ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ನೆರೆಯ ಮಹಾರಾಷ್ಟ್ರದ ಪಶ್ಚಿಮಘಟ್ಟ ಪ್ರದೇಶ ಹಾಗೂ ಜಿಲ್ಲೆಯಲ್ಲಿ ಮಂಗಳವಾರವೂ ಅಬ್ಬರದ ಮಳೆ ಮುಂದುವರೆದಿದೆ. ಕೃಷ್ಣಾ, ಮಲಪ್ರಭಾ, ಘಟಪ್ರಭಾ ಸೇರಿದಂತೆ ಜಿಲ್ಲೆಯ ಇತರೆ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ.ಬೆಳಗಾವಿ ವ್ಯಾಪಕ ಮಳೆಯ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ ಎಲ್ಲ ಅಂಗನವಾಡಿ, ಪ್ರಾಥಮಿಕ-ಪ್ರೌಢಶಾಲೆಗಳು ಮತ್ತು ಪದವಿಪೂರ್ವ ಕಾಲೇಜುಗಳಿಗೆ ಜಿಲ್ಲಾಡಳಿತ ಆ.20 ರಂದು ರಜೆ ಘೋಷಿಸಿದೆ.ಮಹಾರಾಷ್ಟ್ರ ರಾಜ್ಯದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ವ್ಯಾಪಕ ಮಳೆ ಸುರಿಯುತ್ತಿದ್ದು, ಕೃಷ್ಣಾ ಹಾಗೂ ಅದರ ಉಪ ನದಿಗಳಾದ ದೂಧಗಂಗಾ, ವೇದಗಂಗಾ ನದಿಗಳು ಉಕ್ಕಿ ಹರಿಯುತ್ತಿವೆ. ಚಿಕ್ಕೋಡಿ ತಾಲೂಕಿನ ಮುಲ್ಲಾನಕಿ ದೂಧಗಂಗಾ ನದಿ ತೀರದಲ್ಲಿರುವ ಹಜರತ ಮನ್ಸೂರ್ ಅಲಿ ದರ್ಗಾ ಮುಳುಗಡೆಯಾಗಿದೆ. ಈ ದರ್ಗಾ ಜಲ ಬಂಧನದಲ್ಲಿದೆ. ನದಿ ತೀರದಲ್ಲಿರುವ ಹೊಲಗದ್ದೆಗಳಿಗೂ ನೀರು ನುಗ್ಗಿದೆ. ಬೆಳೆಗಳೆಲ್ಲವೂ ಜಲಾವೃತಗೊಂಡಿವೆ. ಅಲ್ಲದೇ, ಗಿಡಮರಗಳು ನೀರಿನಲ್ಲಿ ಮುಳುಗಡೆಯಾಗಿವೆ. ನದಿ ತೀರದಲ್ಲಿ ರೈತರು ಅಳವಡಿಸಿದ್ದ ಮೋಟರ್‌ಗಳು ಮುಳುಗಡೆಯಾಗಿವೆ. ಕೆಲವೊಂದು ಮೋಟರ್‌ಗಳು ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿವೆ. ಕೇವಲ ಪೈಪ್‌ಗಳು ಮಾತ್ರ ಉಳಿದಿವೆ. ನದಿಗಳ ಒಳಹರಿವಿನ ಪ್ರಮಾಣ ಏರಿಕೆಯಾಗುತ್ತಿದ್ದು, ನದಿತೀರದ ಗ್ರಾಮಸ್ಥರು ಕಂಗಾಲಾಗಿದ್ದಾರೆ.ಬೆಳಗಾವಿ ತಾಲೂಕಿನಲ್ಲಿ ಬಳ್ಳಾರಿ ನಾಲಾ ತುಂಬಿ ಬರಿಯುತ್ತಿದೆ. ನಾಲಾದ ನೀರಿನ ರಭಸಕ್ಕೆ ರೈತರ ಬೆಳೆಗಳು ಕೊಚ್ಚಿಹೋಗಿವೆ. ಯಳ್ಳೂರು, ಶಹಾಪುರ ಮತ್ತು ವಡಗಾವಿ ಭಾಗದ ರೈತರು ಇತ್ತೀಚೆಗಷ್ಟೇ ಭತ್ತ ನಾಟಿ ಮಾಡಿದ್ದರು. ಈಗ 2ನೇ ಬಾರಿಗೆ ಬಿತ್ತಿ ಮತ್ತೆ ಬೆಳೆಗಳನ್ನು ಕಳೆದುಕೊಳ್ಳುವಂತಾಗಿದೆ. ಬಿತ್ತನೆ ಮಾಡಿದ ಬೆಳೆ ಮೊಳಕೆಯೊಡೆದಿದ್ದರೆ, ಮತ್ತೊಂದೆಡೆಗೆ ನೀರಿನಲ್ಲಿ ಕೊಳೆತುಹೋಗಿವೆ. ಇದರಿಂದಾಗಿ ರೈತರು ಸಂಕಷ್ಟ ಎದುರಿಸುವಂತಾಗಿದೆ. ಬಳ್ಳಾರಿ ನಾಲಾ ನೀರು ಹೊಲಗದ್ದೆಗಳಿಗೆ ನುಗ್ಗಿದೆ. ಎಲ್ಲಿ ನೋಡಿದ್ದಲ್ಲೇ ನೀರೇ ನೀರು ಕಾಣಿಸುತ್ತಿದೆ. ಹೊಲಗದ್ದೆಗಳು ನದಿಗಳಂತೆ ಭಾಸವಾಗುತ್ತಿವೆ.ಮಲಪ್ರಭಾ ನದಿಯ ಒಳಹರಿವು ಹೆಚ್ಚಳವಾಗಿದೆ. ನವಿಲುತೀರ್ಥ ಜಲಾಶಯದಿಂದ 15,375 ಕ್ಯುಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಮುನವಳ್ಳಿ-ಸವದತ್ತಿ ಸಂಪರ್ಕಿಸುವ ಸೇತುವೆ ಮುಳುಗಡೆಯಾಗಿದೆ.ಪೊಲೀಸರಿಂದ ಬ್ಯಾರಿಕೇಡ್ ಅಳವಡಿಕೆ ಮಾಡಲಾಗಿದೆ. ವಾಹನ ಸಂಚಾರ ಸ್ಥಗಿತಗೊಂಡಿದೆ. ಪರ್ಯಾಯ ಮಾರ್ಗದ ಮೂಲಕ ಸಂಚಾರ ವ್ಯವಸ್ಥೆ ಜಾರಿಯಲ್ಲಿದೆ. ಅಲ್ಲದೇ, ರಾಮದುರ್ಗ ತಾಲೂಕಿನಲ್ಲಿ ಮೂರು ಸೇತುವೆ ಮುಳುಗಡೆಯಾಗಿವೆ.ಗೋಡೆ ಕುಸಿದು ಮಹಿಳೆ ಸಾವು:
ಗೋಕಾಕ ನಗರದಲ್ಲಿ ಮನೆ ಗೋಡೆ ಕುಸಿದು ಬಿದ್ದು ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ಗೋಕಾಕದ ಸಂಗಮ ನಗರದ ಫರೀದಾ ಮೃತ ಮಹಿಳೆ. ಮಗ ರಿಯಾಜ್ ಗಾಯಗೊಂಡಿದ್ದು, ಚಿಕಿತ್ಸೆಗೆ ಗೋಕಾಕ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಳೆಯ ಮನೆಯಲ್ಲಿ ತಾಯಿ-ಮಗ ವಾಸವಾಗಿದ್ದರು. ಆದರೆ, ಎರಡ್ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಮನೆ ಗೋಡೆ ಕುಸಿದು ಬಿದ್ದಿದೆ. ತಾಯಿ ಮತ್ತು ಮಗ ಇಬ್ಬರು ಅವಶೇಷಗಳಡಿ ಸಿಲುಕಿದ್ದರು. ಸ್ಥಳೀಯರು ಸ್ಥಳಕ್ಕೆ ಧಾವಿಸಿ, ಅವಶೇಷಗಳಡಿ ಸಿಲುಕಿದ್ದ ತಾಯಿ ಮತ್ತು ಮಗನನ್ನು ರಕ್ಷಣೆ ಮಾಡುವಲ್ಲಿ ಯಶಸ್ವಿಯಾದರು. ತೀವ್ರ ಅಸ್ವಸ್ಥಗೊಂಡಿದ್ದ ಫರೀದಾ ಕೊನೆಯುಸಿರೆಳೆದರೆ, ಗಂಭೀರ ಗಾಯಗೊಂಡ ರಿಯಾಜ್‌ನ್ನು ಗೋಕಾಕ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.