ಸಾರಾಂಶ
ನದಿ ತೀರದಲ್ಲಿ ಪ್ರವಾಸಿಗರು ತೆರಳದಂತೆ ನಿಗಾವಹಿಸಲಾಗಿದೆ.
ಹೊಸಪೇಟೆ: ತುಂಗಭದ್ರಾ ಜಲಾಶಯದ ಒಳಹರಿವು ಹೆಚ್ಚುತ್ತಿದ್ದು, ಶುಕ್ರವಾರ ಕೂಡ 33 ಗೇಟ್‌ಗಳಿಂದ 1,70,321 ಕ್ಯುಸೆಕ್ ನೀರು ನದಿಗೆ ಹರಿಬಿಡಲಾಯಿತು.
ಹಂಪಿಯ ನದಿಯಲ್ಲಿರುವ ಪುರಂದರದಾಸರ ಮಂಟಪ ಸಂಪೂರ್ಣ ಮುಳುಗಡೆಯಾಗಿದೆ. ಹಂಪಿಯಲ್ಲಿ ನದಿಗೆ ಭಾರೀ ನೀರು ಬಿಟ್ಟಿರುವುದರಿಂದ ಪ್ರವಾಸಿಗರಿಗೆ ಎಚ್ಚರಿಕೆ ವಹಿಸಲು ಪೊಲೀಸರು ಮುನ್ನೆಚ್ಚರಿಕೆ ಕ್ರಮಕೈಗೊಂಡಿದ್ದಾರೆ. ನದಿ ತೀರದಲ್ಲಿ ಪ್ರವಾಸಿಗರು ತೆರಳದಂತೆ ನಿಗಾವಹಿಸಲಾಗಿದೆ.ಜಲಾಶಯದಿಂದ ಭಾರೀ ಪ್ರಮಾಣದಲ್ಲಿ ನೀರು ಬಿಟ್ಟಿರುವುದರಿಂದ ಹಂಪಿಯಲ್ಲಿ ಪೊಲೀಸ್ ಬಂದೋಬಸ್ತ್ ಕೂಡ ಹೆಚ್ಚಿಸಲಾಗಿದೆ. ನದಿ ತೀರದಲ್ಲಿ ಪ್ರವಾಸಿಗರು ಕೂಡ ಸುಳಿಯದಂತೆ ಎಚ್ಚರಿಕೆ ವಹಿಸಲಾಗುತ್ತಿದೆ. ನದಿ ತೀರದ ಸ್ಮಾರಕಗಳ ಬಳಿ ಸೆಲ್ಫಿ ತೆಗೆದುಕೊಳ್ಳುವುದನ್ನು ನಿರ್ಬಂಧಿಸಲಾಗುತ್ತಿದೆ. ಈಗಾಗಲೇ ದೇಶ, ವಿದೇಶಗಳಿಂದ ಆಗಮಿಸಿರುವ ಪ್ರವಾಸಿಗರಿಗೆ ಹಂಪಿ ನದಿ ತೀರಕ್ಕೆ ತೆರಳದಂತೆ ಬ್ಯಾರಿಕೇಡ್‌ಗಳನ್ನು ಕೂಡ ಅಳವಡಿಕೆ ಮಾಡಿ ಎಚ್ಚರಿಸಲಾಗುತ್ತಿದೆ.
ಮಂಟಪಗಳು ಮುಳುಗಡೆ:ಹಂಪಿಯ ಪುರಂದರದಾಸರ ಮಂಟಪ ಸಂಪೂರ್ಣ ಮುಳುಗಡೆಯಾಗಿದ್ದು, ರಘುನಂದನ ತೀರ್ಥರ ಬೃಂದಾವನ, ಸುಗ್ರೀವ ಗುಹೆ, ಸೀತೆ ಸೆರಗು, ವಿಷ್ಣುವಿನ ದಶಾವತಾರ ಉಬ್ಬು ಶಿಲ್ಪಗಳು, ಕೋಟಿಲಿಂಗಗಳು ಜಲಾವೃತವಾಗಿವೆ. ಧಾರ್ಮಿಕ ವಿಧಿವಿಧಾನ ನೆರವೇರಿಸುವ ಮಂಟಪ, ಸ್ನಾನಘಟ್ಟ, ವಿಷ್ಣು ಮಂಟಪ, ತುಂಗಾರತಿ ಸ್ಥಳ, ಕಾಲು ಸೇತುವೆ, ಜನಿವಾರ ಮಂಟಪಗಳು ಮುಳುಗಡೆಯಾಗಿವೆ.
ಹಂಪಿಯ ಕೋದಂಡರಾಮಸ್ವಾಮಿ ದೇವಾಲಯವೂ ಜಲಾವೃತವಾಗಿದೆ. ಕಂಪಭೂಪ ಮಾರ್ಗ ಕೂಡ ಬಂದ್ ಆಗಿದೆ. ಜಲಾಶಯದ ಒಳಹರಿವು 2,01,659 ಕ್ಯುಸೆಕ್ ಇದೆ. ಜಲಾಶಯದಿಂದ ಭಾರೀ ಪ್ರಮಾಣದ ನೀರು ನದಿ ಒಡಲು ಸೇರುತ್ತಿದೆ. ನದಿಯಲ್ಲಿ ಬೋಟಿಂಗ್, ಹರಿಗೋಲು ಸೇವೆ ಸ್ಥಗಿತಗೊಳಿಸಲಾಗಿದೆ.