ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಕಾಫಿನಾಡು ಚಿಕ್ಕಮಗಳೂರಿನಲ್ಲಿ ಪೂರ್ವ ಮುಂಗಾರು ಮಳೆ ಸತತ ಎರಡನೇ ದಿನವೂ ಅಬ್ಬರಿಸಿದ ಪರಿಣಾಮ ಮಂಗಳವಾರ ಮಧ್ಯಾಹ್ನ ಸುಮಾರು 2 ತಾಸು ಬಿಟ್ಟುಬಿಡದೇ ಭಾರೀ ಮಳೆ ಸುರಿಯಿತು.

ಗುಡುಗು, ಸಿಡಿಲು, ಮಿಂಚಿನ ಆರ್ಭಟ ಒಂದು ಕಡೆಯಾದರೆ, ಬಿರುಗಾಳಿ ಸಹಿತ ಆಲಿಕಲ್ಲು ಮಳೆ, ಜನಜೀವನ ಅಸ್ಥವ್ಯಸ್ಥಗೊಳಿಸಿತ್ತು.

ಮಂಗಳವಾರ ಬೆಳಗ್ಗೆ ಬಿಸಿಲಿನ ವಾತಾವರಣ ಇತ್ತು. ಮಧ್ಯಾಹ್ನ 1 ಗಂಟೆ ಸುಮಾರಿಗೆ ಮೋಡ ಕವಿದ ವಾತಾವರಣ ಸೃಷ್ಟಿಯಾಗಿ 2 ಗಂಟೆ ಸಮಯಕ್ಕೆ ಧಾರಾಕಾರ ಮಳೆ ಆರಂಭವಾಯಿತು. ನೋಡು ನೋಡುತ್ತಿದಂತೆ ನಗರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶ ಆವರಿಸಿದ ಮಳೆ 2 ತಾಸ ಕಾಲ ಧಾರಾಕಾರವಾಗಿ ಸುರಿಯಿತು.

ನಿರಂತರ ಮಳೆಯಿಂದ ನಗರದ ರಸ್ತೆಗಳಲ್ಲಿ ಭಾರೀ ಪ್ರಮಾಣ ನೀರು ನಿಂತು ವಾಹನ ಸಂಚಾರಕ್ಕೆ ಅಡ್ಡಿ ಉಂಟಾಯಿತು. ಸುಮಾರು ಮೂರು ಅಡಿಯಷ್ಟು ರಸ್ತೆಯಲ್ಲಿ ನೀರು ಹರಿದ ಪರಿಣಾಮ ಕಾರು, ಆಟೋ, ಬೈಕ್‌ ಸೈಲೆನ್ಸರ್ ಒಳಗೆ ನೀರು ಹೋಗಿ ನೀರಿನ ಮಧ್ಯೆ ಕೆಟ್ಟು ನಿಂತ ದೃಶ್ಯಗಳು ಕಂಡು ಬಂದವು.


ಮುಳ್ಳಯ್ಯನಗಿರಿ ತಪ್ಪಲಿನಲ್ಲಿ ಭಾರೀ ಮಳೆ ಹಿನ್ನೆಲೆಯಲ್ಲಿ ಹೊನ್ನಮ್ಮನಹಳ್ಳ ಜಲಪಾತದ ಬಳಿ ಭಾರೀ ಪ್ರಮಾಣದ ನೀರು ಹರಿದ ಪರಿಣಾಮ ಮೆಟ್ಟಿಲುಗಳ ಮೇಲಿಂದ ನೀರು ಹರಿಯುತ್ತಿರುವುದು ಕಂಡು ಬಂದಿದೆ. ಮುಳ್ಳಯ್ಯನ ಗಿರಿ, ದತ್ತಪೀಠದ ಭಾಗದಲ್ಲಿ ರಸ್ತೆ ಮೇಲೆ ಭಾರೀ ಪ್ರಮಾಣ ನೀರು ಹರಿದ ದೃಶ್ಯ ಕಂಡು ಬಂದವು. ಇದರಿಂದ ವಾಹನ ಚಾಲನೆಗೆ ದುಸ್ತರವಾಗಿತ್ತು.

ಚಿಕ್ಕಮಗಳೂರು ನಗರ ಮಾತ್ರವಲ್ಲದೇ, ಸುತ್ತಮುತ್ತಲಿನ ಗ್ರಾಮಾಂತರ ಪ್ರದೇಶದಲ್ಲಿಯೂ ಉತ್ತಮ ಮಳೆಯಾಗಿರುವುದರಿಂದ ಕಾಫಿ, ಅಡಿಕೆ, ತೆಂಗು ಸೇರಿದಂತೆ ವಿವಿಧ ಬೆಳೆಗೆ ನೀರಿಗಾಗಿ ಪರದಾಡುತ್ತಿದ್ದ ರೈತರು ನಿಟ್ಟುಸಿರು ಬಿಟ್ಟಿದ್ದಾರೆ.

---ಬಾಕ್ಸ್‌---ಒಂದೇ ಮಳೆಗೆ ಭರ್ತಿಯಾದ ಕಲ್ಕೆರೆ

ಇತ್ತೀಚಿಗೆ ಬಿಸಿಲಿನ ತಾಪಕ್ಕೆ ಕೆರೆಗಳಲ್ಲಿ ಇದ್ದ ನೀರು ಖಾಲಿಯಾಗಿದ್ದವು. ಆದರೆ, ಪೂರ್ವ ಮುಂಗಾರು ಮಳೆ ಅಬ್ಬರಕ್ಕೆ ಜಿಲ್ಲೆಯ ಸಣ್ಣ ಪುಟ್ಟ ಕೆರೆಗಳು ಒಂದೇ ದಿನದ ಮಳೆ ಭರ್ತಿಯಾಗಿದ್ದು, ರೈತರು, ಗ್ರಾಮಸ್ಥರು ಸಂತಸಗೊಂಡಿದ್ದಾರೆ. ಮಂಗಳವಾರ ಜಿಲ್ಲೆಯ ಕಲ್ಕೆರೆಯ ಕೆರೆ ಭರ್ತಿಯಾಗಿದ್ದು, ಗ್ರಾಮಸ್ಥರು ಕೆರೆ ಕೋಡಿ ಬಳಿ ನಿಂತು ಸಂಭ್ರಮಿಸಿದ್ದಾರೆ. ಜತೆಗೆ, ಕೆರೆ ಕೋಡಿ ದೃಶ್ಯವನ್ನು ಮೊಬೈಲ್‌ನಲ್ಲಿ ವಿಡಿಯೋ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿ ಖುಷಿ ಪಡುತ್ತಿದ್ದಾರೆ.