ಸಾರಾಂಶ
ಹುಬ್ಬಳ್ಳಿ: ಬಿಸಿಲಿನ ಧಗೆಯಿಂದ ಹೈರಾಣಾಗಿದ್ದ ನಗರದಲ್ಲಿ ಶುಕ್ರವಾರ ಸಂಜೆ ಗಾಳಿ, ಗುಡುಗು ಸಹಿತ ಭಾರಿ ಮಳೆ ಸುರಿಯಿತು. ಗುಡುಗು ಮಧ್ಯೆ ಮಿಂಚು ಸಹಿತ ರಭಸದ ಮಳೆ ಸಾಕ್ಷಿಯಾಗಿತ್ತು. ಸಂಜೆ 6ರ ನಂತರ ಭಾರಿ ಗುಡುಗು ಮಿಂಚಿನ ನಡುವೆ ವ್ಯಾಪಕ ಮಳೆ ಸುರಿಯಿತು. ಇದು ಕಾದ ಭೂಮಿಗೆ ತಂಪು ಎರೆಯುವ ಮೂಲಕ ಉಲ್ಲಾಸ ಮೂಡಿಸಿತು. ಮಳೆ ಶುರುವಾಗುತ್ತಿದ್ದಂತೆ ವಿದ್ಯುತ್ ಸರಬರಾಜು ಕಡಿತಗೊಳಿಸಲಾಗಿತ್ತು. ವ್ಯಾಪಕ ಮಳೆಯಿಂದ ವಾಹನ ಸಂಚಾರಕ್ಕೆ ಅಡಚಣೆಯಾಯಿತು.
ದೇಶಪಾಂಡೆ ನಗರ, ವಿದ್ಯಾನಗರ, ಕಾಟನ್ ಮಾರ್ಕೆಟ್, ಭವಾನಿ ನಗರ, ಹಳೇ ಹುಬ್ಬಳ್ಳಿ, ಮೇದಾರ ಓಣಿ, ಕುಂಬಾರ ಓಣಿ, ಬ್ಯಾಹಟ್ಟಿ ಪ್ಲಾಟ್ ಮಳೆಯಿಂದ ರಸ್ತೆಗಳು ಜಲಾವೃತವಾದವು.ಇಲ್ಲಿಯ ಜನತಾ ಬಜಾರ, ದುರ್ಗದ ಬೈಲ್‌ನಲ್ಲಿ ಮಾರುಕಟ್ಟೆ ಪ್ರದೇಶದಲ್ಲಿ ವ್ಯಾಪಾರಸ್ಥರು ಪರದಾಡಿದರು. ತುಳಜಾಭವಾನಿ ದೇವಸ್ಥಾನದ ಬಳಿಯ ಸರ್ಕಲ್‌ನಲ್ಲಿ ಮೊಳಕಾಲವರೆಗೂ ನೀರು ನಿಂತು ವಾಹನ ಸವಾರರು ಪರದಾಡಿದರು. ದ್ವಿಚಕ್ರವಾಹನಗಳು ನೀರಲ್ಲೇ ಸಿಲುಕಿದ್ದವು. ಚರಂಡಿ ನೀರೆಲ್ಲ ರಸ್ತೆ ಮೇಲೆ ಹರಿದು ಸಾರ್ವಜನಿಕರು ಕಿರಿಕಿರಿ ಅನುಭವಿಸಿದರು. ಜತೆಗೆ ಪಾಲಿಕೆಗೆ ಹಿಡಿಶಾಪ ಹಾಕುತ್ತಾ ವಾಹನಗಳನ್ನು ತಳ್ಳಲು ಹರಸಾಹಸ ಪಡುತ್ತಿದ್ದರು.ಗ್ರಾಹಕರು ಮಳೆಯಲ್ಲಿಯೇ ನೆನೆದು ಅಂಗಡಿ ಮುಗಟ್ಟುಗಳ ಮೊರೆ ಹೋದರು. ನಗರದ ಸಿಲ್ವರ್‌ಟೌನ್‌ನಲ್ಲಿ ಬಿರುಗಾಳಿ ಸಮೇತ ಮಳೆಗೆ ಮರವೊಂದು ಧರೆಗುರಳಿದೆ. ಹಳೇ ಹುಬ್ಬಳ್ಳಿ ಆಸರ್ ಹೊಂಡದಿಂದ ನೀರು ಹರಿದು ಸುತ್ತಮುತ್ತಲಿನ ಮನೆಗಳಿಗೆ ಸೇರಿದೆ ಎಂದು ಮಹಾನಗರ ಪಾಲಿಕೆ ಅಧಿಕಾರಿಗಳು ತಿಳಿಸಿದರು.
ವಾಹನ ಸವಾರರ ಪರದಾಟ:ಸಂಜೆ ಕೆಲಸ ಮುಗಿಸಿಕೊಂಡು ಮನೆಗೆ ಹೋಗಲು ಸಾರ್ವಜನಿಕರು ಪರದಾಡಿದರು.ವಾಹನ ಸವಾರರು ಮಳೆಯಲ್ಲಿ ಹೋಗುತ್ತಿರುವ ದೃಶಗಳು ಕಂಡು ಬಂದವು. ಚೆನ್ನಮ್ಮ ವೃತ್ತ, ಅಂಬೇಡ್ಕರ್ ವೃತ್ತ, ಸ್ಟೇಶನ್ ರಸ್ತೆ, ದೇಸಾಯಿ ವೃತ್ತ, ಕೇಶ್ವಾಪುರ ವೃತ್ತದಲ್ಲಿ ಸೇರಿದಂತೆ ವಾಹನ ದಟ್ಟಣೆಯಿಂದ ವಾಹನ ಸವಾರರು ಪರದಾಡಿದರು. ಮಳೆಯಲ್ಲಿ ಸಂಚಾರಿ ಪೊಲೀಸರು ವಾಹನ ದಟ್ಟಣೆ ನಿಯಂತ್ರಿಸಿ, ಪ್ರಯಾಣಿಕರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ತಾಲೂಕಿನಾದ್ಯಂತ ಗುಡುಗು ಸಿಡಿಲು ಸಮೇತ ಮಳೆಯಾಗಿದೆ.