ಸಾರಾಂಶ
ಕನ್ನಡಪ್ರಭ ವಾರ್ತೆ ಶ್ರೀರಂಗಪ್ಟಟಣ
ಸೋಮವಾರ ರಾತ್ರಿಯಿಡಿ ಸುರಿದ ಧಾರಾಕಾರ ಮಳೆಗೆ ಹಳೇ ಮೈಸೂರು- ಬೆಂಗಳೂರು ಹೆದ್ದಾರಿ ಜಲಾವೃತಗೊಂಡು ವಾಹನ ಸವಾರರು ಪರದಾಟ ನಡೆಸಿದ ಘಟನೆ ನಡೆದಿದೆ.ಪಟ್ಟಣದ ಅಗ್ನಿಶಾಮಕ ಠಾಣಾ ಬಳಿಯ ಹೆದ್ದಾರಿ ಮಳೆಯಿಂದಾಗಿ ಸಂಪೂರ್ಣವಾಗಿ ಜಲಾವೃತಗೊಂಡು ಮೈಸೂರಿನಿಂದ ಶ್ರೀರಂಗಪಟ್ಟಣ ಮಾರ್ಗವಾಗಿ ಬೆಂಗಳೂರು ಕಡೆಗೆ ತೆರಳುತ್ತಿದ್ದ ವಾಹನ ಸವಾರರು ಸುಗಮ ಸಂಚಾರಕ್ಕಾಗಿ ಹರಸಾಹಸ ಪಡುವಂತಾಯಿತು.
ಸೋಮವಾರ ರಾತ್ರಿ ಆರಂಭವಾದ ಮಳೆ ಮುಂಜಾನೆ ವರೆವಿಗೂ ಧಾರಾಕಾರವಾಗಿ ಸುರಿದ ಪರಿಣಾಮ ರಸ್ತೆ ಮಧ್ಯೆ ಸುಮಾರು 3 ಅಡಿ ಯಷ್ಟು ನೀರು ನಿಂತಿದೆ. ಹೆದ್ದಾರಿ ಪಕ್ಕದಲ್ಲಿನ ಖಾಸಗಿ ಲಾಡ್ಜ್, ಅಂಡಗಿ ಮಳಿಗೆಗಳಿಗೂ ಸಹ ನೀರು ನುಗ್ಗಿದೆ. ಇದರಿಂದ ನೀರು ಹೊರ ಹಾಕಲು ಸಿಬ್ಬಂದಿ ಹೈರಾಣಾಗಿದ್ದಾರೆ.ರಸ್ತೆ ಬದಿಯಲ್ಲಿ ಚರಂಡಿ ವ್ಯವಸ್ಥೆ ಇಲ್ಲದೆ ಮಳೆ ನೀರು ಹರಿದು ಹೋಗಲು ಸಾಧ್ಯವಾಗದ ಕಾರಣ ಈ ಪರಿಸ್ಥಿತಿ ನಿರ್ಮಾಣವಾಗಿದೆ. ಸಂಬಂಧಪಟ್ಟ ಇಲಾಖೆಗಳ ನಿರ್ಲಕ್ಷದಿಂದಾಗಿ ಇಂತಹ ಪರಿಸ್ಥಿತಿ ನಿರ್ಮಾವಾಗಿದೆ. ಇನ್ನು ಮುಂದಾದರೂ ಪುರಸಭೆ ಅಥವಾ ಸಂಬಂಧಪಟ್ಟವರು ಶೀಘ್ರ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ಹೆದ್ದಾರಿಯಲ್ಲಿ ನಿಂತ ಮಳೆ ನೀರಿನಿಂದಾಗಿ ವಾಹನ ಸವಾರರು ಮುಂದೆ ಸಾಗಲು ಹರಸಾಹಸ ಪಡಬೇಕಾದ ಪರಿಸ್ಥಿತಿ ನಿರ್ಮಾಣವಾದರೆ ಇನ್ನು ಹಲವು ವಾಹನಗಳು ನೀರಿನ ಮಧ್ಯೆ ಸಿಲುಕಿ ಮುಂದೆ ಸಾಗಲು ಸಾಧ್ಯವಾಗದೆ ಪರದಾಟ ನಡೆಸುವಂತಾಯಿತು.ಹೆದ್ದಾರಿಯಲ್ಲಿ ತೆರಳಲಾಗದೆ ಚೆಕ್ ಪೋಸ್ಟ್ ಪಟ್ಟಣ ಒಳ ಪ್ರವೇಶಿಸಿದ ಕೆಲ ವಾಹನ ಸವಾರರು ಜಯಲಕ್ಷ್ಮಿ ಕಲ್ಯಾಣ ಮಂಟಪ, ಅಂಬೇಡ್ಕರ್ ವೃತ್ತ, ಬಾತುಕೋಳಿ ಸರ್ಕಲ್ ಮೂಲಕ ಬೆಂಗಳೂರು-ಮೈಸೂರು ಹೆದ್ದಾರಿ ಪ್ರವೇಶಿಸಿ ಸಾಗಿದ್ದಾರೆ.ಇಂದು, ನಾಳೆ ನೀರು ಸರಬರಾಜು ವ್ಯತ್ಯಯ
ಮಂಡ್ಯ:ನಗರ ನೀರು ಸರಬರಾಜು ವ್ಯವಸ್ಥೆ ನಿರ್ವಹಣೆಯಡಿ ಶ್ರೀರಂಗಪಟ್ಟಣ ಸಮೀಪವಿರುವ ಮೂಲ ಸ್ಥಾವರದ ಹತ್ತಿರ ಜೋರು ಮಳೆ ಗಾಳಿಯಿಂದಾಗಿ ಕೆ.ಇ.ಬಿ. ವತಿಯಿಂದ ಅಳವಡಿಸಲಾಗಿದ್ದ ವಿದ್ಯುತ್ ಕೇಬಲ್ ದುರಸ್ಥಿಗೊಂಡಿರುವುದರಿಂದ ಮೂಲಸ್ಥಾವರಕ್ಕೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.ಈ ಕಾರಣದಿಂದ ಮೇ 14ರಂದು ನಿಗಧಿತ ಪ್ರಮಾಣದಲ್ಲಿ ಮಂಡ್ಯ ನಗರಕ್ಕೆ ನೀರನ್ನು ಪಂಪು ಮಾಡಲು ಸಾಧ್ಯವಾಗುವುದಿಲ್ಲ. ಮಂಡ್ಯ ನಗರದ ಸಾರ್ವಜನಿಕರಿಗೆ ಮೇ 15 ಮತ್ತು 16 ರಂದು ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ನೀರು ಬಂದ ವೇಳೆ ಶೆಖರಿಸಿಟ್ಟುಕೊಂಡು ಜಲಮಂಡಳಿಯೊಂದಿಗೆ ಸಹಕರಿಸಬೇಕೆಂದು ಮಂಡ್ಯ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರರು ತಿಳಿಸಿದ್ದಾರೆ.