ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ಮಂಗಳೂರು ಮಹಾನಗರ ಪಾಲಿಕೆಯಲ್ಲಿ ವ್ಯಾಪಕ ಭ್ರಷ್ಟಾಚಾರ, ಮಧ್ಯವರ್ತಿಗಳ ಹಾವಳಿಯ ಆರೋಪದ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ಅನೇಕ ಅವ್ಯವಹಾರಗಳು ಬಯಲಾಗಿವೆ.ಕಳೆದ ಶನಿವಾರ ಮಂಗಳೂರು ಮತ್ತು ಉಡುಪಿ ಲೋಕಾಯುಕ್ತ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಲೋಕಾಯುಕ್ತರಿಂದ ಸರ್ಚ್ ವಾರಂಟ್ ಪಡೆದು ಅನಿರೀಕ್ಷಿತ ಭೇಟಿ ನೀಡಿ ಕಡತ ಪರಿಶೀಲನೆ ನಡೆಸಿದ್ದರು. ಈ ವೇಳೆ ಮಂಗಳೂರು ಮಹಾನಗರ ಪಾಲಿಕೆಯ ಕಂದಾಯ ವಿಭಾಗ, ಆರೋಗ್ಯ, ಎಂಜಿನಿಯರಿಂಗ್, ಲೆಕ್ಕಪತ್ರ, ನಗರ ಯೋಜನಾ ವಿಭಾಗ ಹಾಗೂ ಆಯುಕ್ತರ ಕಚೇರಿಯಲ್ಲಿ ಕಡತ ವಿಲೇವಾರಿಯಲ್ಲಿ ಭಾರೀ ನ್ಯೂನತೆಗಳು ಕಂಡುಬಂದಿವೆ.
ಬ್ರೋಕರ್ ಬಳಿ 5 ಲಕ್ಷ ರು. ಪತ್ತೆ!:ದಾಳಿ ವೇಳೆ ಬ್ರೋಕರ್ ಒಬ್ಬನ ಬಳಿ ಬರೋಬ್ಬರಿ 5 ಲಕ್ಷ ರು. ಹಣ ಪತ್ತೆಯಾಗಿದೆ. ಕಂದಾಯ ಮತ್ತು ನಗರ ಯೋಜನಾ ವಿಭಾಗದ ಕಚೇರಿಯಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿರುವ ಮಾಹಿತಿ ಲಭಿಸಿದೆ ಎಂದು ಲೋಕಾಯುಕ್ತ ಮಂಗಳೂರು ವಿಭಾಗದ ಎಸ್ಪಿ (ಪ್ರಭಾರ) ಕುಮಾರಚಂದ್ರ ತಿಳಿಸಿದ್ದಾರೆ.
ನಿವೃತ್ತ ಅಧಿಕಾರಿ ಮುಂದುವರಿಕೆ!:ಮಂಗಳೂರು ಮಹಾನಗರ ಪಾಲಿಕೆಯ ಆರೋಗ್ಯ ಅಧಿಕಾರಿಯಾಗಿ ಸೇವೆ ಸಲ್ಲಿಸಿದ ಅಧಿಕಾರಿಯೊಬ್ಬರು ನಿವೃತ್ತರಾಗಿ 15 ವರ್ಷ ಕಳೆದರೂ ಕೂಡ ಈಗಲೂ ಅದೇ ಹುದ್ದೆಯಲ್ಲಿ ಮುಂದುವರಿದಿದ್ದಾರೆ. ಇದು ಮಹಾನಗರ ಪಾಲಿಕೆಯ ಆಡಳಿತಾತ್ಮಕ ದುಷ್ಕೃತ್ಯದ ಸ್ಪಷ್ಟ ನಿದರ್ಶನವನ್ನು ಪ್ರತಿಬಿಂಬಿಸುತ್ತದೆ. ಆರೋಗ್ಯ ವಿಭಾಗದಲ್ಲಿ ಹಲವಾರು ಉದ್ದಿಮೆ ಪರವಾನಗಿಯ ಕಡತಗಳು, ಟ್ರೇಡ್ ಲೈಸನ್ಸ್ ವೆಬ್‌ಸೈಟ್‌ನಲ್ಲಿ ಬಾಕಿ ಇರುವುದು ಕಂಡುಬಂದಿದೆ. ವ್ಯಾಪಾರ ಪರವಾನಗಿಗಳನ್ನು ನವೀಕರಿಸದೆ, ಅದಕ್ಕೆ ಅನುಗುಣವಾದ ಶುಲ್ಕವನ್ನೂ ಸಂಗ್ರಹಿಸಿಲ್ಲ. ಎಂಜಿನಿಯರಿಂಗ್ ವಿಭಾಗದಲ್ಲಿನ ಹಳೆಯ ಕಡತಗಳನ್ನು ಬಾಕಿ ಇರಿಸಿರುವುದು ಕಂಡುಬಂದಿದೆ. ಲೆಕ್ಕಪತ್ರ ವಿಭಾಗದಲ್ಲಿ ಕಾಲಮಿತಿಯೊಳಗೆ ಬಿಲ್‌ಗಳನ್ನು ವಿಲೇವಾರಿಗೊಳಿಸದೆ ಬಾಕಿ ಇರಿಸುವುದು ಕಂಡುಬಂದಿದೆ ಎಂದು ಲೋಕಾಯುಕ್ತ ಎಸ್ಪಿ ತಿಳಿಸಿದ್ದಾರೆ.
ಕಟ್ಟಡಗಳಿಗೆ ಕಾನೂನು ಬಾಹಿರ ಅನುಮತಿ:ನಗರ ಯೋಜನಾ ವಿಭಾಗದಲ್ಲಿ ಕಟ್ಟಡ ಪರವಾನಗಿ ನೀಡುವ ಸಮಯ ಯಾವುದೇ ನಿಬಂಧನೆಗಳನ್ನು ಪಾಲಿಸದೆ ಪರವಾನಗಿ ನೀಡಿರುವುದು, ಬಿಲ್ಡಿಂಗ್ ಬೈಲಾ ನಿಯಮಗಳನ್ನು ಉಲ್ಲಂಘಿಸಿದ ಕಟ್ಟಡಗಳಿಗೆ ಡೆಮೋಲೀಷನ್ ಆರ್ಡರ್ ಹೊರಡಿಸಿದ್ದರೂ, ಟೌನ್ ಪ್ಲಾನಿಂಗ್ ವಿಭಾಗದ ಎಂಜಿನಿಯರ್‌ಗಳು ಮತ್ತು ಆಯುಕ್ತರು ಇಂತಹ ಕಟ್ಟಡಗಳಿಗೆ ಕಾನೂನುಬಾಹಿರವಾಗಿ ಅನುಮತಿ ನೀಡಿರುವುದೂ ಬೆಳಕಿಗೆ ಬಂದಿದೆ.
ಕೃತಕ ಪ್ರವಾಹಕ್ಕೆ ಇದೇ ಕಾರಣ:ನಗರದ ಒಳಚರಂಡಿ ಮೇಲುಸ್ತುವಾರಿ ವಿಭಾಗದ ಅಧಿಕಾರಿಗಳಾದ ಕಾರ್ಯಪಾಲಕ ಅಭಿಯಂತರರು, ಸಹಾಯಕ ಕಾರ್ಯಪಾಲಕ ಅಭಿಯಂತರರು ಹಾಗೂ ಒಳಚರಂಡಿ ವಿಭಾಗದ ಅಧಿಕಾರಿಗಳು ನಗರದ ರಾಜಕಾಲುವೆ, ತೋಡುಗಳಿಗೆ ಕಟ್ಟಡಗಳಿಂದ ನೀರು ಅನಧಿಕೃತವಾಗಿ ಹರಿಯಲು ಅವಕಾಶ ಮಾಡಿಕೊಟ್ಟು ಇದರ ಉಲ್ಲಂಘನೆಯ ಕುರಿತು ಯಾವುದೇ ಕ್ರಮ ಕೈಗೊಳ್ಳದೆ, ಮಳೆಗಾಲ ಸಮಯದಲ್ಲಿ ಹಲವಾರು ಪ್ರದೇಶಗಳಲ್ಲಿ ಚರಂಡಿಯ ನೀರು ಜನವಸತಿ ಪ್ರದೇಶಗಳಿಗೆ ಹರಿದು ಹೋಗಿ ಅನಾರೋಗ್ಯಕರವಾದ ವಾತಾವರಣ ಸೃಷ್ಟಿಮಾಡಲು ಕಾರಣಕರ್ತರಾಗಿರುವ ಮಾಹಿತಿ ತಿಳಿದುಬಂದಿದೆ. ಎಸ್‌ಟಿಪಿ ಮತ್ತು ವೆಟ್‌ವೆಲ್‌ಗಳ ನಿರ್ವಹಣೆಯನ್ನು ಸರಿಯಾದ ರೀತಿಯಲ್ಲಿ ನಡೆಸದೆ, 25ಕ್ಕಿಂತ ಹೆಚ್ಚಿನ ಯುನಿಟ್‌ಗಳಿರುವ ಅಪಾರ್ಟ್‌ಮೆಂಟ್ ಕಾಂಪ್ಲೆಕ್ಸ್‌ಗಳಿಗೆ ಎಸ್‌ಟಿಪಿ ನಿರ್ಮಿಸಲು ಒತ್ತಾಯಿಸದೆ ಅಸ್ತಿತ್ವದಲ್ಲಿರುವ ಯುಜಿಡಿ ನೆಟ್‌ವರ್ಕ್‌ಗೆ ಸಂಪರ್ಕಿಸಲು ಅನುಮತಿ ನೀಡಿರುವುದು ಗೊತ್ತಾಗಿದೆ. ಇದರಿಂದ ನದಿಗಳು ಹಾಗೂ ತೋಡುಗಳ ಮಾಲಿನ್ಯತೆಗೆ ಕಾರಣವಾಗಿದೆ. ಈ ಬಗ್ಗೆ ಸಮಗ್ರ ವರದಿಯನ್ನು ಲೋಕಾಯುಕ್ತ ಕೇಂದ್ರ ಕಚೇರಿಗೆ ಸಲ್ಲಿಸಲಾಗುವುದು ಎಂದು ಕುಮಾರಚಂದ್ರ ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಮಂಗಳೂರು ಲೋಕಾಯುಕ್ತ ಕಚೇರಿಯ ಪೊಲೀಸ್ ಉಪಾಧೀಕ್ಷಕರಾದ ಡಾ.ಗಾನ ಪಿ. ಕುಮಾರ್, ಸುರೇಶ್ ಕುಮಾರ್ ಪಿ. ಹಾಗೂ ಪೊಲೀಸ್ ನಿರೀಕ್ಷಕರಾದ ಭಾರತಿ ಜಿ., ಚಂದ್ರಶೇಖರ್ ಕೆ.ಎನ್. ಮತ್ತು ಉಡುಪಿ ಲೋಕಾಯುಕ್ತ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಮಂಜುನಾಥ, ರಾಜೇಂದ್ರ ನಾಯ್ಕ್ ಎಂ.ಎನ್. ಪಾಲ್ಗೊಂಡಿದ್ದರು.