ಹಾವೇರಿ ಜಿಲ್ಲೆಯ ಬಹುತೇಕ ತಾಲೂಕುಗಳಲ್ಲಿ ಸೋಮವಾರ ಮಧ್ಯಾಹ್ನ ಧಾರಾಕಾರ ಮಳೆ ಸುರಿದಿದ್ದು, ಸಿಡಿಲು ಬಡಿದು ರೈತರೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. 5 ಕುರಿಗಳು ಸಿಡಿಲಿಗೆ ಬಲಿಯಾಗಿವೆ.
ಹಾವೇರಿ:ಜಿಲ್ಲೆಯ ಬಹುತೇಕ ತಾಲೂಕುಗಳಲ್ಲಿ ಸೋಮವಾರ ಮಧ್ಯಾಹ್ನ ಧಾರಾಕಾರ ಮಳೆ ಸುರಿದಿದ್ದು, ಸಿಡಿಲು ಬಡಿದು ರೈತರೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. 5 ಕುರಿಗಳು ಸಿಡಿಲಿಗೆ ಬಲಿಯಾಗಿವೆ.
ಭಾರಿ ಮಳೆಗೆ ಹೊಲ-ಗದ್ದೆಗಳು ಹಾಗೂ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ.ಮಳೆಯ ಆರ್ಭಟದ ನಡುವೆಯೇ ಸವಣೂರು ತಾಲೂಕಿನ ಚಿಕ್ಕಮರಳಿಹಳ್ಳಿ ಗ್ರಾಮದಲ್ಲಿ ಸಿಡಿಲು ಬಡಿದು ರೈತ ದೊಡ್ಡಹನುಮಂತಪ್ಪ ನಿಂಗಪ್ಪ ರಿತ್ತಿ (60) ಮೃತಪಟ್ಟಿದ್ದಾರೆ.
ಜಮೀನಿನಲ್ಲಿ ಕೆಲಸಕ್ಕೆ ತೆರಳಿದ್ದ ವೇಳೆ ಮಳೆ ಆರಂಭವಾಗಿದ್ದು, ಮಳೆಯಿಂದ ರಕ್ಷಣೆ ಪಡೆಯಲು ಮರದ ಕೆಳಗೆ ನಿಂತಿದ್ದರು. ಈ ವೇಳೆ ಏಕಾಏಕಿ ಸಿಡಿಲು ಬಡಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ವಿಷಯ ತಿಳಿದು ಸವಣೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಸವಣೂರು ತಾಲೂಕಿನ ಹಿರೇಮುಗದೂರ ಗ್ರಾಮದಲ್ಲಿ ಸಿಡಿಲು ಬಡಿದು 7-8 ಮೇಕೆಗಳು ಮೃತಪಟ್ಟಿವೆ. ಬೈಲಹೊಂಗಲ ತಾಲೂಕಿನ ಹೊನ್ನೂರು ಗ್ರಾಮದ ಲಕ್ಷ್ಮಣ ಕಟ್ಟೇಕಾರ ಅವರಿಗೆ ಸೇರಿದ ಮೇಕೆಗಳು ಎನ್ನಲಾಗಿದೆ. ಸಂಚಾರಿ ಕುರಿಗಾಹಿಯಾಗಿರುವ ಲಕ್ಷ್ಮಣ ಅವರು ಹಿರೇಮುಗದೂರ ಗ್ರಾಮದ ಜಮೀನಿನಲ್ಲಿ ಮೇಕೆಗಳನ್ನು ಮೇಯಲು ಬಿಟ್ಟಿದ್ದರು. ಮಧ್ಯಾಹ್ನ ಏಕಾಏಕಿ ಮಳೆ ಆರಂಭವಾದಾಗ ಮೇಕೆಗಳು ಗಿಡದ ಆಶ್ರಯಕ್ಕೆ ಬಂದಿವೆ. ಇದೇ ವೇಳೆ ಮರಕ್ಕೆ ಸಿಡಿಲು ಬಡಿದ ಪರಿಣಾಮ ಐದು ಮೇಕೆಗಳು ಮೃತಪಟ್ಟಿವೆ. ಘಟನೆಯಿಂದ ಲಕ್ಷಾಂತರ ರು. ಮೌಲ್ಯದ ಮೇಕೆಗಳನ್ನು ಕಳೆದುಕೊಂಡಿರುವ ಕುರಿಗಾಹಿ ಕಣ್ಣೀರಿಟ್ಟಿದ್ದಾರೆ.
ಬೆಳಗ್ಗೆಯಿಂದ ಮೋಡ ಕವಿದ ವಾತಾವರಣವಿದ್ದರೂ ವಿಪರೀತ ಎನ್ನುವ ರೀತಿ ಸೆಕೆ ವಾತಾವರಣವಿತ್ತು. ಮಧ್ಯಾಹ್ನದ ಹೊತ್ತಿಗೆ ಶಿಗ್ಗಾಂವಿ, ಸವಣೂರು, ಹಿರೇಕೆರೂರು, ರಟ್ಟಿಹಳ್ಳಿ ಭಾಗದಲ್ಲಿ ಭಾರಿ ಮಳೆ ಸುರಿದಿದೆ. ಗ್ರಾಮೀಣ ಪ್ರದೇಶಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಜಿಲ್ಲೆಯ ಹಲವು ಭಾಗಗಳಲ್ಲಿ ಒಂದು ತಾಸಿಗೂ ಹೆಚ್ಚು ಕಾಲ ನಿರಂತರವಾಗಿ ಮಳೆಯಾಗಿದೆ.ಕರ್ಜಗಿ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಧ್ಯಾಹ್ನದ ಬಳಿಕ ಆರಂಭವಾದ ಮಳೆ ಒಂದು ತಾಸಿಗೂ ಹೆಚ್ಚು ಕಾಲ ಎಡೆಬಿಡದೆ ಸುರಿಯಿತು. ಮಳೆ ನಿಲ್ಲುವ ಲಕ್ಷಣ ಕಾಣದ ಹಿನ್ನೆಲೆಯಲ್ಲಿ ಜನರು ಮನೆಗಳಿಂದ ಹೊರಬರಲು ಪರದಾಡಿದರು. ರಸ್ತೆಗಳ ಮೇಲೆ ನೀರು ನಿಂತಿದ್ದರಿಂದ ವಾಹನ ಸಂಚಾರಕ್ಕೂ ತೊಂದರೆಯಾಯಿತು.
ಭಾರಿ ಮಳೆಯಿಂದ ತಾಲೂಕಿನ ಹನುಮನಹಳ್ಳಿ ಗ್ರಾಮದಲ್ಲಿ ಪರಿಸ್ಥಿತಿ ಮತ್ತಷ್ಟು ಗಂಭೀರಗೊಂಡಿದೆ. ಗ್ರಾಮದ ಸುತ್ತಮುತ್ತ ನೀರು ನಿಂತು, ಹಲವು ಕಡೆ ರಸ್ತೆ ಸಂಪರ್ಕ ಕಡಿತಗೊಳ್ಳುವ ಸ್ಥಿತಿ ನಿರ್ಮಾಣವಾಯಿತು. ಮನೆಗಳು, ರಸ್ತೆಗಳು ಹಾಗೂ ತಗ್ಗು ಪ್ರದೇಶಗಳಿಗೆ ನೀರು ನುಗ್ಗುವ ಭೀತಿ ಎದುರಾಗಿ ಆತಂಕದಲ್ಲೇ ಕಾಲ ಕಳೆದರು. ಬಳಿಕ ಮಳೆ ನಿಂತಿದ್ದರಿಂದ ಸ್ಥಳೀಯರು ನಿರಾಳರಾದರು.