ಜಿಲ್ಲಾದ್ಯಂತ ಭಾರಿ ಮಳೆ ತುಂಬಿ ಹರಿದ ಹಳ್ಳ ಕೊಳ್ಳ

| Published : Nov 10 2023, 01:03 AM IST / Updated: Nov 10 2023, 01:04 AM IST

ಸಾರಾಂಶ

ಜಿಲ್ಲಾದ್ಯಂತ ತಡವಾಗಿಯಾದರೂ ಹಿಂಗಾರು ಮಳೆ ಅಬ್ಬರಿಸಿದ್ದು, ಜಿಲ್ಲಾದ್ಯಂತ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ಬಹುತೇಕ ರೈತರು ಸಂತಸ ವ್ಯಕ್ತಪಡಿಸಿದ್ದಾರೆ. ಆದರೆ, ಬೆಳೆ ಕಟಾವು ಮಾಡುತ್ತಿರುವ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಕನ್ನಡಪ್ರಭ ವಾರ್ತೆ ಕೊಪ್ಪಳ

ಜಿಲ್ಲಾದ್ಯಂತ ತಡವಾಗಿಯಾದರೂ ಹಿಂಗಾರು ಮಳೆ ಅಬ್ಬರಿಸಿದ್ದು, ಜಿಲ್ಲಾದ್ಯಂತ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ಬಹುತೇಕ ರೈತರು ಸಂತಸ ವ್ಯಕ್ತಪಡಿಸಿದ್ದಾರೆ. ಆದರೆ, ಬೆಳೆ ಕಟಾವು ಮಾಡುತ್ತಿರುವ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ತಡರಾತ್ರಿ ಏಕಾಏಕಿ ಸುರಿಯಲು ಆರಂಭಿಸಿದ ಮಳೆ, ಸುಮಾರು 3 ಗಂಟೆಗೂ ಹೆಚ್ಚು ಕಾಲ ಸುರಿದಿದೆ, ಕೆಲವೊಂದು ಭಾಗದಲ್ಲಿ ಬೆಳಿಗ್ಗೆವರೆಗೂ ಸುರಿದಿದೆ.

ಕೊಪ್ಪಳ ತಾಲೂಕಿನಲ್ಲಿ ಅತ್ಯುತ್ತಮ ಮಳೆಯಾಗಿದೆ. ಕುಕನೂರು, ಯಲಬುರ್ಗಾ ತಾಲೂಕಿನಲ್ಲಿಯೂ ಭಾರಿ ಮಳೆಯಾಗಿರುವ ವರದಿಯಾಗಿದೆ. ಜಿಲ್ಲೆಯಲ್ಲಿ ಸರಾಸರಿ 22 ಮಿ.ಮೀ. ಮಳೆಯಾಗಿದ್ದರೆ ಕನಕಗಿರಿ ಹೋಬಳಿಯಲ್ಲಿ ಬರೋಬ್ಬರಿ 42 ಮಿ.ಮೀ. ಗರಿಷ್ಠ ಮಳೆಯಾಗಿರುವುದು ದಾಖಲಾಗಿದೆ.

800 ಹೆಕ್ಟೇರ್ ಭತ್ತ ಹಾನಿ: ಜಿಲ್ಲಾದ್ಯಂತ ಸುರಿದ ಮಳೆ ಮತ್ತು ಗಾಳಿಯಿಂದಾಗಿ ಸುಮಾರು 800 ಹೆಕ್ಟೇರ್ ಭತ್ತ ಹಾನಿಯಾಗಿದೆ ಎಂದು ಕೃಷಿ ಇಲಾಖೆ ಪ್ರಾಥಮಿಕ ಅಂದಾಜಿಸಿದೆ. ಇನ್ನು ಸರ್ವೆ ನಡೆಯುತ್ತಿರುವುದರಿಂದ ಹಾನಿಯ ಪ್ರಮಾಣ ಹೆಚ್ಚಳವಾಗುವ ಸಾಧ್ಯತೆ ಇದೆ. ಗಂಗಾವತಿ, ಕಾರಟಗಿ ತಾಲೂಕು ವ್ಯಾಪ್ತಿಯಲ್ಲಿ ಗಾಳಿ-ಮಳೆಗೆ ಭತ್ತ ನೆಲಕಚ್ಚಿದೆ. ಕಟಾವಿಗೆ ಬಂದಿದ್ದ ಬೆಳೆ ನೆಲಕಚ್ಚಿದ್ದರಿಂದ ಈಗ ಕಟಾವು ಮಾಡಲು ಆಗುವುದಿಲ್ಲ, ಬಹುತೇಕ ಮಣ್ಣುಪಾಲಾಗಿದೆ ಎಂದಿದ್ದಾರೆ.

ಕೊಪ್ಪಳ ತಾಲೂಕಿನ ಅಳವಂಡಿ, ಕವಲೂರು ಭಾಗದಲ್ಲಿ ಭಾರಿ ಮಳೆಯಾಗಿದೆ. ಕಟಾವು ಮಾಡುತ್ತಿರುವ ಈರುಳ್ಳಿ, ಮೆಕ್ಕೆಜೋಳ, ಶೇಂಗಾ ಬೆಳೆಗಳಿಗೆ ಅಲ್ಪಪ್ರಮಾಣದಲ್ಲಿ ಹಾನಿಯಾಗಿದೆ. ಕೊಪ್ಪಳ ತಾಲೂಕಿನಾದ್ಯಂತ ಈರುಳ್ಳಿ ಕಟಾವು ನಡೆಯುತ್ತಿದೆ. ಈಗ ಮಳೆಯಿಂದ ಅದನ್ನು ಕಾಪಾಡಿಕೊಳ್ಳುವುದು ರೈತರಿಗೆ ದೊಡ್ಡ ಸವಾಲಾಗಿದೆ. ಮಳೆಯ ಲಕ್ಷಣ ಇಲ್ಲದೇ ಏಕಾಏಕಿ ಮಳೆ ಸುರಿದಿದ್ದರಿಂದ ಕೆಲವೊಂದು ಬೆಳೆಗಳು ನೀರಿನಲ್ಲಿ ತೋಯ್ದು, ನಷ್ಟವಾಗಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

ಕೊಪ್ಪಳ ತಾಲೂಕಿನ ರಘುನಾಥ ಹಳ್ಳಿಯ ವ್ಯಾಪ್ತಿಯಲ್ಲಿ ಶೇಂಗಾ ಬೆಳೆ ಕಟಾವು ನಡೆದಿದ್ದು, ರೈತರು ಶೇಂಗಾ ಬೆಳೆಯನ್ನು ಹೊಲದಲ್ಲಿ ಕಿತ್ತು, ಗುಂಪೆ ಹಾಕಿರುವಾಗಲೇ ಮಳೆ ಸುರಿದಿದ್ದರಿಂದ ಸಮಸ್ಯೆಯಾಗಿದೆ. ಮೇವು ಜಾನುವಾರುಗಳಿಗೆ ತಿನ್ನಲು ಬಾರದಂತಾಗಿದೆ ಎಂದರು.

ಅಳವಂಡಿ ಭಾಗದಲ್ಲಿ ಹಳ್ಳಕೊಳ್ಳಗಳು ತುಂಬಿ ಹರಿದಿವೆ. ಇದರಿಂದ ನೀರಿನ ಅಭಾವ ನೀಗುವಂತಾಗಿದೆ ಎಂದು ರೈತರು ಸಂತಸ ವ್ಯಕ್ತಪಡಿಸಿದ್ದಾರೆ. ಕಳೆದೆರಡು ತಿಂಗಳಿಂದ ಮಳೆಯೇ ಇರಲಿಲ್ಲ. ಆದರೆ, ಈಗ ಬರೋಬ್ಬರಿ ಮಳೆಯಾಗಿದ್ದರಿಂದ ಜಾನುವಾರುಗಳಿಗೆ ಮೇವಿನ ಸಮಸ್ಯೆಯೂ ನೀಗಲಿದೆ ಎಂದಿದ್ದಾರೆ.

ಜಿಲ್ಲಾದ್ಯಂತ ಉತ್ತಮ ಮಳೆಯಾಗಿದೆ. ಕಟಾವಿಗೆ ಬಂದಿದ್ದ ಭತ್ತದ ಬೆಳೆ ಮಾತ್ರ ಕೆಲವೆಡೆ ಹಾನಿಯಾಗಿದೆ. ಸರ್ವೆ ನಡೆಯುತ್ತಿದೆ. ಉಳಿದಂತೆ ಇತರೆ ಬೆಳೆಗೆ ಅಷ್ಟಾಗಿ ಹಾನಿಯಾಗಿಲ್ಲ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ರುದ್ರೇಶಪ್ಪ ತಿಳಿಸಿದ್ದಾರೆ.