ಸಾರಾಂಶ
ಗದಗ-ಬೆಟಗೇರಿ ಅವಳಿ ನಗರದಲ್ಲಿ ಶನಿವಾರ ಮಧ್ಯಾಹ್ನವೇ ಗುಡುಗು ಸಿಡಿಲಿನ ಅಬ್ಬರ ಜೋರಾಗಿತ್ತು. ಆದರೆ ಅಲ್ಪ ಪ್ರಮಾಣದ ಮಳೆಯಾಯಿತು.
ಗದಗ: ಗದಗ-ಬೆಟಗೇರಿ ಅವಳಿ ನಗರದಲ್ಲಿ ಶನಿವಾರ ರಾತ್ರಿ ಗಂಟೆಗೆ ಹೆಚ್ಚು ಕಾಲ ಭಾರಿ ಮಳೆ ಸುರಿದಿದೆ.
ಮಳೆ ಹೊಡೆತಕ್ಕೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಜನತೆ ಪರದಾಡಬೇಕಾಯಿತು. ಬೆಟಗೇರಿ ಭಾಗದಲ್ಲಿ ಬುಡ ಸಮೇತ ಹಲವಾರು ಮರಗಳು, ವಿದ್ಯುತ್ ಕಂಬಗಳು ಉರುಳಿ ಬಿದ್ದಿವೆ.ಮಂಜನಾಥ ನಗರ ಸೇರಿದಂತೆ ಗದಗ-ಬೆಟಗೇರಿ ಭಾಗದ ಬಹುತೇಕ ಬಡಾವಣೆಗಳಲ್ಲಿ ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿತ್ತು.
ಮಧ್ಯಾಹ್ನವೇ ಗುಡುಗು ಸಿಡಿಲಿನ ಅಬ್ಬರ ಜೋರಾಗಿತ್ತು. ಆದರೆ ಅಲ್ಪ ಪ್ರಮಾಣದ ಮಳೆಯಾಯಿತು.ಸಿಡಿಲಿನ ಅಬ್ಬರಕ್ಕೆ ಮಾರುಕಟ್ಟೆ ಸೇರಿದಂತೆ ಪ್ರಮುಖ ಜನ ಸಂಚಾರವಿದ್ದ ರಸ್ತೆಗಳಲ್ಲಿ ಜನರು ಹೆದರಿ ಓಡಿ ಹೋಗುವಂತಾಯಿತು. ಗಾಳಿಯೂ ರಭಸವಾಗಿ ಬೀಸಿತಾದರೂ ಮಳೆ ಮಾತ್ರ ಅಲ್ಪ ಪ್ರಮಾಣದ ಸುರಿಯಿತು. ಬೆಳಗ್ಗೆಯಿಂದಲೇ ಬಿಸಿಲಿನ ತಾಪ ಅತೀ ಜೋರಾಗಿದ್ದ ಹಿನ್ನೆಲೆಯಲ್ಲಿ ಸಂಜೆಯ ವೇಳೆ ಮಳೆ ನಿರೀಕ್ಷೆಯಲ್ಲಿದ್ದ ಜನರಿಗೆ ಮಧ್ಯಾಹ್ನವೇ ಪ್ರಾರಂಭವಾದ ಮಳೆಯಿಂದಾಗಿ ವ್ಯಾಪಾರ ವಹಿವಾಟು ಸೇರಿದಂತೆ ಪ್ರಮುಖ ಚಟುವಟಿಕೆಗಳ ಕೆಲ ಗಂಟೆಗಳ ಸ್ಥಗಿತಗೊಳ್ಳುವಂತಾಯಿತು.
ಬಾಗಿದ ಚಾವಣಿ ತಗಡು:ಶನಿವಾರ ಸಂಜೆ ಬೀಸಿದ ರಭಸದ ಗಾಳಿಗೆ ಬೆಟಗೇರಿ ಬಸ್ ನಿಲ್ದಾಣದ ಪಕ್ಕದಲ್ಲಿಯೇ ನಿರ್ಮಾಣವಾಗಿರುವ ತರಕಾರಿ ಮಾರುಕಟ್ಟೆಯ ಚಾವಣಿ ಬಾಗಿದ್ದು, ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು. ಭಾರೀ ಪ್ರಮಾಣದಲ್ಲಿ ಬೀಸಿದ ಗಾಳಿಗೆ ಕೆಲವೆಡೆ ಚಾವಣಿ ತಗಡುಗಳು ಕಿತ್ತು ಹೋಗಿವೆ. ಮಳೆ ಹಾಗೂ ಗಾಳಿ ಕಡಿಮೆಯಾದ ನಂತರ ಬೃಹತ್ ಕ್ರೇನ್ ಮೂಲಕ ವಾಲಿದ್ದ ಚಾವಣಿಯನ್ನು ಸರಿ ಪಡಿಸುವ ಕಾರ್ಯವನ್ನು ಪ್ರಾರಂಭಿಸಲಾಗಿದ್ದು, ಇದರಿಂದಾಗಿ ನಿತ್ಯವೂ ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟು ನಡೆಸುವವರು ಆತಂಕದಲ್ಲಿದ್ದಾರೆ.