ಮಳೆ ಅವಾಂತರಕ್ಕೆ ನಲುಗಿದ ಬೆಂಗಳೂರು : ತಗ್ಗು ಪ್ರದೇಶಗಳು ಜಲಾವೃತಗೊಂಡು ಮನೆಗಳಿಗೆ ನೀರು

| Published : Oct 07 2024, 01:42 AM IST / Updated: Oct 07 2024, 08:30 AM IST

ಮಳೆ ಅವಾಂತರಕ್ಕೆ ನಲುಗಿದ ಬೆಂಗಳೂರು : ತಗ್ಗು ಪ್ರದೇಶಗಳು ಜಲಾವೃತಗೊಂಡು ಮನೆಗಳಿಗೆ ನೀರು
Share this Article
  • FB
  • TW
  • Linkdin
  • Email

ಸಾರಾಂಶ

ರಾಜಧಾನಿ ಬೆಂಗಳೂರಿನಲ್ಲಿ ಶನಿವಾರ ಸುರಿದ ಧಾರಾಕಾರ ಮಳೆಗೆ ತಗ್ಗು ಪ್ರದೇಶಗಳು ಜಲಾವೃತಗೊಂಡು ಮನೆಗಳಿಗೆ ನೀರು ನುಗ್ಗಿದೆ. ಮರ, ವಿದ್ಯುತ್‌ ಕಂಬ, ಗೋಡೆ ಕುಸಿದು ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ.

 ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಶನಿವಾರ ಸುರಿದ ಧಾರಾಕಾರ ಮಳೆಗೆ ತಗ್ಗು ಪ್ರದೇಶಗಳು ಜಲಾವೃತಗೊಂಡು ಮನೆಗಳಿಗೆ ನೀರು ನುಗ್ಗಿದೆ. ಮರ, ವಿದ್ಯುತ್‌ ಕಂಬ, ಗೋಡೆ ಕುಸಿದು ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ.

ಶನಿವಾರ ಮಧ್ಯಾಹ್ನದಿಂದ ಆರಂಭಗೊಂಡ ಮಳೆ ರಾತ್ರಿವರೆಗೆ ಧಾರಾಕಾರವಾಗಿ ಸುರಿದಿತ್ತು. ಗುಡುಗು, ಮಿಂಚು ಸಹಿತ ಧಾರಾಕಾರವಾಗಿ ಮಳೆ ಸುರಿದ ಪರಿಣಾಮ ನಗರದಲ್ಲಿ ಜನಜೀವನ ತೊಂದರೆಗೆ ಒಳಗಾಯಿತು.

 ಮಳೆಯ ಆರ್ಭಟದಿಂದಾಗಿ ಬಿನ್ನಿಪೇಟೆ ಪಾರ್ಕ್ ವ್ಯೂವ್ ಅಪಾರ್ಟ್‌ಮೆಂಟ್‌ನ 7 ಅಡಿ ಎತ್ತರದ ಸುಮಾರು ಹತ್ತು ಅಡಿ ಉದ್ದದ ಕಾಂಪೌಂಡ್ ಕುಸಿದಿದೆ. ಇದರಿಂದಾಗಿ ಅಪಾರ್ಟ್‌ಮೆಂಟ್ ಬಳಿ ನಿಂತಿದ್ದ ಹಲವು ಕಾರು, 20ಕ್ಕೂ ಹೆಚ್ಚು ಬೈಕ್‌ಗಳು ಜಖಂಗೊಂಡಿವೆ. ಬಿಬಿಎಂಪಿ ಅಧಿಕಾರಿಗಳು, ಸಿಬ್ಬಂದಿ ಸ್ಥಳಕ್ಕಾಗಮಿಸಿ ಗೋಡೆಯ ಅವಶೇಷಗಳನ್ನು ತೆರವುಗೊಳಿಸಿದ್ದಾರೆ.

ಮತ್ತೊಂದೆಡೆ ಇಟಿಎ ಮಾಲ್ ಬಳಿ ಕುಸಿದಿರುವ ಕಾಂಪೌಂಡ್ ಗೋಡೆಯ ಅವಶೇಷಗಳನ್ನು ತೆರವುಗೊಳಿಸಿ ತೊಂದರೆಗೆ ಸಿಲುಕಿದ್ದ ನಿವಾಸಿಗಳಿಗೆ ಓಡಾಡಲು ಅವಕಾಶ ಮಾಡಿಕೊಡಲಾಗಿದೆ.

 ಕೇಂದ್ರೀಯ ವಿಹಾರ ಅಪಾರ್ಟ್‌ಮೆಂಟ್‌ ಬಳಿ ಕಾಂಪೌಂಡ್ ಕುಸಿದು ಬಿದ್ದಿದೆ. ಯಲಹಂಕ ಕೆರೆ ಹಾಗೂ ಅಪಾರ್ಟ್‌ಮೆಂಟ್ ಮಧ್ಯೆ ಇದ್ದ ಖಾಲಿ ಜಾಗ ಸಂಪೂರ್ಣ ಜಲಾವೃತಗೊಂಡಿದ್ದು, ಅಪಾರ್ಟ್‌ಮೆಂಟ್ ಮನೆಗಳಿಗೂ ನೀರು ನುಗ್ಗಿದೆ.

ಕೇಂದ್ರೀಯ ವಿಹಾರ ಅಪಾರ್ಟ್‌ಮೆಂಟ್‌ ಜಲಾವೃತ

ಯಲಹಂಕ ವಲಯದ ಕೇಂದ್ರೀಯ ವಿಹಾರ ಅಪಾರ್ಟ್‌ಮೆಂಟ್‌ನ ಸುಮಾರು 50 ಅಡಿ ಉದ್ದದ ಕಾಂಪೌಂಡ್ ಗೋಡೆ ಕುಸಿದು ಬಿದ್ದಿರುವ ಕಾರಣ, ಯಲಹಂಕ ಕೆರೆ ಹಾಗೂ ಅಪಾಟ್‌ಮೆಂಟ್‌ ಮಧ್ಯೆ ಇರುವ ಖಾಲಿ ಜಾಗದಲ್ಲಿ ನಿಂತಿದ್ದ ನೀರು ಅಪಾಟ್‌ಮೆಂಟ್‌ನೊಳಗೆ ನುಗ್ಗಿದೆ. ರಾತ್ರಿಯಿಂದ ಸುಮಾರು 4 ಅಡಿ ನೀರು ನಿಂತಿದ್ದು, ಪಾಲಿಕೆಯ ಗ್ಯಾಂಗ್‌ಮನ್‌ ತಂಡ, ಎಸ್‌ಡಿಆರ್‌ಆಫ್, ಅಗ್ನಿಶಾಮಕ ದಳ ಪಂಪ್‌ಸೆಟ್‌ಗಳ ಮೂಲಕ ನೀರು ಹೊರಹಾಕುತ್ತಿವೆ. ಸಂಜೆಯಾದರೂ ನೀರು ಖಾಲಿ ಆಗದೆ ಜನ ಪರದಾಡಿದರು.ಕಾರು- ಬೈಕ್‌ ಮುಳುಗಡೆ:

ಅಪಾರ್ಟ್‌ಮೆಂಟ್‌ನ ಬೇಸ್‌ಮೆಂಟ್‌ನಲ್ಲಿ ಭಾರೀ ಪ್ರಮಾಣ ನೀರು ಶೇಖರಣೆಯಾಗಿದ್ದರಿಂದ ನಿಲ್ಲಿಸಲಾಗಿದ್ದ ಸುಮಾರು 50ಕ್ಕೂ ಅಧಿಕ ಕಾರು, 150 ಬೈಕ್‌ಗಳು ನೀರಿನಲ್ಲಿ ಮುಳುಗಡೆಯಾಗಿದ್ದವು. ಅಗತ್ಯ ವಸ್ತುಗಳನ್ನು ತರಲು ಭಾರೀ ಪ್ರಮಾಣದ ನೀರಿನಲ್ಲಿ ನಿವಾಸಿಗಳು ಓಡಾಟ ನಡೆಸಿದ ದೃಶ್ಯಗಳು ಕಂಡು ಬಂದವು.

ಊಟ- ಕುಡಿಯುವ ನೀರಿನ ವ್ಯವಸ್ಥೆ

ಯಲಹಂಕ ಕೆರೆಗೆ ಸುಮಾರು 10 ಕೆರೆಗಳ ನೀರು ಬರುತ್ತಿದ್ದು, ಇಲ್ಲಿಂದ ಜಕ್ಕೂರು ಕೆರೆಗೆ ನೀರು ಹೋಗುತ್ತಿದೆ. ಕೆರೆ ಭಾಗದಿಂದ 25 ಅಡಿ ಕೆಳಭಾಗದಲ್ಲಿ ಅಪಾರ್ಟ್‌ಮೆಂಟ್‌ ಇರುವ ಕಾರಣ ಹಾಗೂ ಗೋಡೆ ಕುಸಿದು ಪ್ರದೇಶ ಜಲಾವೃತವಾಗಿದೆ. ಗೋಡೆ ಕುಸಿದಿರುವ ಭಾಗದಲ್ಲಿ ಮಣ್ಣಿನ ಬ್ಯಾಗ್‌ಗಳನ್ನು ಅಳವಡಿಸಲಾಗುತ್ತಿದೆ. ಅಪಾರ್ಟ್‌ಮೆಂಟ್‌ ನಿವಾಸಿಗಳಿಗೆ ಟ್ರ್ಯಾಕ್ಟರ್ ಮೂಲಕ‌ ಹಣ್ಣು, ತರಕಾರಿ ಹಾಲು, ಆಹಾರ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿಯಿತು.

ಹಲವು ಕಡೆ ಮನೆಗಳಿಗೆ ನೀರು

ದಕ್ಷಿಣ ವಲಯ ವಿಜಯನಗರದ ಮನುವನದ ಬಳಿ ರಾಜಕಾಲುವೆಯ ಬಳಿಯಿದ್ದ ಸ್ಯಾನಿಟರಿ ಲೈನ್‌ನಲ್ಲಿ ನೀರು ಓವರ್ ಫ್ಲೋ ಆಗಿದ್ದು, ಸುಮಾರು 10 ಮನೆಗಳಿಗೆ ನುಗ್ಗಿದೆ. ಪಾಲಿಕೆ ಸಿಬ್ಬಂದಿ ಸ್ಥಳಕ್ಕೆ ತೆರಳಿ ನೀರನ್ನು ಹೊರಹಾಕುವ ಕಾರ್ಯ ಮಾಡಿದ್ದಾರೆ. ಭಾರಿ ಪ್ರಮಾಣ ಕೆಸರು, ಕೊಳಚೆ ರಸ್ತೆಯಲ್ಲಿ ನಿಂತುಕೊಂಡಿದ್ದರಿಂದ ದುರ್ವಾಸನೆ ಬೀರುತ್ತಿತ್ತು. ಜನರು ಮೂಗು ಮುಚ್ಚಿಕೊಂಡು ಓಡಾಡಬೇಕಾಯಿತು.

ಮರಗಳು ಧರೆಗೆ, ವಿದ್ಯುತ್ ಸಮಸ್ಯೆ

ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಕೆಲವೆಡೆ ಸಮಸ್ಯೆಯಾಗಿದ್ದು, ಮಲ್ಲೇಶ್ವರ 17ನೇ ಕ್ರಾಸ್ ಸೇರಿದಂತೆ ವಿವಿಧ ಕಡೆ 20 ಮರಗಳು ಹಾಗೂ 50 ಮರದ ರೆಂಬೆ-ಕೊಂಬೆಗಳು ಧರೆಗುರುಳಿವೆ. ಸದ್ಯ ಪಾಲಿಕೆಯ ನಿಯಂತ್ರಣ ಕೊಠಡಿ ತಂಡಗಳು ಹಾಗೂ ಮರ ತೆರವು ತಂಡಗಳು ಸಕ್ರಿಯವಾಗಿ ಕಾರ್ಯನಿರ್ವಹಿಸಿ ತೆರವು ಕಾರ್ಯಾಚರಣೆ ನಡೆಸುತ್ತಿವೆ. ಬಸವೇಶ್ವರನಗರ, ಪುಟ್ಟೇನಹಳ್ಳಿ, ಯಲಹಂಕ ಸೇರಿದಂತೆ ವಿವಿಧ ಕಡೆ ವಿದ್ಯುತ್‌ ಕಂಬ ಧರೆಗುರುಳಿ, ವಿದ್ಯುತ್‌ ತಂತಿ ಹರಿದು ಹೋಗಿವೆ. ಹಾಗಾಗಿ ಇಡೀ ರಾತ್ರಿ ವಿದ್ಯುತ್‌ ಸಮಸ್ಯೆ ಉಂಟಾಗಿತ್ತು. ಬೆಸ್ಕಾಂ ಸಿಬ್ಬಂದಿ ಭಾನುವಾರ ಬೆಳಗ್ಗೆ ವಿದ್ಯುತ್‌ ಸಮಸ್ಯೆ ಪರಿಹಾರ ಕಾರ್ಯ ಮಾಡಿದ್ದಾರೆ.

ಬಿಬಿಎಂಪಿ ವಿರುದ್ಧ ಆಕ್ರೋಶ

ಬೆಂಗಳೂರು ನಗರದಲ್ಲಿ ಇಷ್ಟೆಲ್ಲ ಮಳೆ ಅವಾಂತರವಾದರೂ ಬಿಬಿಎಂಪಿ ಅಧಿಕಾರಿಗಳು ಗಮನ ನೀಡದಿರುವುದಕ್ಕೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿನ್ನಿಪೇಟೆಯಲ್ಲಿ ಮಳೆ ಅವಾಂತರಕ್ಕೆ 50ಕ್ಕೂ ಹೆಚ್ಚು ಮಂದಿ ಗೃಹ ಬಂಧನಕ್ಕೆ ಒಳಗಾಗಿದ್ದಾರೆ. ವಾರಾಂತ್ಯ ರಜೆ ಮೂಡಿನಲ್ಲಿರುವ ಬಿಬಿಎಂಪಿ ಅಧಿಕಾರಿಗಳಿಗೆ ಹತ್ತಾರು ಬಾರಿ ಕರೆ ಮಾಡಿದರೂ ಕರೆ ಸ್ವೀಕರಿಸುತ್ತಿಲ್ಲ. ನಮ್ಮನ್ನು ಕಾಪಾಡಿ ಮನೆಯಿಂದ ಹೊರಗೆ ಕರೆದುಕೊಂಡು ಬನ್ನಿ ಕೇಳುವ ಸ್ಥಿತಿ ನಿರ್ಮಾಣವಾಗಿತ್ತು.. ಚರಂಡಿ ನೀರಿನ ದುರ್ವಾಸನೆ ತಡೆಯುವುದಕ್ಕೆ ಆಗುತ್ತಿಲ್ಲ. ವಿದ್ಯುತ್ ಇಲ್ಲ, ಕುಡಿಯೋ ನೀರಿಲ್ಲ, ಸಾಯುವ ಪರಿಸ್ಥಿತಿಯಾಗಿದೆ ಎಂದು ಬಿನ್ನಿಪೇಟೆ ನಿವಾಸಿಗಳು ಕಣ್ಣೀರು ಹಾಕಿದರು.

ರಾಜಕಾಲುವೆ ಕಾಮಗಾರಿ ಶೀಘ್ರ: ವಿಶ್ವನಾಥ್‌

ಕೇಂದ್ರಿಯ ವಿಹಾರ ಅಪಾರ್ಟ್‌ಮೆಂಟ್ ಜಲಾವೃತಗೊಂಡ ಸ್ಥಳಕ್ಕೆ ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೆರೆಗಿಂತ 15 ಅಡಿ ಕೆಳಭಾಗದಲ್ಲಿ ಅಪಾರ್ಟ್‌ಮೆಂಟ್‌ ನಿರ್ಮಾಣ ಮಾಡಿದ್ದಾರೆ. ಅಪಾರ್ಟ್‌ಮೆಂಟ್ ಮುಂಭಾಗ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿದೆ. ಹೆದ್ದಾರಿ ಎತ್ತರವಾಗಿರುವ ಹಿನ್ನೆಲೆಯಲ್ಲಿ ಅಪಾರ್ಟ್‌ಮೆಂಟ್ ಮುಂಭಾಗದಿಂದಲೂ ಮಳೆ ನೀರು ನುಗ್ಗುತ್ತಿದೆ. ಹಿಂದೆ ಈ ಜಾಗ ಗದ್ದೆ ಪ್ರದೇಶವಾಗಿತ್ತು. ಯಲಹಂಕ ಕೆರೆ 11 ಕೆರೆಗಳಿಗೆ ಸಂಪರ್ಕ ಹೊಂದಿದೆ. ಧಾರಾಕಾರ ಮಳೆ ಬಂದಾಗ ಮಳೆ ನೀರಿನಿಂದ ಸಮಸ್ಯೆ ಆಗುತ್ತಿದೆ. ಕಾರಣ ರಾಜಕಾಲುವೆ ಕೇವಲ 3ರಿಂದ 4 ಅಡಿಗಳ ಅಂತರವಿದೆ. ರಾಜಕಾಲುವೆ ಅಗಲಗೊಳಿಸಿ ಕಾಮಗಾರಿ ನಡೆಸಲು ₹110 ಕೋಟಿ ಮಂಜೂರಾಗಿದೆ. ಆದರೆ, ಕೆಲಸ ಆರಂಭ ಆಗಿಲ್ಲ. ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸ್ವಲ್ಪ ಜಾಗ ವಶಕ್ಕೆ ಪಡೆಯಬೇಕಿದೆ. ಮುಂದಿನ ವಾರದಲ್ಲಿ ಈ ಕೆಲಸ ಪ್ರಾರಂಭಿಸಲಾಗುವುದು ಎಂದು ವಿಶ್ವನಾಥ್‌ ಹೇಳಿದ್ದಾರೆ.

ದ್ವೀಪದಂತಾದ ಮಹದೇವಪುರ ರಸ್ತೆಗಳು

ಮಹದೇವಪುರ ವಿಧಾನಸಭಾ ಕ್ಷೇತ್ರದ ರಸ್ತೆಗಳು ಸಂಪೂರ್ಣ ಜಲಾವೃತವಾಗಿವೆ. ಭಾನುವಾರ ಬೆಳಗ್ಗೆ ಸಾರ್ವಜನಿಕರು ಹಾಗೂ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ರಸ್ತೆಗಳಿದು ಆಕ್ರೋಶ ವ್ಯಕ್ತಪಡಿಸಿದರು.

ಮಹದೇವಪುರ ವಲಯದ ಜನರು ಸಾವಿರಾರು ಕೋಟಿ ರುಪಾಯಿ ತೆರಿಗೆ ಕಟ್ಟುತ್ತಾರೆ. ಆದರೂ ಸಣ್ಣ ಮಳೆಗೂ ಇಲ್ಲಿನ ರಸ್ತೆಗಳು ದ್ವೀಪದಂತಾಗುತ್ತವೆ. ರಸ್ತೆ ಸುಧಾರಣೆಯ ನೆಪದಲ್ಲಿ ನೂರಾರು ಕೋಟಿ ಹಣ ವ್ಯಯ ಮಾಡುತ್ತದೆ. ಮತ್ತೆ ಮಳೆ ಬಂದಾಗ ಇದೇ ರೀತಿಯ ಕೆಟ್ಟ ಅವ್ಯವಸ್ಥೆ ಮುಂದುವರಿಯುತ್ತದೆ. ಇದು ಸರ್ಕಾರದ ಹಾಗೂ ಬಿಬಿಎಂಪಿಯ ಬೇಜವಾಬ್ದಾರಿತನ. ಇಲ್ಲಿನ ನಾಗರಿಕರ ಬದುಕು ನರಕ ಸದೃಶವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.