ದೊಡ್ಡಬಳ್ಳಾಪುರ ಸುತ್ತಮುತ್ತ ಮಳೆಯ ಆರ್ಭಟ

| Published : May 22 2024, 12:53 AM IST

ಸಾರಾಂಶ

ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ನಗರ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಸೋಮವಾರ ರಾತ್ರಿ ಮತ್ತು ಮಂಗಳವಾರ ಸಂಜೆ ಬಿರುಗಾಳಿಯೊಂದಿಗೆ ಆರ್ಭಟಿಸಿದ ಮಳೆಯ ಪರಿಣಾಮ ಕೆಲಕಾಲ ಜನಜೀವನ ಅಸ್ತವ್ಯಸ್ತಗೊಂಡಿತ್ತು.

ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ನಗರ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಸೋಮವಾರ ರಾತ್ರಿ ಮತ್ತು ಮಂಗಳವಾರ ಸಂಜೆ ಬಿರುಗಾಳಿಯೊಂದಿಗೆ ಆರ್ಭಟಿಸಿದ ಮಳೆಯ ಪರಿಣಾಮ ಕೆಲಕಾಲ ಜನಜೀವನ ಅಸ್ತವ್ಯಸ್ತಗೊಂಡಿತ್ತು.

ನಗರದ ವಿವಿಧ ರಸ್ತೆಗಳು ಜಲ ದಿಗ್ಬಂಧನಕ್ಕೊಳಗಾಗಿದ್ದವು. ಕಾಲುವೆ, ಚರಂಡಿಗಳ ನೀರು ರಸ್ತೆಯಲ್ಲಿ ಹರಿದು ಅವಾಂತರ ಸೃಷ್ಟಿಯಾಗಿತ್ತು. ನಗರಸಭೆ ವ್ಯಾಪ್ತಿಯ ಕೆಲ ರಸ್ತೆಗಳಲ್ಲಿ ಒಳಚರಂಡಿ ಮ್ಯಾನ್‌ಹೋಲ್‌ಗಳು ತುಂಬಿ ರಸ್ತೆಯಲ್ಲಿ ತ್ಯಾಜ್ಯ ನೀರು ಹರಿದ ಬಗ್ಗೆ ವರದಿಯಾಗಿದೆ.

ತಗ್ಗುಪ್ರದೇಶದ ಮನೆಗಳಿಗೆ ನೀರು ನುಗ್ಗಿದ್ದು, ಬಿರುಗಾಳಿ ಪರಿಣಾಮ ಕಿಟಕಿ-ಗಾಜುಗಳು ಪುಡಿಯಾಗಿರುವ ಘಟನೆ ನಡೆದಿದೆ. ರಾತ್ರಿಯಿಡೀ ಕೆಲ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯ ಉಂಟಾಗಿತ್ತು. ರಸ್ತೆಗಳಲ್ಲಿ ಗುಂಡಿಗಳು ಹೆಚ್ಚಿರುವ ಕಾರಣ ಮಳೆ ನೀರು ನಿಂತು ದ್ವಿಚಕ್ರ ವಾಹನ ಸವಾರರಿಗೆ ಸಂಕಷ್ಟ ಎದುರಾಗಿತ್ತು. ದೊಡ್ಡಬಳ್ಳಾಪುರ ನಗರ-ಗ್ರಾಮೀಣ ಭಾಗದ ಕೆಲವೆಡೆ ಸಣ್ಣಪುಟ್ಟ ಮರಗಳು, ಕೊಂಬೆಗಳು ಮುರಿದು ಬಿದ್ದಿರುವ ಘಟನೆಗಳೂ ವರದಿಯಾಗಿವೆ.

ಕಾಲೋನಿಗೆ ನುಗ್ಗಿದ ಮಳೆ ನೀರು:

ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ ಬಳಿಯ ಅಜ್ಜನಕಟ್ಟೆಯಲ್ಲಿ ಸೋಮವಾರ ರಾತ್ರಿ ಸುರಿದ ಭಾರೀ ಮಳೆಗೆ ಮನೆಗೆಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ.

ಅಜ್ಜನಕಟ್ಟೆಯ ದಲಿತ ಕಾಲೋನಿಯಲ್ಲಿ ಸುಮಾರು 20ಕ್ಕೂ ಹೆಚ್ಚು ದಲಿತ ಕುಟುಂಬಗಳು ವಾಸವಿದ್ದು, ಜಲ ದಿಗ್ಬಂಧನದಿಂದಾಗಿ ಮಹಿಳೆಯರು, ಮಕ್ಕಳು ಮತ್ತು ವಯೋವೃದ್ದರು ಓಡಾಡಲು ಪರದಾಡುವಂತಾಗಿದೆ. ಮನೆಯ ಸುತ್ತಲಿನ ಗುಂಡಿಗಳು, ರಸ್ತೆಗಳಲ್ಲಿ ಮಳೆ‌ ನೀರು ತುಂಬಿಕೊಂಡಿದ್ದು, ಮಕ್ಕಳು ಶಾಲೆಗೆ ತೆರಳಲು‌ ಕಷ್ಟ ಪಡುವಂತಾಗಿದೆ. ಮಕ್ಕಳನ್ನು ರಸ್ತೆಗೆ ಬಿಡಲು ಪೋಷಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ರಾತ್ರಿ ವೇಳೆ ಮನೆಗೆ ಹಾವು, ಚೇಳುಗಳು ನುಗ್ಗುತ್ತಿವೆ. ದಲಿತ ಕಾಲೋನಿಯಲ್ಲಿ ಸೂಕ್ತ ಚರಂಡಿ, ರಸ್ತೆ‌ ನಿರ್ಮಿಸದೇ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

21ಕೆಡಿಬಿಪಿ1-

ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ ಬಳಿಯ ಅಜ್ಜನಕಟ್ಟೆ ಕಾಲೋನಿಯಲ್ಲಿ ಜಲಪ್ರವಾಹ.21ಕೆಡಿಬಿಪಿ2-

ತಗ್ಗುಪ್ರದೇಶಗಳಿಗೆ ನೀರು ನುಗ್ಗಿ ಉಂಟಾಗಿರುವ ಅವ್ಯವಸ್ಥೆ.