ಸಾರಾಂಶ
ಶಿವಾನಂದ ಗೊಂಬಿ
ಹುಬ್ಬಳ್ಳಿ:ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮೇಯರ್-ಉಪಮೇಯರ್ ಹುದ್ದೆಗೆ ಆಡಳಿತ ಪಕ್ಷ ಬಿಜೆಪಿಯಲ್ಲಿ ಭಾರೀ ಪೈಪೋಟಿ ಶುರುವಾಗಿದೆ. ನಾಲ್ಕಾರು ಜನರು ಈಗಿನಿಂದಲೇ ಲಾಬಿ ನಡೆಸುತ್ತಿದ್ದಾರೆ.23ನೇ ಅವಧಿಯ ಮೇಯರ್-ಉಪಮೇಯರ್ ಚುನಾವಣೆ ಜೂ. 29ರಂದು ನಡೆಯಲಿದೆ. ಮೇಯರ್ ಸ್ಥಾನವು ಹಿಂದುಳಿದ ವರ್ಗ ಎ ಹಾಗೂ ಉಪಮೇಯರ್ ಸ್ಥಾನವೂ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿದೆ.
ಮೇಯರ್ ಸ್ಥಾನಕ್ಕೆ ಯಾರ್‍ಯಾರು?:ಹಿಂದುಳಿದ ವರ್ಗ ಎ ವರ್ಗಕ್ಕೆ ಹಿರಿಯ ಸದಸ್ಯರಾದ ರಾಮಣ್ಣ ಬಡಿಗೇರ, ಉಮೇಶಗೌಡ ಕೌಜಗೇರಿ, ಭೀರಪ್ಪ ಖಂಡೇಕರ್, ತಿಪ್ಪಣ್ಣ ಮಜ್ಜಗಿ ಈ ನಾಲ್ವರು ಮೇಯರ್ ಸ್ಥಾನದ ರೇಸ್‌ನಲ್ಲಿದ್ದಾರೆ. ಇದರಲ್ಲಿ ರಾಮಣ್ಣ ಬಡಿಗೇರ ನಾಲ್ಕನೆಯ ಬಾರಿ ಸದಸ್ಯರಾಗಿದ್ದರೆ, ಉಳಿದ ಮೂವರು 3ನೇ ಬಾರಿ ಸದಸ್ಯರಾದವರು. ಇದರಲ್ಲಿ ಬಡಿಗೇರ ಹೆಸರು ಮುಂಚೂಣಿಯಲ್ಲಿದೆ ಎಂದು ಮೂಲಗಳು ತಿಳಿಸುತ್ತವೆ.
21ನೇ ಅವಧಿಯಲ್ಲಿ ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೇತ್ರದ ವಾರ್ಡ್ ಸದಸ್ಯ ಈರೇಶ ಅಂಚಟಗೇರಿ ಮೇಯರ್ ಆಗಿದ್ದರೆ, ಕಳೆದ ಅವಧಿ (ಸದ್ಯ) ಸೆಂಟ್ರಲ್ ಕ್ಷೇತ್ರದ ವ್ಯಾಪ್ತಿಯ ವೀಣಾ ಬರದ್ವಾಡ ಮೇಯರ್ ಆಗಿದ್ದರು. ಇದೀಗ ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದ ಸದಸ್ಯರಾಗಿರುವ ರಾಮಣ್ಣ ಬಡಿಗೇರ ಅವರನ್ನು ಮೇಯರ್ ಮಾಡಬೇಕು ಎಂಬ ಆಧಾರದ ಮೇಲೆ ಪ್ರಯತ್ನ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ. ಆದರೆ ಹುಬ್ಬಳ್ಳಿಯವರಾದ ಕೌಜಗೇರಿ, ಖಂಡೇಕರ್, ಮಜ್ಜಗಿ ಕೂಡ ಹಿರಿಯ ಸದಸ್ಯರೇ. ಅರ್ಹರೂ ಇದ್ದಾರೆ. ಈ ಸಲವೂ ಹುಬ್ಬಳ್ಳಿಗೆ ಕೊಟ್ಟರೆ ಏನು ತಪ್ಪು. ನಾವು ಪಕ್ಷದಲ್ಲಿ ಸಾಕಷ್ಟು ದುಡಿದಿದ್ದೇವೆ ಎಂಬ ವಾದವನ್ನು ಮುಂದಿಡುತ್ತಿದ್ದಾರೆ.ಇನ್ನು ಎಸ್ಸಿ ಮಹಿಳೆಗೆ ಮೀಸಲಾಗಿರುವ ಉಪಮೇಯರ್ ಹುದ್ದೆಗೆ ದುರ್ಗಮ್ಮ ಬಿಜವಾಡ ಹಾಗೂ ಚಂದ್ರಿಕಾ ಮೇಸ್ತ್ರಿ ಹೆಸರು ಕೇಳಿ ಬರುತ್ತಿದೆ. ಈ ಇಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡಬಹುದು ಎಂದು ಪಕ್ಷದ ಮೂಲಗಳು ತಿಳಿಸುತ್ತವೆ.
ಜನಪ್ರತಿನಿಧಿಗಳ ಆಯ್ಕೆಯೇ ಅಂತಿಮ:ಜಿಲ್ಲೆಯ ಮಟ್ಟಿಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೈಕಮಾಂಡ್ ಎಂಬಂತೆ ಇದ್ದಾರೆ. ಜೋಶಿ ಹಾಗೂ ಶಾಸಕರಾದ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ ಸೇರಿದಂತೆ ಹಲವು ಹಿರಿಯರು ಚರ್ಚಿಸಿ ಅಂತಿಮಗೊಳಿಸಲಿದ್ದಾರೆ. ಇದಕ್ಕಾಗಿ ಜೂ. 28ಕ್ಕೆ ಜಿಲ್ಲೆಯ ಕೋರ್ ಕಮಿಟಿ ಮೀಟಿಂಗ್ ನಡೆಯಲಿದೆ. ಅಲ್ಲಿ ಹೆಸರನ್ನು ಅಖೈರುಗೊಳಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರೆಸಾರ್ಟ್ ಇರಲ್ಲ:ಕಳೆದ ಮೇಯರ್- ಉಪಮೇಯರ್ ಹುದ್ದೆ ಚುನಾವಣೆ ವೇಳೆ ಮಾಜಿ ಸಿಎಂ ಜಗದೀಶ ಶೆಟ್ಟರ್ ಕಾಂಗ್ರೆಸ್‌ನಲ್ಲಿದ್ದರು. ಹೀಗಾಗಿ ಬಿಜೆಪಿ ಸದಸ್ಯರನ್ನು ತಮ್ಮತ್ತ ಸೆಳೆಯುತ್ತಾರೋ ಎಂಬ ಭೀತಿಯಲ್ಲಿ ಎಲ್ಲ ಸದಸ್ಯರನ್ನು ದಾಂಡೇಲಿ ಬಳಿ ರೆಸಾರ್ಟ್‌ಗೆ ಬಿಜೆಪಿ ಕರೆದುಕೊಂಡು ಹೋಗಿತ್ತು. ಇದೀಗ ಶೆಟ್ಟರ್ ಬಿಜೆಪಿಯಲ್ಲೇ ಇದ್ದಾರೆ. ಬೆಳಗಾವಿ ಸಂಸದರಾಗಿದ್ದಾರೆ. ಬಿಜೆಪಿ ಸದಸ್ಯರು ಕಾಂಗ್ರೆಸ್‌ನತ್ತ ಹೋಗುವ ಸಾಧ್ಯತೆಗಳಿಲ್ಲ. ಹೀಗಾಗಿ ಈ ಸಲ ರೆಸಾರ್ಟ್‌ಗೆ ಕರೆದುಕೊಂಡು ಹೋಗುತ್ತಿಲ್ಲ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಒಟ್ಟಿನಲ್ಲಿ ಮೇಯರ್- ಉಪಮೇಯರ್ ಚುನಾವಣೆ ಘೋಷಣೆಯಿಂದಾಗಿ ಬಿಜೆಪಿಯಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿರುವುದಂತೂ ಸತ್ಯ.ಬಲಾಬಲ:
82 ಸದಸ್ಯ ಬಲದ ಮಹಾನಗರ ಪಾಲಿಕೆಯಲ್ಲಿ ಬಿಜೆಪಿಯ 39 ಸದಸ್ಯರಿದ್ದರು. ಅದರಲ್ಲಿ ಒಬ್ಬರು ವಿಪ್ ಉಲ್ಲಂಘನೆ ಮಾಡಿದ್ದರಿಂದ ಅನರ್ಹಗೊಂಡಿದ್ದು 38ಕ್ಕೆ ಇಳಿದಿದೆ. ಕಾಂಗ್ರೆಸ್‌ನ 33, ಎಐಎಂಐಎಂನ ಮೂವರು, ಜೆಡಿಎಸ್‌ನ ಒಬ್ಬರು ಹಾಗೂ 6 ಜನ ಪಕ್ಷೇತರ ಸದಸ್ಯರು ಇದ್ದಾರೆ. ಒಬ್ಬರು ಸಂಸದರು, ನಾಲ್ಕು ಜನ ಎಂಎಲ್‌ಎ, ಮೂವರು ಎಂಎಲ್ಸಿ ಮತ ಚಲಾಯಿಸಬಹುದಾಗಿದೆ. ಇದರಿಂದಾಗಿ ಒಟ್ಟು 89 ಜನ ಮತಚಲಾಯಿಸಬಹುದಾಗಿದೆ. ಆರು ಜನ ಪಕ್ಷೇತರರ ಪೈಕಿ ಇಬ್ಬರು ಈಗಾಗಲೇ ಬಿಜೆಪಿ ಸೇರಿದ್ದಾರೆ. ರಾಷ್ಟ್ರಮಟ್ಟದಲ್ಲೇ ಜೆಡಿಎಸ್ ಬಿಜೆಪಿಯಿಂದ ಮೈತ್ರಿ ಮಾಡಿಕೊಂಡಿರುವುದರಿಂದ ಜೆಡಿಎಸ್‌ನ ಒಬ್ಬರು ಕೂಡ ಈ ಸಲ ಬಿಜೆಪಿಗೆ ಮತ ಚಲಾಯಿಸಲಿದ್ದಾರೆ.