ಚನ್ನಗಿರಿಯಲ್ಲಿ ಬಿರುಸಿನ ಮಳೆ: ತುಂಬಿ ಹರಿದ ಕೆರೆ-ಕಟ್ಟೆ, ಹಳ್ಳಗಳು

| Published : Oct 11 2025, 12:02 AM IST

ಚನ್ನಗಿರಿಯಲ್ಲಿ ಬಿರುಸಿನ ಮಳೆ: ತುಂಬಿ ಹರಿದ ಕೆರೆ-ಕಟ್ಟೆ, ಹಳ್ಳಗಳು
Share this Article
  • FB
  • TW
  • Linkdin
  • Email

ಸಾರಾಂಶ

ಪಟ್ಟಣ ಸೇರಿ ತಾಲೂಕಿನಾದ್ಯಂತ ಶುಕ್ರವಾರ ಬೆಳಗಿನ ಜಾವ 3 ಗಂಟೆಯಿಂದ ಬೆಳಿಗ್ಗೆ 9 ಗಂಟೆಯವರೆಗೆ ಸುರಿದ ಭಾರಿ ಮಳೆಗೆ ಪಟ್ಟಣದ ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಪಟ್ಟಣದ ಕೆಲ ಬಡಾವಣೆಗಳಿಗೆ ನೀರು ನುಗ್ಗಿದ್ದು ಈ ನೀರನ್ನು ರಾಜಕಾಲುವೆಯ ಮೂಲಕ ಹರಿಸಲು ಪುರಸಭೆಯ ಸಿಬ್ಬಂದಿ ಹರಸಾಹಸಪಟ್ಟರು.

ಕನ್ನಡಪ್ರಭ ವಾರ್ತೆ ಚನ್ನಗಿರಿ

ಪಟ್ಟಣ ಸೇರಿ ತಾಲೂಕಿನಾದ್ಯಂತ ಶುಕ್ರವಾರ ಬೆಳಗಿನ ಜಾವ 3 ಗಂಟೆಯಿಂದ ಬೆಳಿಗ್ಗೆ 9 ಗಂಟೆಯವರೆಗೆ ಸುರಿದ ಭಾರಿ ಮಳೆಗೆ ಪಟ್ಟಣದ ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಪಟ್ಟಣದ ಕೆಲ ಬಡಾವಣೆಗಳಿಗೆ ನೀರು ನುಗ್ಗಿದ್ದು ಈ ನೀರನ್ನು ರಾಜಕಾಲುವೆಯ ಮೂಲಕ ಹರಿಸಲು ಪುರಸಭೆಯ ಸಿಬ್ಬಂದಿ ಹರಸಾಹಸಪಟ್ಟರು.

ಪಟ್ಟಣದ ಕೃಷಿ ಇಲಾಖೆಯ ಮುಂಭಾಗ, ಮುರುಘರಾಜೇಂದ್ರ ಬಡಾವಣೆ, ಪುಟ್ಟಬಸಪ್ಪನ ಕೆರೆ ಈ ಪ್ರದೇಶದಲ್ಲಿ ರಾಜಕಾಲುವೆಗಳು ಕಟ್ಟಿಕೊಂಡು ಶುಕ್ರವಾರ ಸುರಿದ ಭಾರಿ ಮಳೆಗೆ ಚರಂಡಿಯ ನೀರು ಮನೆಗಳಿಗೆ ನುಗ್ಗಿದೆ.

ಇಲ್ಲಿನ ಕೃಷಿ ಇಲಾಖೆಯ ಮುಂಭಾಗದ ಚರಂಡಿ ಕಟ್ಟಿಕೊಂಡು ರಾಷ್ಟ್ರೀಯ ಹೆದ್ದಾರಿ 13ರಲ್ಲಿ ಸುಮಾರು ಮೂರು ಅಡಿಗಳಷ್ಟು ನೀರು ನಿಂತುಕೊಂಡು ಕೆಲಕಾಲ ವಾಹನ ಸಂಚಾರಕ್ಕೆ ಅಡಚಣೆ ಉಂಟು ಮಾಡಿದರೆ ಹೆದ್ದಾರಿ ಪಕ್ಕದಲ್ಲಿಯೇ ಇರುವ ಕೃಷಿ ಇಲಾಖೆ, ಕೃಷಿಕ ಸಮಾಜದ ಕಚೇರಿ, ಸುಮಾರು 10 ಮಳಿಗೆಗಳಿಗೆ ನೀರು ನುಗ್ಗಿದೆ.

ಇಲ್ಲಿನ ಮುರುಘರಾಜೇಂದ್ರ ಬಡಾವಣೆಯಲ್ಲಿ ರಾಜಕಾಲುವೆ ಕಟ್ಟಿಕೊಂಡು ಸುಮಾರು 50 ಮನೆಗಳಿಗೆ ನೀರು ನುಗ್ಗಿದ್ದು ಈ ಬಡಾವಣೆಯ ಪ್ರದೇಶವೆಲ್ಲ ಜಲಮಯವಾಗಿತ್ತು. ಪಟ್ಟಣದ ಕೆರೆಗೆ ಸಾಕಷ್ಟು ನೀರು ಹರಿದು ಬರುತ್ತಿದ್ದು ಇನ್ನು 3ರಿಂದ 4 ಅಡಿ ನೀರು ಬಂದರೆ ಕೋಡಿ ಬೀಳಲಿದ್ದು ಈ ಸ್ಥಳಕ್ಕೆ ಪುರಸಭೆಯ ಮುಖ್ಯಾಧಿಕಾರಿ ಕೃಷ್ಣ ಡಿ.ಕಟ್ಟಿಮನಿ, ಹಿರಿಯ ಆರೋಗ್ಯ ನಿರೀಕ್ಷಕ ಶಿವರುದ್ರಪ್ಪ ಭೇಟಿ ನೀಡಿ ಕೆರೆ ಕೋಡಿ ಬಿದ್ದಾಗ ತೆಗೆದುಕೊಳ್ಳಬಹುದಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಸ್ಥಳ ಪರಿಶೀಲನೆ ನಡೆಸಿದರು.

ಪಟ್ಟಣದಲ್ಲಿ ಹಾದುಹೋಗುತ್ತಿರುವ ಹರಿದ್ರಾವತಿ ಹಳ್ಳಿ ಮತ್ತು ಕಾಕನೂರು ಗ್ರಾಮದ ಬಳಿ ಹರಿಯುತ್ತಿರುವ ಹಿರೇಹಳ್ಳ ತುಂಬಿಕೊಂಡು ಹರಿಯುತ್ತಿದೆ. ತಾಲೂಕಿನ ಆಗರಬನ್ನಿಹಟ್ಟಿ ಗ್ರಾಮದ ಕೆರೆ ತುಂಬುವ ಹಂತದಲ್ಲಿದೆ. ತಾಲೂಕಿನ ಹಿರೇಮಳಲಿ ಗ್ರಾಮದ ವಡ್ಡಿನ ಕೆರೆ ತುಂಬಿಕೊಂಡು ಕೋಡಿ ತುಂಬಿ ನೀರು ರಭಸವಾಗಿ ಹರಿಯುತ್ತಿದ್ದು ಈಶ್ವರಪ್ಪ ಎಂಬುವರ ತೋಟ ಜಮೀನುಗಳಲ್ಲಿ ನೀರು ನುಗ್ಗಿದೆ.

ಚಿರಡೋಣಿ ಗ್ರಾಮದ ಬಳಿ ಹಳ್ಳ ತುಂಬಿಕೊಂಡು ರಸ್ತೆಯ ಮೇಲೆ ನೀರು ಹರಿಯುತ್ತಿದ್ದು ಗ್ರಾಮದ ಜನರು ಭಯದಿಂದ ರಸ್ತೆಯ ಮೇಲೆ ಒಡಾಡುತ್ತಿದ್ದಾರೆ. ತಾಲೂಕಿನಾದ್ಯಂತ ಶುಕ್ರವಾರ ಬೆಳಗಿನ ಜಾವ 3 ಗಂಟೆಯಿಂದ ಬೆಳಿಗ್ಗೆ 9 ಗಂಟೆಯ ವರೆಗೆ ಸುರಿದ ಮಳೆಯ ಅವಾಂತರಕ್ಕೆ ಯಾವುದೇ ರೀತಿಯ ಜೀವ ಹಾನಿಗಳು ಆಗಲಿಲ್ಲ ಎಂದು ಕೆಲವು ಹಾನಿಗೀಡಾದ ಪ್ರದೇಶಗಳಿಗೆ ಭೇಟಿ ನೀಡಿದ್ದ ತಹಸೀಲ್ದಾರ್ ಎನ್.ಜೆ.ನಾಗರಾಜ್ ತಿಳಿಸಿದ್ದಾರೆ.

ನಲ್ಲೂರು ಹಿರೇಮಳಲಿಗೆ ಸಂಪರ್ಕ ಕೊಡುವ ರಸ್ತೆಯ ಮಧ್ಯದಲ್ಲಿರುವ ಹಳ್ಳ ತುಂಬಿ ರಭಸವಾಗಿ ಹರಿಯುತ್ತಿರುವ ಹಿನ್ನೆಲೆ ಆ ಭಾಗದ ರಸ್ತೆ ಸಂಪೂರ್ಣ ಜಲಾವೃತವಾಗಿದೆ. ದೇವರಹಳ್ಳಿ ಮತ್ತು ಚನ್ನೇಶಪುರ, ಗೊಂದಿಹೊಸಳ್ಳಿ, ಕೊಂಡದಹಳ್ಳಿ, ಲಕ್ಷ್ಮಿಸಾಗರ, ಹರೋನಹಳ್ಳಿ, ವೆಂಕಟೇಶ್ವರ ಕ್ಯಾಂಪ್ ಗ್ರಾಮದಲ್ಲಿ ತಲಾ ಒಂದೊಂದು ಮನೆ ಮಳೆಯಿಂದ ಹಾನಿಗೊಳಗಾಗಿವೆ.

ತಾಲೂಕಿನ ಗೋಪನಾಳ್ ಗ್ರಾಮದಲ್ಲಿ ಮನೆಗಳಿಗೆ ನೀರು ನುಗ್ಗಿದೆ. ತಾಲೂಕಿನಲ್ಲಿ ಶುಕ್ರವಾರ ಸುರಿದ ಮಳೆಯ ಪ್ರಮಾಣ ಚನ್ನಗಿರಿ ಮಳೆ ಮಾಪನ ಕೇಂದ್ರದಲ್ಲಿ 75.0ಮೀ.ಮೀ ಮಳೆಯಾಗಿದ್ದರೆ, ದೇವರಹಳ್ಳಿ 86.4, ಕತ್ತಲಗೆರೆ 7.0, ತ್ಯಾವಣಿಗೆ 10.2, ಬಸವಾಪಟ್ಟಣ 43.0, ಜೋಳದಾಳ್ 68.6, ಸಂತೆಬೆನ್ನೂರು 50.0, ಉಬ್ರಾಣಿ 54.6, ಕೆರೆಬಿಳಚಿ 6.8 ಮೀ.ಮೀ ಮಳೆಯಾಗಿದ್ದು ಒಟ್ಟು 401.6ರಷ್ಟು ಮಳೆಯಾಗಿದೆ.

ಶುಕ್ರವಾರವೂ ತಾಲೂಕಿನಾದ್ಯಂತ ಮೋಡ ಕವಿದ ವಾತಾವರಣ ಮುಂದುವರಿದಿತ್ತು.