ಹಲವು ದಿನಗಳ ಬಿಸಿಲಿನ ಝಳಕ್ಕೆ ತತ್ತರಿಸಿದ್ದ ಹುಬ್ಬಳ್ಳಿ ನಗರಕ್ಕೆ ಬುಧವಾರ ಸಂಜೆ ವರುಣ ತಂಪೆರೆದ. ಗುಡುಗು-ಸಿಡಿಲಿನ ಅಬ್ಬರದೊಂದಿಗೆ ಗಂಟೆಗೂ ಹೆಚ್ಚು ಕಾಲ ರಭಸದ ಮಳೆ ಸುರಿದ ಪರಿಣಾಮ ನಗರದ ಹಲವು ಪ್ರದೇಶಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿತು.

ಹುಬ್ಬಳ್ಳಿ:

ಹಲವು ದಿನಗಳ ಬಿಸಿಲಿನ ಝಳಕ್ಕೆ ತತ್ತರಿಸಿದ್ದ ಹುಬ್ಬಳ್ಳಿ ನಗರಕ್ಕೆ ಬುಧವಾರ ಸಂಜೆ ವರುಣ ತಂಪೆರೆದ. ಗುಡುಗು-ಸಿಡಿಲಿನ ಅಬ್ಬರದೊಂದಿಗೆ ಗಂಟೆಗೂ ಹೆಚ್ಚು ಕಾಲ ರಭಸದ ಮಳೆ ಸುರಿದ ಪರಿಣಾಮ ನಗರದ ಹಲವು ಪ್ರದೇಶಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿತು.

ಇಲ್ಲಿನ ಚೆನ್ನಮ್ಮ ವೃತ್ತ, ಡಾ. ಬಿ.ಆರ್. ಅಂಬೇಡ್ಕರ್‌ ವೃತ್ತ, ಹಳೇಹುಬ್ಬಳ್ಳಿ, ಆನಂದ ನಗರ, ದಾಜಿಬಾನ ಪೇಟೆ, ಜನತಾ ಬಜಾರ್‌ ಸೇರಿದಂತೆ ವಿವಿಧೆಡೆ ಧಾರಾಕಾರ ಮಳೆಯಾಯಿತು. ಏಕಾಏಕಿ ಸುರಿದ ಮಳೆಯಿಂದ ದ್ವಿಚಕ್ರ ವಾಹನ ಸವಾರರು, ಪಾದಚಾರಿಗಳು ಪರದಾಡಿದರು.

ಉಣಕಲ್ಲ ಕೆರೆ ಬಳಿಯ ಪ್ರೆಸಿಡೆಂಟ್‌ ಹೋಟೆಲ್‌ ಮುಂಭಾಗ, ದಾಜಿಬಾನ ಪೇಟೆ, ಜನತಾ ಬಜಾರ್‌, ಸಿಬಿಟಿ, ತುಳಜಾಭವಾನಿ ವೃತ್ತ, ಮಂಗಳವಾರ ಪೇಟೆ ಹಾಗೂ ಶೀಲವಂತರ ಓಣಿ ಸೇರಿದಂತೆ ಹಲವು ಕಡೆ ಚರಂಡಿಗಳು ತುಂಬಿ ಕೊಳಚೆ ನೀರು ರಸ್ತೆಗೆ ಹರಿಯಿತು. ಇದರಿಂದ ವಾಹನ ಹಾಗೂ ಜನರ ಸಂಚಾರಕ್ಕೆ ತೊಂದರೆಯಾಯಿತು.

ಮಳೆಯೊಂದಿಗೆ ಬಿರುಗಾಳಿ ಬೀಸಿದ ಪರಿಣಾಮ ಕೇಶ್ವಾಪುರ, ಗೋಪನಕೊಪ್ಪ, ವಿದ್ಯಾನಗರ, ನವನಗರ ಸೇರಿದಂತೆ ಹಲವು ಬಡಾವಣೆಗಳಲ್ಲಿ ಕೆಲಕಾಲ ವಿದ್ಯುತ್‌ ಸಂಪರ್ಕ ಕಡಿತಗೊಂಡಿತು. ಮಳೆ ಇಳಿಮುಖವಾಗುತ್ತಿದ್ದಂತೆ ವಿದ್ಯುತ್‌ ಸಂಪರ್ಕ ಪುನಃ ಬಂದ ಹಿನ್ನೆಲೆ ಜನತೆ ನಿಟ್ಟುಸಿರು ಬಿಟ್ಟರು. ಬಿಸಿಲಿನಿಂದ ಬಸವಳಿದಿದ್ದ ಜನರಿಗೆ ಮಳೆ ತಂಪಿನ ಅನುಭವ ನೀಡಿದರೂ, ಚರಂಡಿ ನೀರು ರಸ್ತೆಗೆ ಹರಿದ ಪರಿಣಾಮ ತಗ್ಗು ಪ್ರದೇಶಗಳ ನಿವಾಸಿಗಳು ಪರದಾಡಿದರು.

ಧಾರಾವಾಡದಲ್ಲಿ ಸಾಧಾರಣ ಮಳೆ:

ಧಾರವಾಡದಲ್ಲೂ ಬುಧವಾರ ಸಂಜೆಯ ವೇಳೆ ಅರ್ಧಗಂಟೆಗೂ ಹೆಚ್ಚುಕಾಲ ಸಾಧಾರಣ ಮಳೆ ಸುರಿಯಿತು.. ದುಡಿಮೆ, ಇನ್ನಿತರೆ ಕೆಲಸ-ಕಾರ್ಯಗಳಿಗಾಗಿ ನಗರಕ್ಕೆ ಆಗಮಿಸಿದ್ದ ಜನತೆ ಮಳೆಯಿಂದಾಗಿ ಅಕ್ಕಪಕ್ಕದ ಅಂಗಡಿಗಳ ಆಶ್ರಯ ಪಡೆದರು. ಇನ್ನು ಕೆಲವರು ಸುರಿಯುವ ಮಳೆಯನ್ನು ಲೆಕ್ಕಿಸದೇ ಬಸ್‌ ನಿಲ್ದಾಣಗಳತ್ತ ಹೆಜ್ಜೆ ಹಾಕುತ್ತಿರುವುದು ಕಂಡುಬಂದಿತು. ಇನ್ನು ದ್ವಿಚಕ್ರ ವಾಹನ ಸವಾರರು ಸುರಿಯುತ್ತಿದ್ದ ತುಂತುರು ಮಳೆಯಲ್ಲಿಯೇ ತಮ್ಮ ಮನೆಗೆ ತೆರಳಿದರು.