ಸಾರಾಂಶ
ಗೋಕರ್ಣ ದೇಗುಲಕ್ಕೆ ನುಗ್ಗಿದ ನೀರಿನಿಂದ ದೇವಾಲಯ ಜಲಾವೃತವಾಗಿದ್ದು, ರಾಜ್ಯದ ಹಲವೆಡೆ ಭಾರೀ ಮಳೆ ಸುರಿದ ಪರಿಣಾಮ ನಾಲ್ವರು ಬಲಿಯಾಗಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಬಿರುಬಿಸಿಲಿನ ನಡುವೆಯೂ ಕರಾವಳಿ, ಮಲೆನಾಡು ಸೇರಿ ರಾಜ್ಯದ 15ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಶನಿವಾರ ಮಳೆ ಸುರಿದಿದ್ದು, ಮಳೆ ಸಂಬಂಧಿ ಅನಾಹುತಕ್ಕೆ ಮತ್ತೆ ನಾಲ್ವರು ಬಲಿಯಾಗಿದ್ದಾರೆ.ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ನರೋಣ ಗ್ರಾಮದಲ್ಲಿ ಬಾಲಕ ಮಹೇಶ್ (10 ), ಶಿವಮೊಗ್ಗ ತಾಲೂಕಿನ ಹರಮಘಟ್ಟದಲ್ಲಿ ತೋಟದ ಕೆಲಸ ಮುಗಿಸಿ ವಾಪಸಾಗುತ್ತಿದ್ದ ರಾಕೇಶ್ (28), ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ಕಾಂತಾವರ ಗ್ರಾಮದಲ್ಲಿ ಮನೆಗೆ ನಡೆದುಕೊಂಡು ಹೋಗುತ್ತಿದ್ದ ಪಾಲಡ್ಕ ನಿವಾಸಿ ನಿತಿನ್ (24) ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಇದೇ ವೇಳೆ, ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ಹರಾಳು ಗ್ರಾಮದಲ್ಲಿ ಎರಡು ದಿನಗಳ ಹಿಂದೆ ಭಾರೀ ಗಾಳಿಗೆ ಮನೆಯ ಚಾವಣಿ ಬಿದ್ದು ಗಾಯಗೊಂಡಿದ್ದ ನಾಗಮ್ಮ ದಡ್ಡಿ (47) ಎಂಬುವರು ಚಿಕಿತ್ಸೆ ಫಲಿಸದೆ ಶನಿವಾರ ಕೊನೆಯುಸಿರೆಳೆದಿದ್ದಾರೆ.
ಮಳೆಯಿಂದಾಗಿ ಗೋಕರ್ಣದ ಮಹಾಬಲೇಶ್ವರ ದೇಗುಲದ ಗರ್ಭಗುಡಿ ಕೆಲಕಾಲ ಜಲಾವೃತ್ತವಾಗಿತ್ತು. ಇದರಿಂದ ಭಕ್ತರಿಗೆ ಸ್ಪರ್ಶದರ್ಶನ ಸಿಗಲಿಲ್ಲ. ಸತತ ಮೂರು ಗಂಟೆಗೂ ಅಧಿಕ ಕಾಲ ನೀರು ತುಂಬಿತ್ತು. ಹಾಸನದಲ್ಲಿ ಭಾರೀ ಗಾಳಿಗೆ ಮನೆಯ ಹೆಂಚುಗಳು ಹಾರಿ ಹೋಗಿವೆ.ಅರಬ್ಬಿ ಸಮುದ್ರದಲ್ಲಿ ಬೀಸಿದ ಭಾರೀ ಗಾಳಿಗೆ ಭಟ್ಕಳದಲ್ಲಿ ಮೀನುಗಾರಿಕೆ ಬೋಟ್ ಮುಳುಗಿತಾದರೂ ಅದರಲ್ಲಿದ್ದ ನಾಲ್ವರು ಮೀನುಗಾರರನ್ನು ಇನ್ನೊಂದು ಬೋಟ್‌ನಲ್ಲಿರುವ ಮೀನುಗಾರರನ್ನು ರಕ್ಷಿಸಲಾಗಿದೆ.
ಇದೇ ವೇಳೆ, ದಾವಣಗೆರೆ, ಗದಗ, ಹಾಸನ, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಚಾಮರಾಜನಗರ, ಶಿವಮೊಗ್ಗ, ಚಿಕ್ಕಮಗಳೂರು, ಧಾರವಾಡ, ಹಾವೇರಿ, ಕೊಪ್ಪಳ, ವಿಜಯನಗರ, ಬೆಂಗಳೂರು ಜಿಲ್ಲೆಗಳಲ್ಲಿಯೂ ಮಳೆಯಾದ ವರದಿಯಾಗಿದೆ.;Resize=(128,128))
;Resize=(128,128))