ಸಾರಾಂಶ
ಕನ್ನಡಪ್ರಭ ವಾರ್ತೆ ಕಾರ್ಕಳ
ಕಾರ್ಕಳ ನಗರದಲ್ಲಿ ಕಳೆದ 24 ಗಂಟೆಯಲ್ಲಿ 228.6 ಮಿ.ಮೀ. ಮಳೆಯಾಗಿದ್ದು, ನಗರದ ತಗ್ಗು ಪ್ರದೇಶದ ರಸ್ತೆಗಳಲ್ಲಿ ಕೃತಕ ನೆರೆ ಉಂಟಾಗಿ ರಸ್ತೆ ಸಂಚಾರಕ್ಕೆ ತೊಡಕು ಉಂಟಾಗಿತ್ತು.ನಗರ ವ್ಯಾಪ್ತಿಯ ಜೋಡುರಸ್ತೆ, ಗುಮ್ಮಟ ಬೆಟ್ಟ ರಸ್ತೆ, ಬಸ್ ನಿಲ್ದಾಣ, ಮಂಗಳೂರು ರಸ್ತೆಯಲ್ಲಿ ಎರಡು ಅಡಿ ಎತ್ತರ ನೀರು ನಿಂತು ವಾಹನ ಸಂಚಾರಕ್ಕೆ ತೊಂದರೆಯಾಗಿತ್ತು.ರಸ್ತೆ ಸಂಚಾರ ಸ್ಥಗಿತ:ಕಾರ್ಕಳ ತಾಲೂಕಿನ ಜೀವನದಿ ಸ್ವರ್ಣ ನದಿಯು ಗುರುವಾರ ಎಣ್ಣೆಹೊಳೆ ರಸ್ತೆಯಲ್ಲಿ ಹರಿದು ಹತ್ತಕ್ಕೂ ಹೆಚ್ಚು ಅಂಗಡಿಗಳಿಗೆ ನೀರು ನುಗ್ಗಿತ್ತು. ರಾಜ್ಯ ಹೆದ್ದಾರಿ 1ರಲ್ಲಿ ಸುಮಾರು ನಾಲ್ಕು ಗಂಟೆಗಳ ಕಾಲ ವಾಹನ ಸಂಚಾರ ಸ್ಥಗಿತವಾಗಿತ್ತು. ಕೆಲವು ವಾಹನಗಳು ಬದಲಿ ಮಾರ್ಗದಲ್ಲಿ ಹೆಬ್ರಿಯತ್ತ ಸಾಗಿದವು. ಹೆಬ್ರಿ ತಾಲೂಕಿನ ನಾಡ್ಪಾಲಿನಲ್ಲೂ ಮಳೆಯಿಂದ ಸೀತಾನದಿ ನೀರು ರಸ್ತೆಯಲ್ಲಿ ಹರಿದ ಪರಿಣಾಮ ರಾಷ್ಟ್ರೀಯ ಹೆದ್ದಾರಿ 169ಎಯಲ್ಲಿ ಸಂಚಾರ ಸ್ಥಗಿತಗೊಂಡಿತ್ತು.
ಸೀತಾನದಿ, ಸ್ವರ್ಣ ನದಿಗಳ ಪ್ರವಾಹ ಸಂದರ್ಭ ಅಜೆಕಾರು ಠಾಣಾ ಪೊಲೀಸ್ ಸಿಬ್ಬಂದಿ ಹಾಗೂ ಹೆಬ್ರಿ ಠಾಣಾ ಪೊಲೀಸ್ ಸಿಬ್ಬಂದಿ ಸ್ಥಳೀಯರಿಗೆ ಎಚ್ಚರಿಕೆ ನೀಡುತ್ತಿದ್ದರು.ಭಾರಿ ಹಾನಿ:ಕಳೆದ ಒಂದು ತಿಂಗಳಿನಿಂದ ಸುರಿಯುತ್ತಿರುವ ಭಾರಿ ಮಳೆಗೆ ಸುಮಾರು 7000 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗಿದ್ದ ಭತ್ತ ಕೃಷಿಯು ಸಂಪೂರ್ಣ ನಾಶವಾಗಿದೆ. ಕಲ್ಯಾ ಗ್ರಾಮದ ಗುಲಾಬಿ ಪೂಜಾರ್ತಿ ವಾಸದ ಮನೆ ಮೇಲೆ ಮರಬಿದ್ದು 30000 ರು., ಮಿಯ್ಯಾರು ಗ್ರಾಮದ ಸಂಜೀವ ಚಪರ ಅವರ ಮನೆಯ ಮೇಲೆ ಮರಬಿದ್ದು 300000 ರು., ಕೌಡೂರು ಗ್ರಾಮದ ಬಿ ಬಾವು ಬ್ಯಾರಿ ಮನೆಮೇಲೆ ಮರ ಬಿದ್ದು 40000 ರು., ಪಳ್ಳಿ ಗ್ರಾಮದ ವಿನೋದ ಎಂಬವರ ಮನೆಮೇಲೆ ಮರಬಿದ್ದು 30000 ರು., ಪಳ್ಳಿ ಗ್ರಾಮದ ಸುಜಾತ ನಾಯ್ಕ್ ಎಂಬವರ ಮನೆಮೇಲೆ ಮರಬಿದ್ದು 50000 ರು., ಮುಂಡ್ಕೂರು ಗ್ರಾಮದ ಮಹಾಬಲ ಸಪಳಿಗ ಅವರ ಮನೆಗೆ ಮರ ಬಿದ್ದು 60000 ರು., ಕಡ್ತಲ ಗ್ರಾಮದ ಸತೀಶ್ ಪೂಜಾರಿ ಅವರ ಕಟ್ಟಡದ ಮೇಲ್ಛಾವಣಿ ಗಾಳಿಗೆ ಹಾರಿ 10000 ರು., ನೂರಾಳ್ ಬೆಟ್ಟು ಗ್ರಾಮದ ಸುಮಿತ್ರಾ ದೇವಿ ಅವರ 25 ಅಡಕೆ ಮರಗಳು ಬಿದ್ದು 20,000 ರು., ಮಿಯಾರು ಗ್ರಾಮದ ಚಂದ್ರಶೇಖರ ಅವರ ಮನೆಗೆ ಮರ ಬಿದ್ದು ಭಾಗಶಃ ಹಾನಿ 15,000 ರು., ಮುಡಾರು ಗ್ರಾಮದ ಅಣ್ಣಿ ಪೂಜಾರಿ ಅವರ ಅಡಕೆ ತೋಟಗಾಳಿ ಮಳೆಗೆ ಹಾನಿ 20,000 ರು., ಮುಡಾರು ಗ್ರಾಮದ ಗಿರಿಜ ಎಂಬವರ ವಾಸದ ಮನೆ 30,000 ರು., ಈದು ಗ್ರಾಮದ ಕಮಲ ಅವರ ವಾಸದ ಮನೆಗೆ ತಾಗಿಕೊಂಡಿರುವ ಹಟ್ಟಿಯ ಗೋಡೆಗೆ 15,000 ರು. ಹಾನಿಯಾಗಿದೆ. ಈದು ಗ್ರಾಮದ ಸಂಜೀವ ಶೆಟ್ಟಿಗಾರ್ ಅವರ ಮನೆ ಮೇಲೆ ಮರಬಿದ್ದ 10000 ರು. ಹಾನಿ ಸಂಭವಿಸಿದೆ.
ಮಳೆ ಪ್ರಮಾಣ:ಕಾರ್ಕಳ 228.8 ಮಿ. ಮೀ., ಇರ್ವತ್ತೂರು 226.6 ಮಿ.ಮೀ., ಅಜೆಕಾರು181.4 ಮಿ.ಮೀ., ಸಾಣೂರು 199.8 ಮಿ.ಮೀ., ಕೆದಿಂಜೆ 77.4 ಮಿ. ಮೀ., ಮುಳಿಕಾರು 215 ಮಿ. ಮೀ. ಹಾಗೂ ಕೆರ್ವಾಶೆಯಲ್ಲಿ 184.6 ಮಿ.ಮೀ., ಹೆಬ್ರಿಯಲ್ಲಿ 180.5 ಮಿ.ಮೀ. ಮಳೆ ದಾಖಲಾಗಿದೆ.