ಮಡಿಕೇರಿ ಸೇರಿದಂತೆ ವಿವಿಧೆಡೆ ಭಾರಿ ಮಳೆ

| Published : May 19 2024, 01:49 AM IST

ಸಾರಾಂಶ

ಮಡಿಕೇರಿ ಸುತ್ತಮುತ್ತ ವಿವಿಧೆಡೆ ಬಿರುಸಿನ ಮಳೆ ಸುರಿದಿದೆ. ಸುಮಾರು ಎರಡು ಗಂಟೆ ಬಿಟ್ಟು ಬಿಡದೆ ಮಳೆಯಾಗಿದೆ. ರಸ್ತೆಗಳಲ್ಲಿ ಮಳೆ ನೀರು ಕಾಲುವೆಯಂತೆ ಹರಿದಿದೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಮಡಿಕೇರಿ ಸುತ್ತಮುತ್ತ ಶನಿವಾರ ಮಧ್ಯಾಹ್ನ ಬಿರುಸಿನ ಮಳೆ ಸುರಿದಿದ್ದು, ಜಿಲ್ಲಾ ಕೇಂದ್ರದಲ್ಲಿ ಚಳಿಯ ವಾತಾವರಣ ಸೃಷ್ಟಿಯಾಗಿತ್ತು.

ಸುಮಾರು ಎರಡು ಗಂಟೆ ಬಿಟ್ಟು ಬಿಡದೆ ಸುರಿದ ಮಳೆಯಿಂದ ನಗರದ ರಸ್ತೆಗಳಲ್ಲಿ ಮಳೆ ನೀರು ಕಾಲುವೆಯಂತೆ ಹರಿಯುತ್ತಿತ್ತು.

ಬೆಳಗ್ಗೆಯಿಂದಲೂ ಮೋಡ ಕವಿದ ವಾತಾವರಣವಿತ್ತು. ಮಡಿಕೇರಿ ಸೇರಿದಂತೆ ಮದೆನಾಡು, ಗಾಳಿಬೀಡು ಸುತ್ತಮುತ್ತ ವ್ಯಾಪ್ತಿಯಲ್ಲೂ ಮಧ್ಯಾಹ್ನ ಒಂದು ಗಂಟೆಯಿಂದ ಗಾಳಿ ಸಹಿತ ಜೋರು ಮಳೆ ಸುರಿದಿದೆ. ಬಿಟ್ಟು ಬಿಡದೆ ಸುರಿದ ಮಳೆಯಿಂದ ವಾಹನ ಸವಾರರು, ಪಾದಚಾರಿಗಳು ಪರದಾಟ ನಡೆಸಿದರು. ರಸ್ತೆ ಬದಿಗಳಲ್ಲಿ ಹಾಕಲಾಗಿದ್ದ ತ್ಯಾಜ್ಯಗಳು ರಭಸವಾಗಿ ಹರಿಯುವ ಮಳೆ ನೀರಿನಲ್ಲಿ ಕೊಚ್ಚಿಕೊಂಡು ಹೋದ ದೃಶ್ಯ ಕಂಡು ಬಂತು.

ಬಿಸಿಲಿನಿಂದ ಬತ್ತಿ ಹೋಗಿದ್ದ ಸಣ್ಣ ಸಣ್ಣ ತೋರೆಗಳಲ್ಲಿ ನೀರಿನ ಹರಿವು ಕಂಡು ಬಂದಿದೆ.

ಜಿಲ್ಲೆಯಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ ಮಳೆ 12.10 ಮಿ.ಮೀ. ಮಳೆಯಾಗಿದೆ. ಮಡಿಕೇರಿ ತಾಲೂಕಿನಲ್ಲಿ 7.05 ಮಿ.ಮೀ., ವಿರಾಜಪೇಟೆ ತಾಲೂಕಿನಲ್ಲಿ 17.20 ಮಿ.ಮೀ, ಪೊನ್ನಂಪೇಟೆ ತಾಲೂಕಿನಲ್ಲಿ 16.11 ಮಿ.ಮೀ, ಸೋಮವಾರಪೇಟೆ ತಾಲೂಕಿನಲ್ಲಿ 12.95 ಮಿ.ಮೀ, ಕುಶಾಲನಗರ ತಾಲೂಕಿನಲ್ಲಿ 7.20 ಮಿ.ಮೀ ಸರಾಸರಿ ಮಳೆಯಾಗಿದೆ.

ಹೋಬಳಿವಾರು ದಾಖಲಾಗಿರುವ ಮಳೆ ವಿವರ: ಮಡಿಕೇರಿ ಕಸಬಾ 9.60, ನಾಪೋಕ್ಲು 16.20, ಸಂಪಾಜೆ 1, ಭಾಗಮಂಡಲ 1.40, ವಿರಾಜಪೇಟೆ ಕಸಬಾ 34.40, ಹುದಿಕೇರಿ 8.40, ಶ್ರೀಮಂಗಲ 1, ಪೊನ್ನಂಪೇಟೆ 35, ಬಾಳೆಲೆ 20.03, ಸೋಮವಾರಪೇಟೆ ಕಸಬಾ 12.40, ಶನಿವಾರಸಂತೆ 4.20, ಶಾಂತಳ್ಳಿ 26, ಕೊಡ್ಲಿಪೇಟೆ 9.20, ಕುಶಾಲನಗರ 0.40, ಸುಂಟಿಕೊಪ್ಪ 14 ಮಿ.ಮೀ. ಮಳೆಯಾಗಿದೆ.

-----------------------

ಗುಡುಗು, ಮಿಂಚು ಸಹಿತ ಭಾರಿ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ

ಮಡಿಕೇರಿ : ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ಚಾಮರಾಜನಗರ ಮತ್ತು ದಕ್ಷಿಣ ಕನ್ನಡ, ಉಡುಪಿಯ ಕರಾವಳಿ ಸೇರಿದಂತೆ ರಾಜ್ಯದ ಹಲವೆಡೆ ಮೇ 19ರಿಂದ 21 ರವರೆಗೆ ಮೂರು ದಿನಗಳ ಕಾಲ ವೇಗದಲ್ಲಿ ಗಾಳಿ ಬೀಸುವುದರೊಂದಿಗೆ ಗುಡುಗು, ಮಿಂಚು ಸಹಿತ ಭಾರಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದ್ದು, ಬಳಿಕ ಮಳೆಯ ತೀವ್ರತೆ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದೆ.