ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ನಗರದಲ್ಲಿ ಮಳೆಯ ಅವಾಂತರ ಬುಧವಾರವೂ ಮುಂದುವರೆಯಿತು. ಮಂಗಳವಾರ ರಾತ್ರಿಯಿಂದ ಬುಧವಾರ ಮಧ್ಯಾಹ್ನದವರೆಗೆ ಸುರಿದ ಮಳೆಯಿಂದಾಗಿ ಜನರ ಸಂಕಷ್ಟ ಇನ್ನೂ ಹೆಚ್ಚಾಯಿತು. ತಗ್ಗು ಪ್ರದೇಶ, ಅಪಾರ್ಟ್‌ಮೆಂಟ್ ಬೇಸ್‌ಮೆಂಟ್‌ಗಳು ಜಲಾವೃತವಾಗಿದ್ದು, ನಿಂತ ನೀರನ್ನು ಹೊರಚೆಲ್ಲುವ ಪರದಾಟ ನಡೆದಿದೆ. ಟ್ರಾಫಿಕ್ ಜಾಮ್ ಸಮಸ್ಯೆ, ದಟ್ಟವಾಗಿ ಮೋಡ ಕವಿದ ವಾತಾವರಣ, ಚಳಿಯ ವಾತಾವರಣ ಜನತೆಯನ್ನು ಕಂಗೆಡಿಸಿದೆ.ನಗರದಲ್ಲಿ ಜಡಿ ಮಳೆ ಮುಂದುವರೆದಿದ್ದು, ದೈನಂದಿನ ಕೆಲಸ ಕಾರ್ಯಗಳಿಗೆ ಕಿರಿಕಿರಿಯುಂಟು ಮಾಡಿದೆ. ಕಳೆದ 24 ಗಂಟೆಯಲ್ಲಿ ನಗರದಲ್ಲಿ -- ಸೆಂ.ಮೀ. ಮಳೆಯಾಗಿದ್ದು, ಗುರುವಾರ ಕೂಡ ಮಳೆ ಮುಂದುವರಿಯುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ಬುಧವಾರವೂ ನಗರದ ಹಲವೆಡೆ ರಸ್ತೆಗಳು ಜಲಾವೃತಗೊಂಡು ಸುಗಮ ಸಂಚಾರಕ್ಕೆ ಅಡ್ಡಿಯಾಯಿತು. ನಗರದ ಅನೇಕ ಬಡಾವಣೆಯಲ್ಲಿ ಮಳೆ ನೀರು ಮನೆಗೆ ನುಗ್ಗಿ, ಮನೆಯಲ್ಲಿದ್ದ ದಿನಸಿ, ಟಿವಿ, ಫ್ರಿಡ್ಜ್, ಸೋಫಾ, ಬಟ್ಟೆ ಬರೆ ನೀರಿನಲ್ಲಿ ಮುಳುಗಿ ಹಾನಿಯಾಗಿವೆ. ನಗರದ ಹಲವು ಭಾಗಗಳಲ್ಲಿ ಮಳೆಯಿಂದ ಬೃಹತ್ ಗಾತ್ರದ ಮರಗಳು ಹಾಗೂ ಮರದ ಟೊಂಗೆಗಳು ಧರೆಗುರುಳಿ ರಸ್ತೆ ಸಂಚಾರಕ್ಕೆ ತೊಂದರೆ ಉಂಟಾಯಿತು.ಜನ ಸುರಕ್ಷಿತ ಸ್ಥಳದತ್ತ
ಮಹದೇವಪುರದ ಹೊರಮಾವು ಸಾಯಿ ಲೇಔಟ್ ಜನರು ಈ ಮಳೆಗೂ ತತ್ತರಿಸಿದರು. ಕೆಳ ಮಹಡಿಯಲ್ಲಿರುವ ಮನೆಗಳಿಗೆ ನುಗ್ಗಿದ ನೀರು ಸಾಕಷ್ಟು ಹಾನಿಯುಂಟು ಮಾಡಿತು. ಹೀಗಾಗಿ ಅನಿವಾರ್ಯವಾಗಿ ಸುರಕ್ಷಿತ ಸ್ಥಳಗಳಿಗೆ ತೆರಳಿದರು. ಮನೆಗಳಿಗೆ ನೀರು ನುಗ್ಗಿರುವಂತಹ ನಿವಾಸಿಗಳನ್ನು ಹೋಟೆಲ್‌ನಲ್ಲಿ ತಂಗಲು ಬಿಬಿಎಂಪಿಯಿಂದ ವ್ಯವಸ್ಥೆ ಮಾಡಲಾಯಿತು. ಪ್ರತಿ ಮಳೆ ಜೋರಾದಾಗಲೂ ಇದೇ ಪರಿಸ್ಥಿತಿ ಎದುರಿಸುತ್ತಿದ್ದೇವೆ. ಮುಂಗಾರಿನ ಆರಂಭದಲ್ಲೂ ಸ್ವಂತ ಮನೆ ಬಿಟ್ಟು ಬಾಡಿಗೆ ಕೊಟ್ಟು ಬೇರೆಡೆ ಉಳಿದುಕೊಂಡಿದ್ದೆವು ಎಂದು ಜನ ಬೇಸರಿಸಿದರು. ಗೆದ್ದಲಹಳ್ಳಿಯಲ್ಲೂ ಇದೇ ಪರಿಸ್ಥಿತಿಯಿತ್ತು.ಕುಡಿಯುವ ನೀರಿಗೆ ಸಮಸ್ಯೆ
ಯಲಹಂಕದ ನಾರ್ತ್ ಹುಡ್ ವಿಲ್ಲಾ ಜಲಾವೃತವಾದ ಪರಿಣಾಮ ಸಂಪ್‌ಗಳಿಗೆ ನೀರು ನುಗ್ಗಿ ಕುಡಿಯುವ ನೀರಿಗೆ ಸಮಸ್ಯೆ ಉಂಟಾಯಿತು. ವಿದ್ಯುತ್ ಕೂಡ ಕೈಕೊಟ್ಟಿದ್ದರಿಂದ ನಿವಾಸಿಗಳು ಹೈರಾಣಾಗಿದ್ದರು. ಸನಿಹದಲ್ಲೇ ಇರುವ ರಾಜಕಾಲುವೆಯಿಂದ ದುರ್ನಾತ ಉಂಟಾಗಿತ್ತು. ಹೀಗಾಗಿ ಹಲವರು ಹೊಟೆಲ್‌ಗಳಲ್ಲಿ ಉಳಿದುಕೊಳ್ಳಲು ತೆರಳಿದರು. ಬಿಬಿಎಂಪಿ ಸಿಬ್ಬಂದಿ ಪಂಪ್ ಮೂಲಕ ನೀರನ್ನು ಹೊರತೆಗೆವ ಪ್ರಯತ್ನ ಮಾಡಿದರು.ಸಂಚಾರಕ್ಕೆ ಟ್ರ್ಯಾಕ್ಟರ್ಮೂರು ವರ್ಷದ ಹಿಂದೆ ಮಹಾಮಳೆಗೆ ಜಲಾವೃತಗೊಂಡು ನಲುಗಿದ್ದ ಯಲಹಂಕದ ಕೇಂದ್ರೀಯ ವಿಹಾರ ಅಪಾರ್ಟ್‌ಮೆಂಟ್ ನಿವಾಸಿಗಳು ಮತ್ತೊಮ್ಮೆ ಅದೇ ಪರಿಸ್ಥಿತಿಗೆ ಸಿಲುಕಿದರು. ಎರಡು ದಿನಗಳ ಮಳೆಯಿಂದ ಕೇಂದ್ರೀಯ ವಿಹಾರ ಅಪಾರ್ಟ್‌ಮೆಂಟ್ ಜಲಾವೃತವಾಗಿತ್ತು. ಅಪಾರ್ಟ್‌ಮೆಂಟ್‌ನಲ್ಲಿದ್ದ ಜನರ ಸಂಚಾರಕ್ಕೆ ಎರಡು ಟ್ರ್ಯಾಕ್ಟರ್ ವ್ಯವಸ್ಥೆ ಮಾಡಲಾಯಿತು. ಪಾಲಿಕೆ ಹಾಗೂ ಅಗ್ನಿಶಾಮಕ ಸಿಬ್ಬಂದಿ ಇಲ್ಲಿ 13 ಪಂಪ್‌ಸೆಟ್‌ಗಳನ್ನು ನೀರನ್ನು ಹೊರಚೆಲ್ಲುವ ಪ್ರಯತ್ನ ಮಾಡಿದರು.ಮನೆಗಳಿಗೆ ನೀರು
ರಮಣಶ್ರೀ ಕ್ಯಾಲಿಫೋರ್ನಿಯಾ ಲೇಔಟ್‌ನಲ್ಲಿ ನಿಂತಿದ್ದ ನೀರನ್ನು ಪಂಪ್ ಮೂಲಕ ತೆರವುಗೊಳಿಸಲಾಯಿತು. ಜೋರು ಮಳೆಯಿಂದಾಗಿ ಫಾತಿಮಾ ಲೇಔಟ್, ಭದ್ರಪ್ಪ ಲೇಔಟ್ ಸೇರಿದಂತೆ ಇನ್ನಿತರೆ ಪ್ರದೇಶದಲ್ಲಿ ಮನೆಗಳಿಗೆ ನೀರು ನುಗ್ಗಿತ್ತು.ಬೆಸ್ಲಿನ್ ಗಾರ್ಡನ್, ಸಪ್ತಗಿರಿ ಲೇಔಟ್, ಚಿನ್ನಪ್ಪನಹಳ್ಳಿಯ ರಸ್ತೆ, ಬಳಗೆರೆ ರಸ್ತೆ, ಸಕ್ರಾ ಆಸ್ಪತ್ರೆಯ ರಸ್ತೆ, ಸರ್ಜಾಪುರ ರಸ್ತೆಯ ಜಿನ್ನಸಂದ್ರ ಜಂಕ್ಷನ್, ಪಣತ್ತೂರು ರೈಲ್ವೆ ಕೆಳಸೇತುವೆ ಹಾಗೂ ವಿಬ್‌ಗಯಾರ್ ಸ್ಕೂಲ್ ರಸ್ತೆಯಲ್ಲಿ ನಿಂತಿದ್ದ ನೀರನ್ನು ಪಂಪ್ ಮೂಲಕ ಬಿಬಿಎಂಪಿ ಸಿಬ್ಬಂದಿ ತೆರವುಗೊಳಿಸಿದರು.ಪಶ್ಚಿಮ ವಲಯದ ಓಕಳೀಪುರಂ ಅಷ್ಟಪಥ ಕಾರಿಡಾರ್‌ನಲ್ಲಿ ರೈಲ್ವೆ ಇಲಾಖೆ ಕಾಮಗಾರಿ ನಡೆಯುತ್ತಿದ್ದು, ಒಳಚರಂಡಿ ಕೆಲಸ ಇನ್ನೂ ಆಗಿಲ್ಲ. ಹೀಗಾಗಿ ನಿಂತ ನೀರನ್ನು ಪಂಪ್‌ಸೆಟ್ ಮೂಲಕ ಹೊರಹಾಕುವ ಕೆಲಸ ನಡೆಯಿತು.
ದಕ್ಷಿಣ ವಲಯ ವ್ಯಾಪ್ತಿಯಲ್ಲಿ ನಾಯಂಡಹಳ್ಳಿ ಜಂಕ್ಷನ್, ದೀಪಾಂಜಲಿನಗರ, ಆರ್.ವಿ.ರಸ್ತೆ, ಕದಿರೇನಹಳ್ಳಿ, ಔಟರ್ ರಿಂಗ್ ರಸ್ತೆ, ಮಡಿವಾಳ ಕೆಳಸೇತುವೆ, ಜೆ.ಸಿ ರಸ್ತೆ (ಲಾಲ್ ಬಾಗ್ ಹತ್ತಿರ) ನೀರು ನಿಂತು ಜನ ಪರದಾಡಿದರು. ರಾಜರಾಜೇಶ್ವರಿನಗರದ ಜೆ.ಪಿ. ಪಾರ್ಕ್ ಹಾಗೂ ಲಗ್ಗೆರೆ ರೆಸ್ತೆ ಮೇಲೆ ಜಲಾವೃತವಾಗಿದ್ದು, ಸಿಬ್ಬಂದಿ ನೀರು ತೆರವು ಮಾಡಿದರು.ಪೂರ್ವ ವಲಯದ ಸರ್ವಜ್ಞನಗರ ವ್ಯಾಪ್ತಿಯಲ್ಲಿ ನಿನ್ನೆ ಸುರಿದ ಜೋರು ಮಳೆಯಿಂದಾಗಿ ರಾಜಕಾಲುವೆಯಲ್ಲಿ ಹಿಮ್ಮುಖವಾಗಿ ನೀರು ಚಲಿಸಿದ್ದ ಪರಿಣಾಮ ಕೆಲ ರಸ್ತೆಗಳಲ್ಲಿ ನೀರು ನಿಂತಿತ್ತು. ಜೊತೆಗೆ ಇಂದಿರಾನಗರದ 17ನೇ ಸಿ ಮತ್ತು ಡಿ ಕ್ರಾಸ್ ನಲ್ಲಿ ಜಲಮಂಡಳಿಯ ಪೈಪ್‌ಲೈನ್ ಬ್ಲಾಕೇಜ್ ಆಗಿರುವ ಕಾರಣ ಒಳಚರಂಡಿ ನೀರು ಹೊರಬಂದು ಸುತ್ತಲ ನಿವಾಸಿಗಳಿಗೆ ತೊಂದರೆಯಾಯಿತು.ಬೊಮ್ಮನಹಳ್ಳಿ ವಲಯದ ಹರಳೂರು ಬಳಿಯ ಸಿಲ್ವರ್ ಕೌಂಟ್ ರಸ್ತೆ, ಹುಳಿಮಾವು ಕೆರೆ ಪಕ್ಕದ ರಸ್ತೆ, ಎಚ್ಎಸ್ಆರ್ ಸೆಕ್ಟರ್ 7 ರಸ್ತೆಯಲ್ಲಿ ಜಲಾವೃತವಾಗಿತ್ತು. ದಾಸರಹಳ್ಳಿ ವಲಯ ವ್ಯಾಪ್ತಿಯ ನಿಸರ್ಗ ಲೇಔಟ್ ನಲ್ಲಿ ನೀರುಗಾಲುವೆ ಬ್ಲಾಕ್ ಆಗಿದ್ದ ಪರಿಣಾಮ ರಸ್ತೆಗಳಲ್ಲಿ ನೀರು ನಿಂತಿತು. ನೀರು ಹರಿಯಲು ಪರ್ಯಾಯವಾಗಿ ಕಚ್ಚಾ ಡ್ರೈನೇಜ್ ಮಾಡಿ ನೀರು ಹರಿದು ಹೋಗುವಂತೆ ಮಾಡಲಾಗಿದೆ. ಬಿಬಿಎಂಪಿ ನೀರುಗಾಲುವೆನ್ನು ಜೆಸಿಬಿ ಮೂಲಕ ಸ್ವಚ್ಛಗೊಳಿಸಿದೆ.ಆಸ್ಪತ್ರೆಯಲ್ಲಿ ರೋಗಿಗಳಿಗೆ ಸಮಸ್ಯೆ
ಮಳೆ ನೀರಿಂದ ರಾಜಾಜಿನಗರದ ಇಎಸ್ಐ ಆಸ್ಪತ್ರೆಯಲ್ಲಿ ರೋಗಿಗಳು ಪರದಾಡಿದರು. ಡಿಪಾರ್ಟಮೆಂಟ್ ಆಫ್ ರೇಡಿಯೋ ಡಯಾಗ್ನಾಸಿಸ್ ಕಟ್ಟಡದ ಗೋಡೆಗಳಿಂದ ನೀರು ಸೋರಿತು. ಗೋಡೆಗಳು ತೇವಗೊಳ್ಳುತ್ತಿದ್ದು ನಿರಂತರವಾಗಿ ನೀರು ಜಿನುಗುತ್ತಿದೆ. ದುರಸ್ತಿಗೆ ಬಗ್ಗೆ ಆಸ್ಪತ್ರೆ ಸಿಬ್ಬಂದಿ ಗಮನಕ್ಕೆ ತಂದರೂ ಸ್ಪಂದಿಸಿಲ್ಲ ಎಂದು ರೋಗಿಗಳು ಬೇಸರ ವ್ಯಕ್ತಪಡಿಸಿದರು.ಟೆಕ್‌ಹಬ್ ವಾಟರ್‌ಫಾಲ್ ವೈರಲ್ಸಾಮಾಜಿಕ ಜಾಲತಾಣ ‘ಎಕ್ಸ್’ ನಲ್ಲಿ ಮಾನ್ಯತಾ ಟೆಕ್ ಪಾರ್ಕ್ ರಸ್ತೆ ಜಲಾವೃತ ಆಗಿರುವುದು ಹಾಗೂ ರಸ್ತೆಯಿಂದ ಕೆಳಗೆ ಜಲಪಾತದಂತೆ ನೀರು ಧುಮ್ಮಿಕ್ಕುತ್ತಿರುವುದು ವೈರಲ್ ಆಗಿದೆ. ನೆಟ್ಟಿಜನ್ಸ್ ಇದನ್ನು ‘ಮಾನ್ಯತಾ ಟೆಕ್ ಫಾಲ್ಸ್’ ಎಂದು ವ್ಯಂಗ್ಯವಾಡಿದ್ದಾರೆ. ಸುಮಾರು 20 ಅಡಿಯ ಈ ತಡೆಗೋಡೆ ಕುಸಿಯುವ ವಿಡಿಯೋ ಕೂಡ ವೈರಲ್ ಆಗಿದೆ. ಮಳೆ ಹಿನ್ನೆಲೆಯಲ್ಲಿ ಬುಧವಾರ ವೈಟ್‌ಫೀಲ್ಡ್, ಸರ್ಜಾಪುರ, ಎಲೆಕ್ಟ್ರಾನಿಕ್ ಸಿಟಿ, ಮಾನ್ಯತಾ ಟೆಕ್ ಪಾರ್ಕ್‌ನ ಬಹುತೇಕ ಟೆಕ್ಕಿಗಳು ವರ್ಕ್ ಫ್ರಂ ಹೋಂ ನಲ್ಲಿದ್ದರು.ಬಸ್, ಮೆಟ್ರೋದಲ್ಲಿ ಪ್ರಯಾಣಿಕರು ಹೆಚ್ಚಳ
ಮಳೆ ಪರಿಣಾಮ ನಗರದಲ್ಲಿ ಬಿಎಂಟಿಸಿ, ಮೆಟ್ರೋದಲ್ಲಿ ಪ್ರಯಾಣಿಕರ ದಟ್ಟಣೆಯಿತ್ತು. ಆಟೋರಿಕ್ಷಾ, ಟ್ಯಾಕ್ಸಿ ದರ ಹೆಚ್ಚಾಗಿತ್ತು. ಪ್ರಯಾಣ ಅನಿವಾರ್ಯವಾದ ಕಾರಣ ಜನ ಮೂರ್ನಾಲ್ಕು ಪಟ್ಟು ಹೆಚ್ಚು ಹಣ ಕೊಟ್ಟು ಪ್ರಯಾಣಿಸಿದರು. ಬೆಳಗ್ಗೆ ಮೆಟ್ರೋ ಕೈಕೊಟ್ಟ ವೇಳೆ ಫೀಡರ್ ಬಸ್ ವ್ಯವಸ್ಥೆ ಕೂಡ ಇರಲಿಲ್ಲ. ಬೈಯಪ್ಪನಹಳ್ಳಿಯಿಂದ ಎಂ.ಜಿ.ರಸ್ತೆವರೆಗೆ ಆಟೋದವರು ತಲಾ ₹100 ನಂತೆ ಬಾಡಿಗೆ ಪಡೆದರು.ಹಳಿ ಮೇಲೆ ಬಿದ್ದ ಮರ: ಮೆಟ್ರೋ ವ್ಯತ್ಯಯ
ಬೆಳಗ್ಗೆ 6.15ರ ಸುಮಾರಿಗೆ ನೇರಳೆ ಮೆಟ್ರೋ ಮಾರ್ಗದಲ್ಲಿನ ಸ್ವಾಮಿ ವಿವೇಕಾನಂದ ರಸ್ತೆ ಮತ್ತು ಇಂದಿರಾನಗರ ನಡುವೆ ಮರದ ಕೊಂಬೆ ತುಂಡಾಗಿ ಹಳಿ ಮೇಲೆ ಬಿದ್ದಿತ್ತು. ಇದರಿಂದಾಗಿ ಎರಡು ಗಂಟೆ ಈ ಮಾರ್ಗದಲ್ಲಿ ಮೆಟ್ರೋ ಸಂಚಾರ ಸ್ಥಗಿತಗೊಂಡಿತು. ಬೆಳಗ್ಗೆ ಕಚೇರಿ, ಶಾಲಾ ಕಾಲೇಜು ಸೇರಿ ಇತರೆಡೆ ತೆರಳಬೇಕಿದ್ದ ಪ್ರಯಾಣಿಕರು ತೊಂದರೆಗೀಡಾದರು. ಬಿಎಂಆರ್‌ಸಿಎಲ್ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ, ಮರವನ್ನು ತೆರವುಗೊಳಿಸಿದರು. ಈ ವೇಳೆ ಇಂದಿರಾನಗರ -ಚಲಘಟ್ಟ ಹಾಗೂ ಬೈಯಪ್ಪನಹಳ್ಳಿ – ವೈಟ್‌ಫೀಲ್ಡ್ ನಿಲ್ದಾಣದವರೆಗೆ ಮೆಟ್ರೋ ಸುಗಮ ಸಂಚಾರವಿತ್ತು.