ಶಾಸಕ ಡಾ.ಧನಂಜಯ ಸರ್ಜಿ ಮಾತನಾಡಿ, ವಚನ ಸಾಹಿತ್ಯ ಹಾಗೂ ಶರಣ ಸಾಹಿತ್ಯದ ಕೇವಲ 3ರಷ್ಟು ಅಂಶಗಳನ್ನು ನಾವೆಲ್ಲರೂ ಪಾಲನೆ ಮಾಡಿದರೆ ಜೀವನ ಸಾರ್ಥಕತೆ ಹೊಂದುತ್ತದೆ. ಅಲ್ಲದೇ ಭೂಮಿಯೇ ಸ್ವರ್ಗವಾಗುತ್ತದೆ. ವಚನ ಮತ್ತು ಶರಣರ ಆದರ್ಶಗಳಲ್ಲಿ ಅಂಥ ದ್ದೊಂದು ಶಕ್ತಿ ಇದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ವೀರಶೈವ ಲಿಂಗಾಯತ ಸಮಾಜ ಸೇವಾ ಸಂಘದ ಅಧ್ಯಕ್ಷ ಎಸ್.ಎಸ್. ಜ್ಯೋತಿ ಪ್ರಕಾಶ್, ಉದ್ಯಮಿಗಳಾದ ಶರಣ ಸರ್ಜಿ ರುದ್ರಪ್ಪ ಮತ್ತಿತರರು ಹಾಜರಿದ್ದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಎಚ್.ಎನ್.ಮಹಾರುದ್ರ ಸ್ವಾಗತಿಸಿದರು.ಶರಣ ಸರ್ಜಿ ರುದ್ರಪ್ಪ, ಶರಣೆ ರೇಣುಕಾ ಅವರ ಹೆಸರಿನಲ್ಲಿ ದತ್ತಿ ಯೋಜಿಸಿದ್ದ ಕಾರ್ಯಕ್ರಮದಲ್ಲಿ ಶರಣ ಬಾಂಧವರು ಭಾಗವಹಿಸಿದ್ದರು, ಇದಕ್ಕೂ ಮೊದಲು ಪ್ರಸಿದ್ಧ ಗಾಯಕ ಹುಮಾಯೂನ್ ಹರ್ಲಾಪುರ್, ನೌಶಾದ್ ಹರ್ಲಾಪುರ್ ಹಗೂ ನಿಶಾದ್ ಹರ್ಲಾಪುರ್ ತಂಡದವರು ವಚನ ಗಾಯನ ನಡೆಸಿಕೊಟ್ಟರು.