ಸಾರಾಂಶ
ಬ್ಯಾಡಗಿ: ಭಾನುವಾರ ಸಂಜೆ ಗುಡುಗು, ಮಿಂಚು ಸಹಿತ ಗಾಳಿ ಮಳೆಗೆ ಅಂತಾರಾಷ್ಟ್ರೀಯ ಮೆಣಸಿನಕಾಯಿ ಮಾರುಕಟ್ಟೆ ಸೇರಿದಂತೆ ತಾಲೂಕಿನ ವಿವಿಧೆಡೆಗಳಲ್ಲಿ ಸಾರ್ವಜನಿಕ ಜನಜೀವನ ಅಸ್ತವ್ಯಸ್ತಗೊಳ್ಳುವಂತಾಯಿತಲ್ಲದೇ ವರುಣನ ಆರ್ಭಟಕ್ಕೆ ಮಲ್ಲೂರ ಸುತ್ತಮುತ್ತಲ ಪ್ರದೇಶದಲ್ಲಿ 4 ಮರಗಳು ಧರೆಗೆ ಉರಿಳಿದ್ದು, ಇದರ ಪರಿಣಾಮವಾಗಿ 9 ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ.
ಭಾನುವಾರ ಸಂಜೆ 5 ಗಂಟೆಯವರೆಗೂ ಮಳೆಯ ಯಾವುದೇ ಲಕ್ಷಣಗಳು ಕಂಡುಬಂದಿರಲಿಲ್ಲ. ಬೆಳಗ್ಗೆಯಿಂದಲೇ ಬಿರು ಬೇಸಿಗೆ ವಾತಾವರಣ ಮುಂದುವರಿದಿತ್ತು. ಆದರೆ ಸಂಜೆ 5.30ರ ಸುಮಾರಿಗೆ ವೇಗವಾದ ಗಾಳಿಯೊಂದಿಗೆ ಆರಂಭವಾದ ಮಳೆ ರಭಸವಾಗಿ ಸುರಿಯುವಂತೆ ಮಾಡಿತು.ಮಾರುಕಟ್ಟೆ ವಹಿವಾಟಿಗೆ ಅಡ್ಡಿ: ಸ್ಥಳೀಯ ಅಂತಾರಾಷ್ಟ್ರೀಯ ಮಾರುಕಟ್ಟೆ ಟೆಂಡರ್ ಸೋಮವಾರ ಬೆಳಗ್ಗೆ ಆರಂಭವಾಗಲಿದ್ದು, ಮುನ್ನಾ ದಿನವಾದ ಭಾನುವಾರ ಮಾರುಕಟ್ಟೆಯಲ್ಲಿ ಚೀಲಗಳನ್ನು ಅನ್‌ಲೋಡ್ ಮಾಡುವ ತರಾತುರಿಯಲ್ಲಿದ್ದ ರೈತರಿಗೆ ವರುಣನ ಆರ್ಭಟಕ್ಕೆ ತತ್ತರಿಸಿದರು. ಏಕಾಏಕಿ ಸುರಿದ ಮಳೆಗೆ ವರ್ತಕರು ಹಾಗೂ ದಲಾಲರು ಪ್ಲಾಸ್ಟಿಕ್ ಹೊದಿಕೆ ಹಾಗೂ ತಾಡಪಾಲನಿಂದ ಮಳೆ ನೀರಿಗೆ ಚೀಲಗಳು ತೊಯ್ಯದಂತೆ ಮುಚ್ಚುವ ಮೂಲಕ ರೈತರಿಗೆ ಅಗಬೇಕಾಗಿದ್ದ ನಷ್ಟ ತಡೆಯುವ ನಿಟ್ಟಿನಲ್ಲಿ ಹರಸಾಹಸಪಡುತ್ತಿದ್ದ ದೃಶ್ಯಗಳು ಕಂಡುಬಂದವು. ಅಷ್ಟಕ್ಕೂ ಮಾರಾಟಕ್ಕೆ ಆಗಮಿಸಿದ್ದ ಸುಮಾರು 1 ಲಕ್ಷಕ್ಕೂ ಅಧಿಕ ಚೀಲಗಳು ಲಾರಿಗಳಲ್ಲಿಯೇ ಉಳಿಯುವಂತಾಯಿತು.
4 ಮರಗಳು ಧರೆಗೆ: ಸಂಜೆ ಸುರಿದ ಭಾರಿ ಮಳೆ ಗಾಳಿಗೆ ಮಲ್ಲೂರ ಭಾಗದಲ್ಲಿ ಸುಮಾರು 4 ಮರಗಳು ಧರೆಗೆ ಉರುಳಿದ್ದು, ಪರಿಣಾಮವಾಗಿ ಸುಮಾರು 9ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಮುರಿದು ಬಿದ್ದಿರುವ ಕುರಿತು ಮಾಹಿತಿ ಲಭ್ಯವಾಗಿದೆ. ಮರಗಳ ತೆರವು ಕಾರ್ಯಾಚರಣೆ ಭರದಿಂದ ಸಾಗಿದ್ದು, ಶೀಘ್ರದಲ್ಲೇ ವಿದ್ಯುತ್ ಪೂರೈಕೆ ಮಾಡುವುದಾಗಿ ಸೆಕ್ಷನ್ ಆಫೀಸರ್ ಮಾಲತೇಶ ಕುರುಬಗೊಂಡ ಕನ್ನಡಪ್ರಭಕ್ಕೆ ಮಾಹಿತಿ ನೀಡಿದರು.ರಸ್ತೆ ಮೇಲೆ ಹರಿದ ನೀರು: ಸಂಜೆ ಸುರಿದ ಭಾರಿ ಮಳೆ, ಗಾಳಿಗೆ ಪಟ್ಟಣದ ಕೆಲವೆಡೆ ಚರಂಡಿಗಳಲ್ಲಿ ಮಳೆನೀರು ತುಂಬಿ ರಸ್ತೆಗಳ ಮೇಲೆ ಹರಿಯಿತು. ಇದರಿಂದ ಕಸದ ಜತೆಗೆ ಪ್ಲಾಸ್ಟಿಕ್ ಬಾಟಲಿಗಳು ಕೂಡ ರಸ್ತೆಗಳ ಮೇಲೆ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಅಧಿಕ ಗಾಳಿಯಿಂದಾಗಿ ಸುಮಾರು 3 ತಾಸಿಗೂ ಅಧಿಕ ಸಮಯ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿದೆ.ಜಿಲ್ಲೆಯ ವಿವಿಧೆಡೆ ಮಳೆ
ಹಾವೇರಿ: ಜಿಲ್ಲೆಯ ವಿವಿಧೆಡೆ ಭಾನುವಾರ ಮಳೆಯಾಗಿದೆ. ಬ್ಯಾಡಗಿ, ರಾಣಿಬೆನ್ನೂರು ಸೇರಿದಂತೆ ಜಿಲ್ಲೆಯ ವಿವಿಧೆಡೆ ಭಾನುವಾರ ಮಳೆಯಾಗಿದೆ. ಬ್ಯಾಡಗಿ ಪಟ್ಟಣದಲ್ಲಿ ಗಾಳಿ, ಗುಡುಗು ಮಿಂಚು ಸಹಿತ ಮಳೆಯಾಗಿದೆ. ಗಾಳಿ ರಭಸಕ್ಕೆ 4 ಮರಗಳು ಹಾಗೂ 9 ವಿದ್ಯುತ್ ಕಂಬಗಳು ಧರೆಗುರುಳಿವೆ. ಜಿಲ್ಲೆಯ ಇನ್ನುಳಿದ ತಾಲೂಕುಗಳಲ್ಲಿ ಮೋಡ, ಗಾಳಿ ಗುಡುಗು ಆಗಿದ್ದು, ಕೆಲವು ಕಡೆ ತುಂತುರು ಮಳೆಯಾಗಿದೆ.