ಕರಾವಳಿಯಲ್ಲಿ ಜಲಪ್ರವಾಹ, ಅಪಾಯ ಮಟ್ಟ ಮೀರಿದ ನದಿಗಳು, ಜು.20 ಮತ್ತು 21ಕ್ಕೆ ರೆಡ್‌ ಅಲರ್ಟ್‌

| Published : Jul 20 2024, 12:52 AM IST / Updated: Jul 20 2024, 12:43 PM IST

ಕರಾವಳಿಯಲ್ಲಿ ಜಲಪ್ರವಾಹ, ಅಪಾಯ ಮಟ್ಟ ಮೀರಿದ ನದಿಗಳು, ಜು.20 ಮತ್ತು 21ಕ್ಕೆ ರೆಡ್‌ ಅಲರ್ಟ್‌
Share this Article
  • FB
  • TW
  • Linkdin
  • Email

ಸಾರಾಂಶ

ಅದ್ಯಪಾಡಿ ಪ್ರದೇಶ ಪ್ರವಾಹ ನೀರಿನಿಂದ ಆವೃತ್ತವಾಗಿದ್ದು, ಸುಮಾರು 35 ಕುಟುಂಬಗಳು ವಾಸವಾಗಿವೆ. ಭಾರಿ ಮಳೆ, ಪ್ರವಾಹ ಹಿನ್ನೆಲೆಯಲ್ಲಿ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ವಿನಂತಿ ಮಾಡಿದ್ದಾರೆ.

 ಮಂಗಳೂರು :   ರಾವಳಿಯಲ್ಲಿ ವರ್ಷಧಾರೆ ಮುಂದುವರಿದಿದ್ದು, ಶುಕ್ರವಾರ ದ.ಕ.ಜಿಲ್ಲೆಯಲ್ಲಿ ಜಲಪ್ರವಾಹ ಉಂಟಾಗಿದೆ. ನಿರಂತರ ಮಳೆಗೆ ಸಾವು ನೋವು ಸಂಭವಿಸಿದೆ. ಈ ನಡುವೆ ಇನ್ನೂ ಎರಡು ದಿನ(ಜು.20 ಮತ್ತು 21) ಕರಾವ‍ಳಿ ಕರ್ನಾಟಕದಲ್ಲಿ ರೆಡ್‌ ಅಲರ್ಟ್‌ ಮುಂದುವರಿದೆ.

ಮಂಗಳೂರಲ್ಲಿ ಭಾರಿ ಮಳೆಗೆ ತುಂಡಾಗಿ ಬಿದ್ದ ವಿದ್ಯುತ್‌ ತಂತಿ ಸ್ಪರ್ಶಿಸಿ ಕಾಲೇಜು ವಿದ್ಯಾರ್ಥಿನಿ ಸಾವಿಗೀಡಾಗಿದ್ದಾರೆ. ಬೆಳ್ತಂಗಡಿಯ ಪುಂಜಾಲಕಟ್ಟೆಯಲ್ಲಿ ಲಾರಿ ಪಲ್ಟಿಯಾಗಿ ಓರ್ವ ಮೃತಪಟ್ಟ ಘಟನೆ ನಡೆದಿದೆ. ದ.ಕ. ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ, ಶಿಶಿಲದ ಶಿಶಿಲೇಶ್ವರ ದೇವಸ್ಥಾನ, ಬಂಟ್ವಾಳದ ಜಕ್ರಿಬೆಟ್ಟು, ಪಾಣೆಮಂಗಳೂರು ಮತ್ತಿತರ ಕಡೆಗಳಲ್ಲಿ ಜಲಪ್ರವಾಹ ತಲೆದೋರಿದೆ. ದೇವಸ್ಥಾನ ಮಾತ್ರವಲ್ಲ ಮನೆಗಳಿಗೆ, ಕೃಷಿತೋಟಗಳಿಗೆ ನದಿ ನೀರು ನುಗ್ಗಿದ್ದು ಜನತೆ ಆತಂಕದಲ್ಲಿ ದಿನ ಕಳೆಯುವಂತಾಗಿದೆ. ಉಪ್ಪಿನಂಗಡಿ ಮತ್ತು ಬಂಟ್ವಾಳಗಳಲ್ಲಿ ನೇತ್ರಾವತಿ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದೆ. ಕೃಷ್ಣಾಪುರ, ಬಂಟ್ವಾಳದ ಅಜಿಲಮೊಗರು, ಬೆಳ್ತಂಗಡಿ ಬಂದಾರಿನ ಕುಂಟಾಲಪಲ್ಕೆ, ಮಂಗಳೂರಿನ ಬೆಂಗ್ರೆಗಳಲ್ಲಿ ಕೃತಕ ನೆರೆ ಆವರಿಸಿದ್ದು, ಅಲ್ಲಲ್ಲಿ ಗುಡ್ಡ ಜರಿದು, ರಸ್ತೆಗೆ ಮರ ಬಿದ್ದು ಸಂಚಾರಕ್ಕೆ ಅಡಚಣೆ ಉಂಟಾಗಿದೆ.

ಶಿರಾಡಿ, ಮಡಿಕೇರಿ ಘಾಟ್‌ನಲ್ಲಿ ಹಗಲು ಸಂಚಾರ: ಧಾರಾಕಾರ ಮಳೆಗೆ ಶಿರಾಡಿ, ಮಡಿಕೇರಿ ಘಾಟ್‌ನಲ್ಲಿ ಮತ್ತೆ ಕುಸಿತ ಭೀತಿ ಎದುರಾಗಿದೆ. ಪಂಜದಲ್ಲಿ ಹೊಳೆ ನೀರು ಉಕ್ಕೇರಿದ್ದು ರಸ್ತೆಯಲ್ಲಿ ಬ್ಯಾರಿಕೇಡ್‌ ಅಳವಡಿಸಲಾಗಿದೆ. ಇದರಿಂದಾಗಿ ಪುತ್ತೂರು-ಸುಬ್ರಹ್ಮಣ್ಯ ಹೆದ್ದಾರಿ ಸಂಚಾರ ಬಂದ್‌ ಆಗಿದೆ. ಶಿರಾಡಿ ಮತ್ತು ಮಡಿಕೇರಿ ಘಾಟ್‌ಗಳಲ್ಲಿ ಶುಕ್ರವಾರ ಹಗಲು ವಾಹನ ಸಂಚರಿಸಿದೆ. ರಾತ್ರಿ ವೇಳೆ ಚಾರ್ಮಾಡಿ ಘಾಟ್‌ನಲ್ಲಿ ಮಾತ್ರ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ದಿನವಿಡೀ ಎಡೆಬಿಡದ ಮಳೆ:

ಭಾರಿ ಮಳೆ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆಯ ಐದು ತಾಲೂಕುಗಳಲ್ಲಿ ಶಾಲಾ ಕಾಲೇಜುಗಳಿಗೆ ಶುಕ್ರವಾರವೂ ರಜೆ ಸಾರಲಾಗಿತ್ತು. ಶಾಲಾ ಕಾಲೇಜಿಗೆ ರಜೆ ಹೊರತಾಗಿರುವ ಮೂಡುಬಿದಿರೆ, ಸಸಿಹಿತ್ಲುಗಳಲ್ಲಿ ಧಾರಾಕಾರ ಮಳೆಯಿಂದಾಗಿ ಉಂಟಾದ ನೆರೆಯಿಂದ ಮಕ್ಕಳು ಶಾಲೆಗೆ ತೆರಳಲು ಪರದಾಟ ಅನುಭವಿಸಿದ್ದಾರೆ. ರೆಡ್‌ ಅಲರ್ಟ್‌ ಕಾರಣ ಇಡೀ ದಿನ ಜಿಲ್ಲೆಯಲ್ಲಿ ಎಡೆಬಿಡದೆ ಮಳೆ ಸುರಿದಿದೆ. ಈ ಮಳೆ ರಾತ್ರಿಯೂ ಮುಂದುವರಿದಿದೆ.ಮೂಡುಬಿದಿರೆ ಗರಿಷ್ಠ ಮಳೆ:

ದ.ಕ.ಜಿಲ್ಲೆಯ ಮೂಡುಬಿದಿರೆಯಲ್ಲಿ ಶುಕ್ರವಾರ ಬೆಳಗ್ಗಿನ ವರೆಗೆ ಗರಿಷ್ಠ 176.9 ಮಿಲಿ ಮೀಟರ್‌ ಮಳೆ ದಾಖಲಾಗಿದೆ. ಜಿಲ್ಲೆಯ ದಿನದ ಸರಾಸರಿ ಮಳೆ 120.5 ಮಿ.ಮೀ. ಆಗಿದೆ.

ಬೆಳ್ತಂಗಡಿ 145.2 ಮಿ.ಮೀ, ಬಂಟ್ವಾಳ 91.6 ಮಿ.ಮೀ, ಮಂಗಳೂರು 89.5 ಮಿ.ಮೀ, ಪುತ್ತೂರು 93.7 ಮಿ.ಮೀ, ಸುಳ್ಯ 120.7 ಮಿ.ಮೀ, ಕಡಬ 122.1 ಮಿ.ಮೀ, ಮೂಲ್ಕಿ 119.1 ಮಿ.ಮೀ, ಉಳ್ಳಾಲ 62.8 ಮಿ.ಮೀ. ಮಳೆ ದಾಖಲಾಗಿದೆ.

ಉಪ್ಪಿನಂಗಡಿ ನೇತ್ರಾವತಿ ಮತ್ತು ಕುಮಾರಧಾರ ನದಿ ಅಪಾಯ ಮಟ್ಟ ಸನಿಹ 29.9 ಮೀಟರ್‌(ಅಪಾಯ ಮಟ್ಟ 31.5 ಮೀಟರ್‌) ಹರಿಯುತ್ತಿದೆ. ಬಂಟ್ವಾಳದಲ್ಲಿ ನೇತ್ರಾವತಿ ನದಿ ಅಪಾಯ ಮಟ್ಟ ಮೀರಿ 8.6 ಮೀಟರ್‌ (ಅಪಾಯ ಮಟ್ಟ 8.5 ಮೀಟರ್‌) ಹರಿಯುತ್ತಿದೆ. ಹೊಸ ಡ್ಯಾಂನ ಎಲ್ಲ ಗೇಟ್‌ಗಳನ್ನು ತೆರೆಯಲಾಗಿದೆ.ಜು. 26ಕ್ಕೆ ಮಹಾನೆರೆಗೆ 50 ವರ್ಷ!ಸ್ವಾತಂತ್ರ್ಯಪೂರ್ವದಲ್ಲಿ 1923ರಲ್ಲಿ ಉಪ್ಪಿನಂಗಡಿಯಲ್ಲಿ ಅತೀ ದೊಡ್ಡ ಪ್ರವಾಹ ಬಂದಿದ್ದು, ಕರಾವಳಿಯನ್ನೇ ಬೆಚ್ಚಿಬೀಳಿಸುವಂತಿತ್ತು. ಆ ಸಂದರ್ಭ ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ-ಮಹಾಕಾಳಿ ದೇವಾಲಯದ ಬ್ರಹ್ಮರಥವೂ ನೆರೆ ನೀರಿನಲ್ಲಿ ಕೊಚ್ಚಿ ಹೋಗಿತ್ತು. ಆ ಬಳಿಕ ಅತೀ ದೊಡ್ಡ ಪ್ರವಾಹ 26-07-1974 ರಲ್ಲಿ ಬಂದಿತ್ತು. ಈ ಪ್ರವಾಹ ಬಂದು ಜುಲೈ 26ಕ್ಕೆ 50 ವರ್ಷವಾಗಲಿದೆ. ಅಂದಿನಂತೆ ಈ ಬಾರಿಯೂ 26ನೇ ತಾರೀಕು ಶುಕ್ರವಾರ ಬರುವುದು ವಿಶೇಷವಾಗಿದೆ. ಈ ಕುರಿತ ಪೋಸ್ಟರ್‌ವೊಂದು ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.

ಬಳಿಕ 1997, 2008 ಹಾಗೂ 2009 ಹಾಗೂ 2013ರಲ್ಲಿ ನೆರೆ ಬಂದು ಶ್ರೀ ಸಹಸ್ರಲಿಂಗೇಶ್ವರ-ಮಹಾಕಾಳಿ ದೇವಾಲಯದ ಬಳಿ ಸಂಗಮವಾಗಿತ್ತು. ಆ ಬಳಿಕ ಸಂಗಮವಾಗಿದ್ದು 2018ರಲ್ಲಿ. ಆಗ ಮಾತ್ರ ಆಗಸ್ಟ್‌ 14 ಮತ್ತು 16 ರಂದು ಎರಡು ಬಾರಿ ಸಂಗಮವಾಗಿತ್ತು. ಲಭ್ಯ ಇತಿಹಾಸದ ಪ್ರಕಾರ ವರ್ಷದಲ್ಲಿ ಎರಡು ಬಾರಿ ಸಂಗಮವಾಗಿದ್ದು ಇದೇ ಮೊದಲಾಗಿತ್ತು. ಬಳಿಕ 2019ರಲ್ಲಿಯೂ ಸಂಗಮವಾಗಿದ್ದು, ಆದಿನ ಆಗಸ್ಟ್‌ 9ರಂದು ಆದ ಸಂಗಮ 10 ರವರೆಗೂ ಮುಂದುವರಿದಿತ್ತು.

ಅದ್ಯಪಾಡಿಗೆ ದೋಣಿಯಲ್ಲಿ ತೆರಳಿದ ಡಿಸಿ!

ಫಲ್ಗುಣಿ ನದಿ ಅಣೆಕಟ್ಟೆಯಿಂದ ಉಕ್ಕೇರಿ ಹರಿದು ದ್ವೀಪ ಸದೃಶವಾಗಿರುವ ಮಂಗಳೂರು ತಾಲೂಕಿನ ಅದ್ಯಪಾಡಿಗೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌, ಜಿ.ಪಂ.ಸಿಇಒ ಡಾ.ಆನಂದ್‌ ಮತ್ತಿತರರು ಶುಕ್ರವಾರ ಸಂಜೆ ದೋಣಿ ಮೂಲಕ ತೆರಳಿ ಪರಿಶೀಲನೆ ನಡೆಸಿದರು.

ಅದ್ಯಪಾಡಿ ಪ್ರದೇಶ ಪ್ರವಾಹ ನೀರಿನಿಂದ ಆವೃತ್ತವಾಗಿದ್ದು, ಸುಮಾರು 35 ಕುಟುಂಬಗಳು ವಾಸವಾಗಿವೆ. ಭಾರಿ ಮಳೆ, ಪ್ರವಾಹ ಹಿನ್ನೆಲೆಯಲ್ಲಿ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ವಿನಂತಿ ಮಾಡಿದ್ದಾರೆ.

ಅದ್ಯಪಾಡಿಯಲ್ಲಿ ಮೊಗೇರ್‌ ಕುದ್ರು ಜಲಾವೃತವಾಗಿ 35 ಕುಟುಂಬಗಳಿಗೆ ಜಲದಿಗ್ಭಂಧನ ಕುರಿತು ಕನ್ನಡಪ್ರಭ ಶುಕ್ರವಾರ ವರದಿ ಪ್ರಕಟಿಸಿ ಗಮನ ಸೆಳೆದಿತ್ತು.