ಭಟ್ಕಳದಲ್ಲಿ ಭಾರೀ ಮಳೆ: ಮನೆಗಳಿಗೆ ಹಾನಿ

| Published : Jul 26 2025, 01:30 AM IST

ಸಾರಾಂಶ

ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೂ ಸುರಿದ ವ್ಯಾಪಕ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿತು.

ಭಟ್ಕಳ: ತಾಲೂನಾದ್ಯಂತ ಶುಕ್ರವಾರವೂ ಮಳೆ ಆರ್ಭಟ ಮುಂದುವರಿದಿದೆ. ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೂ ಸುರಿದ ವ್ಯಾಪಕ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿತು.

ತಾಲೂಕಿನಲ್ಲಿ ಶುಕ್ರವಾರ ಬೆಳಿಗ್ಗೆವರೆಗೆ 136.4 ಮಿ.ಮೀ. ಮಳೆ ಸುರಿದ ಬಗ್ಗೆ ವರದಿಯಾಗಿದೆ. ಭಾರೀ ಮಳೆಗೆ ಹಾಡವಳ್ಳಿ ಗ್ರಾಪಂ ವ್ಯಾಪ್ತಿಯ ಅರವಕ್ಕಿ ಗ್ರಾಮದ ಅಜಿತ್ ಶೆಟ್ಟಿಯವರ ಮನೆಯ ಗೋಡೆಯು ಮಳೆಯಿಂದ ಕುಸಿದು ಹಾನಿಯಾದರೆ, ಬಡೇಭಾಗದಲ್ಲಿ ಪುರ್ಸು ಶಿವು ಮರಾಠಿಯವರ ಮನೆಯ ಗೋಡೆ ಕುಸಿದು ಹಾನಿಯಾಗಿದೆ.

ಮೂಡಭಟ್ಕಳದ ಮಂಕಾಳಿ ದೇವಡಿಗ ಅವರ ಚಾವಣಿ ಕುಸಿದು ಹಾನಿಯಾಗಿದೆ.

ಭಾರೀ ಮಳೆಗೆ ಬೇಂಗ್ರೆ ಗ್ರಾಮದ ಎರಡು ಮನೆಗಳಿಗೆ ನೀರು ನುಗ್ಗಿ ತೊಂದರೆ ಉಂಟಾಯಿತು. ಪಟ್ಟಣದ ಮುಖ್ಯರಸ್ತೆ, ಸುಭಾಸ ರಸ್ತೆಯಲ್ಲಿ ಮಳೆ ನೀರು ನಿಂತು ಸಂಚಾರಕ್ಕೆ ಕೆಲಹೊತ್ತು ತೊಂದರೆ ಉಂಟಾಯಿತು. ಎಂದಿನಂತೆ ಸಂಶುದ್ದೀನ ವೃತ್ತದಲ್ಲಿ ಮಳೆ ನೀರು ನಿಂತು ಕೆಲಕಾಲ ಹೊಳೆಯಾಗಿದ್ದರಿಂದ ಜನ ಹಾಗೂ ವಾಹನ ಸಂಚಾರಕ್ಕೆ ತೊಂದರೆ ಉಂಟಾಯಿತು. ಕಳೆದ ಮೂರ್ನಾಲ್ಕು ದಿನಗಳಿಂದ ತಾಲೂಕಿನಲ್ಲಿ ಸತತವಾಗಿ ಮಳೆ ಸುರಿಯುತ್ತಿರುವುದರಿಂದ ನದಿ, ಹೊಳೆ, ಹಳ್ಳಗಳು ಭರ್ತಿಯಾಗಿ ಅಪಾಯದ ಮಟ್ಟಕ್ಕೆ ತಲುಪಿದೆ. ಹೊಳೆಯಂಚಿನ ತೋಟ, ತಗ್ಗು ಪ್ರದೇಶದ ಭತ್ತದ ಗದ್ದೆಗಳಿಗೂ ನೀರು ನುಗ್ಗಿದೆ. ಭಾರೀ ಗಾಳಿಯೊಂದಿಗೆ ಮಳೆ ಸುರಿಯುತ್ತಿರುವುದರಿಂದ ಮುಂಜಾಗ್ರತಾಕ್ರಮವಾಗಿ ಶನಿವಾರ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.