ಜೋಯಿಡಾ ತಾಲೂಕಿನಲ್ಲಿ ಭಾರಿ ಮಳೆ

| Published : Aug 20 2025, 01:30 AM IST

ಸಾರಾಂಶ

ಜೋಯಿಡಾ ತಾಲೂಕಿನಲ್ಲಿ ಮಂಗಳವಾರ ಭಾರಿ ಮಳೆ ಸುರಿದಿದೆ. ಇದರಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಹಲವು ಗ್ರಾಮಗಳಲ್ಲಿ ರಸ್ತೆ, ಸೇತುವೆ ಮೇಲೆ ನೀರು ಹರಿಯುತ್ತಿದೆ.

ಜೋಯಿಡಾ: ತಾಲೂಕಿನಲ್ಲಿ ಮಂಗಳವಾರ ಭಾರಿ ಮಳೆ ಸುರಿದಿದೆ. ಇದರಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ.

ಶಾಲೆ-ಕಾಲೇಜುಗಳಿಗೆ ರಜೆ ನೀಡಿದ ಕಾರಣ ಪಾಲಕರು ಸ್ವಲ್ಪ ನೆಮ್ಮದಿಯಿಂದ ಇದ್ದಾರೆ. ಭಾರಿ ಮಳೆಗೆ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ. ಪ್ರತಿ ಹಳ್ಳಿಗಳಲ್ಲೂ ಹಳ್ಳ-ಕೊಳ್ಳಗಳನ್ನು ದಾಟುವ ಸಮಸ್ಯೆ ಇದೆ. ಬೇಸಿಗೆಯಲ್ಲಿ ತಾತ್ಕಾಲಿಕ ಪರಿಹಾರ ಮಾಡಿಕೊಂಡರೂ ಮಳೆಗಾಲದಲ್ಲಿ ನೀರು ತುಂಬಿ ಸಮಸ್ಯೆ ಕಾಡುತ್ತದೆ. ಭಾರಿ ಮಳೆಯಿಂದ ಉಳವಿ ಕ್ಷೇತ್ರ ಸಂಪರ್ಕದ ರಸ್ತೆ ಅಂಬೊಳ್ಳಿಯಲ್ಲಿ ಸೇತುವೆ ಕುಸಿದಿದೆ. ಕಳೆದ ತಿಂಗಳು ಉಳವಿಯ ಸಂಪರ್ಕದ ಇನ್ನೊಂದು ಭಾಗವಾದ ಗುಂದ ಉಳವಿ ರಸ್ತೆಯ ಕೈಟಾ ಎಂಬಲ್ಲಿ ಸೇತುವೆ ಕುಸಿದು ಸಂಪರ್ಕ ಕಡಿತವಾಗಿತ್ತು. ಅಣಶಿ ಗ್ರಾಪಂನ ನವರ, ನುಜ್ಜಿ, ಪಾಟ್ನೆ, ಕುಮಗಾಳಗಳಲ್ಲಿ ಸೇತುವೆಗಳು ಮುಳುಗಿವೆ. ಇದು ಪ್ರತಿ ವರ್ಷದ ಕಥೆ. ಶಾಲೆಗೆ ಹೋಗುವವರಿಗೆ, ಜನಸಾಮಾನ್ಯರಿಗೆ ತುಂಬಾ ತೊಂದರೆಯಾಗಿದೆ. ಹೀಗಾಗಿ ರಸ್ತೆ, ಸೇತುವೆಗಳನ್ನು ಎತ್ತರಿಸಿ ಮಳೆಗಾಲದಲ್ಲಿ ತೊಂದರೆ ಆಗದಂತೆ ಸಂಬಂಧಪಟ್ಟ ಇಲಾಖೆಗಳು ಕ್ರಮ ವಹಿಸಬೇಕು ಎಂದು ಅಣಶಿ ಗ್ರಾಪಂ ಅಧ್ಯಕ್ಷ ಅರುಣ ದೇವಳಿ ಆಗ್ರಹಿಸಿದ್ದಾರೆ.

ತಾಲೂಕಿನಲ್ಲಿ ವಾಡಿಕೆಯ ಮಳೆ 2067 ಮಿಲಿಮೀಟರ್ ಇದ್ದು, ಈಗಾಗಲೇ 1900 ಮಿಲಿಮೀಟರ್ ಮಳೆ ಆಗಿದೆ. ಇನ್ನೆರಡು ದಿನಗಳಲ್ಲಿ ವಾಡಿಕೆಯ ಮಳೆ ಮುಗಿದು ಹೆಚ್ಚಿನ ಮಳೆ ಬೀಳುವ ಸಾಧ್ಯತೆ ಇದೆ. ತಾಲೂಕು ಸೌಧದಲ್ಲಿ ಮಳೆಯ ಲೆಕ್ಕಾಚಾರಗಳನ್ನು ನಮೂದು ಮಾಡದೇ ಇರುವುದರಿಂದ ತೊಂದರೆಯಾಗಿದೆ. ಹಿಂದೆ ಪ್ರತಿದಿನ ಮಳೆ ದಾಖಲೆ ಮಾಡಲಾಗುತ್ತಿತ್ತು. ರಜಿಸ್ಟರ್ ಎಂಟ್ರಿ ಮಾಡುವ ಪದ್ಧತಿ ಇತ್ತು, ಈಗ ಮಾಡುತ್ತಿಲ್ಲ.

ಗಣೇಶಗುಡಿಯಲ್ಲಿ ಸುಪಾ ಜಲಾಶಯ 10 ಮೀಟರ್ ಮಾತ್ರ ತುಂಬುವುದು ಬಾಕಿ ಇದೆ. ಇಂದಿನ ನೀರಿನ ಮಟ್ಟ 554.6 ಮೀಟರ್ ಆಗಿದ್ದು ಗರಿಷ್ಠ ಮಟ್ಟ 564 ಮೀಟರ್‌ಗಳಾಗಿವೆ.