ಬೆಣ್ಣೆಹಳ್ಳ ಪ್ರವಾಹಕ್ಕೆ ಅಪಾರ ಬೆಳೆ ಹಾನಿ, ಸಂಚಾರ ಸ್ಥಗಿತ

| Published : Aug 10 2025, 01:33 AM IST

ಸಾರಾಂಶ

ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ತಾಲೂಕಿನ ಹಲವೆಡೆ ಜನ ಜೀವನ ಅಸ್ತವ್ಯವಸ್ಥವಾಗಿದ್ದು, ರೈತರ ಜಮೀನುಗಳು ಸಂಪೂರ್ಣ ಜಲಾವೃತವಾಗಿ ಅಪಾರ ಪ್ರಮಾಣದಲ್ಲಿ ಬೆಳೆ ಹಾನಿ, ಹಲವಡೆ ರಸ್ತೆ ಸಂಚಾರ ಸ್ಥಗಿತವಾಗಿ ಜನತೆ ತೀವ್ರ ತೊಂದರೆ ಅನುಭವಿಸುವಂತಾಗಿದೆ.

ರೋಣ: ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ತಾಲೂಕಿನ ಹಲವೆಡೆ ಜನ ಜೀವನ ಅಸ್ತವ್ಯವಸ್ಥವಾಗಿದ್ದು, ರೈತರ ಜಮೀನುಗಳು ಸಂಪೂರ್ಣ ಜಲಾವೃತವಾಗಿ ಅಪಾರ ಪ್ರಮಾಣದಲ್ಲಿ ಬೆಳೆ ಹಾನಿ, ಹಲವಡೆ ರಸ್ತೆ ಸಂಚಾರ ಸ್ಥಗಿತವಾಗಿ ಜನತೆ ತೀವ್ರ ತೊಂದರೆ ಅನುಭವಿಸುವಂತಾಗಿದೆ.

ಅಬ್ಬರದ ಮಳೆಯಿಂದಾಗಿ ತಾಲೂಕಿನ ಮುದೇನಗುಡಿ ಮತ್ತು ಹುಲ್ಲೂರು ಮಧ್ಯದ ಹಿರೇಹಳ್ಳ ರಭಸವಾಗಿ ಹರಿಯುತ್ತಿದ್ದು, ಪ್ರವಾಹದಿಂದ ಹುಲ್ಲೂರು, ಮುದೇನಗುಡಿ, ಸೋನಮಕಟ್ಟಿ, ಮೇಲ್ಮಠ ಸೇರದಂತೆ ವಿವಿಧ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮುದೇನಗುಡಿ ರಸ್ತೆ ಹಾಗೂ ಸೇತುವೆ ಜಲಾವೃತಗೊಂಡಿದ್ದು, ಸಂಚಾರ ಸ್ಥಗಿತಗೊಂಡಿದೆ. ಇದರಿಂದ ಹುಲ್ಲೂರ ಗ್ರಾಮವು ನಡುಗಡ್ಡೆಯಂತಾಗಿದೆ‌. ಹಿರೇಹಳ್ಳದ ಪಕ್ಕದಲ್ಲಿರುವ ಹುಲ್ಲೂರ ಗ್ರಾಮದ ಜನವಸತಿ ಪ್ರದೇಶಗಳಿಗೆ ನೀರು ನುಗ್ಗಿದ ಪರಿಣಾಮ ಗ್ರಾಮಸ್ಥರಿಗೆ ಹಾಗೂ ರೈತರಿಗೆ ತೀವ್ರ ತೊಂದರೆ ಉಂಟಾಗಿದೆ. ಹಳ್ಳದ ಪಕ್ಕದ ಜಮೀನುಗಳಿಗೆ ನೀರು ನುಗ್ಗಿದ್ದರಿಂದ ಹೆಸರು ಬೆಳೆ, ಮೆಕ್ಕೆಜೋಳ , ಈರುಳ್ಳಿ , ಮೆಣಸಿನಕಾಯಿ ಸೇರಿದಂತೆ ವಿವಿಧ ಬೆಳೆಗಳು ಕೊಚ್ಚಿಹೋಗಿದ್ದು, ಸಾಕಷ್ಟು ಹಾನಿ ಸಂಭವಿಸಿದೆ. ಜಮೀನುಗಳು ಜಲಾವೃತವಾಗಿದ್ದು ಬೆಳೆಗಳು ಸಂಪೂರ್ಣ ನಾಶವಾಗುತ್ತಿವೆ.

ಈಗಾಗಲೇ ಕಟಾವಿಗೆ ಬಂದಿರುವ ಬೆಳೆಗಳು ಕೈಗೆ ಬಂದ ತುತ್ತು ಬಾಯಿಗೆ ಬರದಂತಹ ಸ್ಥಿತಿ ನಿರ್ಮಾಣಗೊಂಡಿದೆ. ರೈತರು ಸಾಲ ಸೂಲ ಮಾಡಿ ಬೆಳೆ ಬೆಳೆದಿದ್ದು ಕಟಾವಿನ ಸಮಯದಲ್ಲಿ ಸುರಿದ ಮಳೆಯಿಂದ ಗ್ರಾಮದ ರೈತರು ಸಂಕಷ್ಟಕ್ಕೆ ಸಿಲುಕಿದ್ದು ಕೂಡಲೇ ಸರ್ಕಾರ ರೈತರ ನೆರವಿಗೆ ಧಾವಿಸಬೇಕಿದೆ.

ಮುದೇನಗುಡಿ ಮತ್ತು ಹುಲ್ಲೂರು ಮಧ್ಯದ ಹಳ್ಳದ ಸಮಸ್ಯೆ ದಶಕಗಳಿಂದ ಇದ್ದು ಈ ಕುರಿತು ಗ್ರಾಮಸ್ಥರು ಶಾಶ್ವತ ಪರಿಹಾರಕ್ಕೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಒತ್ತಾಯಿಸುತ್ತಾ ಬಂದಿದ್ದರೂ ಇದುವರೆಗೂ ಶಾಶ್ವತ ಪರಿಹಾರ ಕಲ್ಪಿಸುವಲ್ಲಿ ವಿಫಲವಾಗಿರುವುದು ಗ್ರಾಮಸ್ಥರ ಹಾಗೂ ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ಹುಲ್ಲೂರ ಗ್ರಾಮದ ಪಕ್ಕ ಹರಿದಿರುವ ಹಿರೇಹಳ್ಳದಲ್ಲಿ ಮುಳ್ಳು ಕಂಟಿಗಳು ಹೆಮ್ಮರವಾಗಿ ಬೆಳೆದಿದ್ದು, ಮುಳ್ಳು ಕಂಟೆಗಳಿಂದ ಹಳ್ಳವೇ ಮುಚ್ಚಿಹೋಗಿದ್ದು, ಹಳ್ಳದ ನೀರು ಸರಾಗವಾಗಿ ಸಾಗಲು ಸಾಧ್ಯವಾಗದೇ ಜಮೀನು ಹಾಗೂ ಜನವಸತಿ ಪ್ರದೇಶಗಳಿಗೆ ನೀರು ನುಗ್ಗುತ್ತಿದ್ದು, ಈ ಕುರಿತು ಹಲವು ಬಾರಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ, ಸಮಸ್ಯೆ ಮತ್ತಷ್ಟು ಬಿಗಡಾಯಿಸುವ ಮೊದಲು ಅವರು ಎಚ್ಚೆತ್ತುಕೊಂಡು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹುಲ್ಲೂರ ಗ್ರಾಪಂ ಸದಸ್ಯ ಅಶೋಕ ಗಟ್ಟಿ ಆಗ್ರಹಿಸಿದ್ದಾರೆ.

ಹಿರೇಹಳ್ಳದಿಂದ ಪ್ರತಿ ವರ್ಷ ಸಮಸ್ಯೆ: ಮುದೇನಗುಡಿ- ಹುಲ್ಲೂರ ಮಧ್ಯೆ ನಿರ್ಮಿಸಿದ ಸೇತುವೆ ಹೂಳು, ಜಾಲಿಕಂಟೆ ತುಂಬಿದ್ದು, ಇದರಿಂದ ಸ್ವಲ್ಪ ಮಳೆಯಾದರು ಹಳ್ಳದಲ್ಲಿ ಹರಿಯುವ ನೀರಿನಿಂದ ಸೇತುವೆ ಜಲಾವೃತಗೊಂಡು ಸಾಕಷ್ಟು ಆವಾಂತರ ಸೃಷ್ಟಿಸುತ್ತಿದೆ. ಈ ಹಿಂದೆಯೇ ಹಿರೇಹಳ್ಳದ ಸೇತುವೆಯಲ್ಲಿನ ಹೂಳು, ಕಂಟಿಗಳನ್ನು ತೆರವುಗೊಳಿಸಿ ಚೆಕ್ ಡ್ಯಾಂ ನಿರ್ಮಿಸುವ ಮೂಲಕ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ಗ್ರಾಮಸ್ಥರು ಆಗ್ರಹಿಸುತ್ತಾ ಬಂದಿದ್ದರೂ, ಅಧಿಕಾರಿಗಳು ಮಾತ್ರ ಸ್ಪಂದಿಸದೇ ನಿರ್ಲಕ್ಷ್ಯ ಧೋರಣೆ ಮುಂದುವರೆಸಿದ್ದಾರೆ. ಈಗಾಗಲೇ ಸಾಕಷ್ಟು ಸಾಲ ಮಾಡಿಕೊಂಡು ಬೆಳೆ ಬೆಳೆದಿರುವ ರೈತರು ಅಪಾರ ಪ್ರಮಾಣ ನಷ್ಟವನ್ನು ಅನುಭವಿಸುವಂತಾಗಿದೆ. ಕೂಡಲೇ ಇದಕ್ಕೆ ಶಾಶ್ವತ ಪರಿಹಾರವನ್ನು ಕಲ್ಪಿಸುವುದರ ಜೊತೆಗೆ ರೈತರಿಗೆ ಆಗಿರುವ ನಷ್ಟಕ್ಕೆ ತ್ವರಿತವಾಗಿ ಪರಿಹಾರ ನೀಡಬೇಕು ಎಂದು ಹುಲ್ಲೂರ ಗ್ರಾಮದ ತಾಒಂ‌ಮಾಜಿ ಉಪಾಧ್ಯಕ್ಷ ದಶರಥ ಗಾಣಗೇರ ಆಗ್ರಹಿಸಿದರು.