ಸಾರಾಂಶ
ಸೋಮವಾರಪೇಟೆ ತಾಲೂಕಿನಲ್ಲಿ ಮುಂಗಾರು ಮಳೆ ಆರ್ಭಟ ಮುಂದುವರಿದಿದ್ದು, ವಿವಿಧೆಡೆ ಸಾಕಷ್ಟು ಹಾನಿಯಾಗಿದೆ.ಕಳೆದ ಮೂರು ದಿನಗಳಿಂದ ಭಾರಿ ಮಳೆಯಾಗಿದ್ದು, ಬಿಟ್ಟು ಬಿಟ್ಟು ಭಾರಿ ಮಳೆಯಾಗುತ್ತಿದೆ. ಮಡಿಕೇರಿಯಿಂದ ಹಾಸನಕ್ಕೆ ತೆರಳುವ ಮಾರ್ಗದ ಗೌಡಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಹೆಗ್ಗುಳ ಗ್ರಾಮದಲ್ಲಿ ಶುಕ್ರವಾರ ಬೆಳಗ್ಗೆ ಬೃಹತ್ ಮರವೊಂದು ಬಿದ್ದು, ಒಂದು ಗಂಟೆ ಸಂಚಾರಕ್ಕೆ ಅಡಚಣೆಯಾಗಿತ್ತು.
ಕನ್ನಡಪ್ರಭ ವಾರ್ತೆ ಸೋಮವಾರಪೇಟೆ
ಸೋಮವಾರಪೇಟೆ ತಾಲೂಕಿನಲ್ಲಿ ಮುಂಗಾರು ಮಳೆ ಆರ್ಭಟ ಮುಂದುವರಿದಿದ್ದು, ವಿವಿಧೆಡೆ ಸಾಕಷ್ಟು ಹಾನಿಯಾಗಿದೆ.ಕಳೆದ ಮೂರು ದಿನಗಳಿಂದ ಭಾರಿ ಮಳೆಯಾಗಿದ್ದು, ಬಿಟ್ಟು ಬಿಟ್ಟು ಭಾರಿ ಮಳೆಯಾಗುತ್ತಿದೆ. ಮಡಿಕೇರಿಯಿಂದ ಹಾಸನಕ್ಕೆ ತೆರಳುವ ಮಾರ್ಗದ ಗೌಡಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಹೆಗ್ಗುಳ ಗ್ರಾಮದಲ್ಲಿ ಶುಕ್ರವಾರ ಬೆಳಗ್ಗೆ ಬೃಹತ್ ಮರವೊಂದು ಬಿದ್ದು, ಒಂದು ಗಂಟೆ ಸಂಚಾರಕ್ಕೆ ಅಡಚಣೆಯಾಗಿತ್ತು. ಮಾಹಿತಿ ಪಡೆದ ಅರಣ್ಯ ಇಲಾಖೆ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಆಗಮಿಸಿ ಮರ ತೆರವುಗೊಳಿಸಿ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.
ಭಾರಿ ಗಾಳಿ ಮಳೆಗೆ ಶಾಂತಳ್ಳಿ ಹೋಬಳಿಯ ಕುಮಾರಳ್ಳಿ(ಬಿದಳ್ಳಿ)ಗ್ರಾಮದ ಪೊನ್ನಪ್ಪ ಈರಪ್ಪ, ವಾಸದ ಮನೆಯ ಹಿಂಬದಿ ಕುಸಿದಿದೆ. ತೋಳೂರುಶೆಟ್ಟಳ್ಳಿ ಗ್ರಾಮದ ನಿವಾಸಿಯಾದ ಟಿ. ಲಕ್ಷ್ಮಮ್ಮ ಅವರ ವಾಸದ ಮನೆ ಗೋಡೆ ಕುಸಿದಿದ್ದು, ಮನೆಯ ಛಾವಣಿಗೆ ಹಾನಿಯಾಗಿದೆ. ಶನಿವಾರಸಂತೆ ಹೋಬಳಿಯ ತ್ಯಾಗರಾಜ ಕಾಲೋನಿ ಗ್ರಾಮದ ಪುಟ್ಟಲಕ್ಷ್ಮಿ ಅವರ ವಾಸದ ಮನೆಯ ಹಿಂಬದಿಯ ಬಲಭಾಗದ ಗೋಡೆ ಪೂರ್ಣ ಕುಸಿದು ಬಿದ್ದಿದ್ದು ಹಾನಿಯಾಗಿದೆ. ಸ್ಥಳಕ್ಕೆ ಕಂದಾಯ ಪರಿವೀಕ್ಷಕರು, ಪಂಚಾಯಿತಿಯ ಕಾರ್ಯದರ್ಶಿಯವರು ಹಾಗೂ ಗ್ರಾಮ ಸಹಾಯಕ ಹಾನಿಯ ಬಗ್ಗೆ ಮಾಹಿತಿ ಪಡೆದರು. ತಾಲೂಕಿನ ಬಿಳಕಿಕೊಪ್ಪ ಗ್ರಾಮದ ಸರಸ್ವತಿ ಮನೆ ಮೇಲೆ ಬುಧವಾರ ಗಾಳಿಯೊಂದಿಗೆ ಸುರಿದ ಭಾರಿ ಮಳೆಗೆ ಮರ ಬಿದ್ದು ಮನೆ ಹಾನಿಯಾಗಿದೆ. ಸ್ಥಳಕ್ಕೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ತಾಲೂಕಿನ ದೊಡ್ಡಬ್ಬೂರು ಗ್ರಾಮದ ಗೌರಿ ರಾಜು ಅವರ ವಾಸದ ಮನೆ ಭಾರಿ ಗಾಳಿ ಮಳೆಗೆ ಕುಸಿದಿದೆ. ಮದಾಪುರ ಬಳಿಯ ಮುವತ್ತೊಕ್ಲು ಗ್ರಾಮದ ಜಾನು ಬೇಡು ಎಂಬವರ ಮನೆ ಕುಸಿದಿದೆ.