ಜಿಲ್ಲೆಯ ಹಲವೆಡೆ ಜೋರು ಮಳೆ

| Published : Jul 26 2025, 12:00 AM IST

ಸಾರಾಂಶ

ಜಿಲ್ಲೆಯಲ್ಲಿ ಕಳೆದರೆಡು ದಿನಗಳಿಂದ ಹಲವೆಡೆ ಜೋರು ಮಳೆಯಾಗುತ್ತಿದ್ದು, ಜಲಾಶಯಗಳಿಗೆ ಹರಿದು ಬರುತ್ತಿರುವ ನೀರಿನ ಪ್ರಮಾಣ ಹೆಚ್ಚಾಗಿದೆ. ಕೆಲವೆಡೆ ಜೋರು ಮಳೆಗೆ ಮನೆಯ ಗೋಡೆಗಳು ಕುಸಿದಿವೆ.

ಶಿವಮೊಗ್ಗ: ಜಿಲ್ಲೆಯಲ್ಲಿ ಕಳೆದರೆಡು ದಿನಗಳಿಂದ ಹಲವೆಡೆ ಜೋರು ಮಳೆಯಾಗುತ್ತಿದ್ದು, ಜಲಾಶಯಗಳಿಗೆ ಹರಿದು ಬರುತ್ತಿರುವ ನೀರಿನ ಪ್ರಮಾಣ ಹೆಚ್ಚಾಗಿದೆ. ಕೆಲವೆಡೆ ಜೋರು ಮಳೆಗೆ ಮನೆಯ ಗೋಡೆಗಳು ಕುಸಿದಿವೆ.

ಕಳೆದ 15 ದಿನಗಳಿಂದ ತಗ್ಗಿದ್ದ ಮಳೆ ಪ್ರಮಾಣ ಬುಧವಾರದಿಂದ ಹೆಚ್ಚಾಗಿತ್ತು. ಗುರುವಾರ ರಾತ್ರಿಯೂ ಹಲವೆಡೆ ಮಳೆ ಜೋರಾಗಿಯೇ ಸುರಿದಿತ್ತು. ಮಳೆ ಹೆಚ್ಚಾಗುತ್ತಿದ್ದಂತೆ ಶಾಲಾ ಮಕ್ಕಳ ಹಿತದೃಷ್ಟಿಯಿಂದ ಭದ್ರಾವತಿ ಹಾಗೂ ತೀರ್ಥಹಳ್ಳಿ ತಾಲೂಕು ಭಾಗದ ಶಾಲಾ-ಕಾಲೇಜುಗಳಿಗೆ ಶುಕ್ರವಾರ ರಜೆ ಘೋಷಣೆ ಮಾಡಲಾಗಿತ್ತು.

ಶುಕ್ರವಾರ ಜಿಲ್ಲೆಯಲ್ಲಿ 33.97 ಮಿ.ಮೀ ಸರಾಸರಿ ಮಳೆ ಸುರಿದಿದ್ದು, ತಿರ್ಥಹಳ್ಳಿಯಲ್ಲಿ 53.70, ಸಾಗರದಲ್ಲಿ 69.60, ಹೊಸನಗರದಲ್ಲಿ 52.40 ಮಳೆ ಸುರಿದಿದೆ. ಉಳಿದಂತೆ ಶಿವಮೊಗ್ಗದಲ್ಲಿ 12.90 ಮಿ.ಮೀ, ಭದ್ರಾವತಿಯಲ್ಲಿ 8 ಮಿ.ಮೀ., ಶಿಕಾರಿಪುರದಲ್ಲಿ 12.50 ಮಿ.ಮೀ, ಸೊರಬದಲ್ಲಿ 28.50 ಮಿ.ಮೀ ಮಳೆಯಾಗಿದೆ.

ಜಲಾಶಯಗಳ ಒಳ ಹರಿವು ಹೆಚ್ಚಳ:

ಜಿಲ್ಲೆಯಲ್ಲಿ ಮಳೆ ಪ್ರಮಾಣ ಹೆಚ್ಚುತ್ತಿದ್ದಂತೆ ಜಲಾಶಯಗಳ ಒಳ ಹರಿವು ಕೂಡ ಹೆಚ್ಚಾಗತೊಡಗಿದೆ. ಶರಾವತಿ ಹಿನ್ನೀರು ಪ್ರದೇಶದಲ್ಲಿ ನಿರಂತವಾಗಿ ಮಳೆಯಾಗುತ್ತಿರುವುದರಿಂದ ಲಿಂಗನಮಕ್ಕಿ ಜಲಾಶಯಕ್ಕೆ ಶುಕ್ರವಾರ ಒಂದೇ ದಿನ 40 ಸಾವಿರ ಕ್ಯುಸೆಕ್‌ ನೀರು ಹರಿದು ಬಂದಿದೆ. 151.64 ಟಿಎಂಸಿ ನೀರಿನ ಸಾಮಾರ್ಥ್ಯ ಹೊಂದಿರುವ ಈ ಜಲಾಶಯದಲ್ಲಿ ಸದ್ಯ 112.81 ಟಿಎಂಸಿ ನೀರು ಸಂಗ್ರಹವಿದೆ. ಜಲಾಶಯ ಮಟ್ಟ 1806.40 (ಗರಿಷ್ಠ ಮಟ್ಟ 1819 ಅಡಿ) ಅಡಿಗೆ ತಲುಪಿದ್ದು, ಭರ್ತಿಗೆ 13 ಅಡಿ ಅಷ್ಟೇ ಬಾಕಿ ಉಳಿದಿದೆ.

ಇನ್ನು ಭದ್ರಾ ಜಲಾಶಯದಲ್ಲೂ ಒಳ ಹರಿವು ಪ್ರಮಾಣ ಹೆಚ್ಚಾಗಿದ್ದು, 20407 ಕ್ಯುಸೆಕ್ ನೀರು ಹರಿದು ಬಂದಿದೆ. 71.53 ಟಿಎಂಸಿ ನೀರಿನ ಸಾಮಾರ್ಥ್ಯ ಹೊಂದಿರುವ ಈ ಜಲಾಶಯದಲ್ಲಿ ಸದ್ಯ 64.77 ಟಿಎಂಸಿ ನೀರು ಸಂಗ್ರಹವಾಗಿದ್ದು, 8914 ಕ್ಯುಸೆಕ್‌ ನೀರನ್ನು ನದಿಗೆ ಹರಿಸಲಾಗುತ್ತಿದೆ. ಜಲಾಶಯ ಮಟ್ಟ 180.6 (ಗರಿಷ್ಟ ಮಟ್ಟ 186 ಅಡಿ) ಅಡಿಗೆ ತಲುಪಿದ್ದು, ಭರ್ತಿಗೆ ಇನ್ನು ಆರು ಅಡಿ ಮಾತ್ರ ಬಾಕಿ ಉಳಿದಿದೆ. ಶಿಕಾರಿಪುರದಲ್ಲಿ ನಿರಂತರ ಮಳೆ:

ಶಿಕಾರಿಪುರದಲ್ಲಿ ಶುಕ್ರವಾರ ಬೆಳಗಿನಿಂದ ಸತತ ಮಳೆ ಸುರಿಯುತ್ತಿದ್ದು, ಸಂಪೂರ್ಣ ಮೋಡ ಕವಿದ ವಾತಾವರಣ ನಿರ್ಮಾಣವಾಗಿದೆ.

ಕಳೆದ 2 ದಿನದಿಂದ ಮಳೆ ಸುರಿಯುತ್ತಿದ್ದು, ಶುಕ್ರವಾರ ಬಿಡುವಿಲ್ಲದೆ ಮಳೆಯಾಗಿದೆ. ಮಳೆ ಸಾಧಾರಣವಾಗಿದ್ದರೂ ಬಿಡುವಿಲ್ಲದೆ ಸುರಿದಿದ್ದರಿಂದ ಸಂಪೂರ್ಣ ಸೂರ್ಯನ ದರ್ಶನವಿಲ್ಲದೆ ಮಳೆಯಾಗಿದೆ. ನಿರಂತರ ಮಳೆಯಿಂದಾಗಿ ಕೃಷಿ ಚಟುವಟಿಕೆಗೆ ಹಿನ್ನೆಡೆಯಾಗಿದೆ. ಮೆಕ್ಕೆ ಜೋಳ, ಭತ್ತ ಬಿತ್ತನೆ ಸಾಧ್ಯವಾಗುತ್ತಿಲ್ಲ ಹಾಗೂ ಅಡಕೆ ತೋಟಕ್ಕೆ ಕೊಳೆ ರೋಗ ತಗಲುವ ಸಾಧ್ಯತೆ ಹೆಚ್ಚಿದ್ದು, ರೈತ ವರ್ಗ ಚಿಂತಾಕ್ರಾಂತರಾಗಿದ್ದಾರೆ.ಕುಸಿದು ಬಿದ್ದ ದನದ ಕೊಟ್ಟಿಗೆ: ಆನಂದಪುರ ಸುತ್ತಮುತ್ತ ಸುರಿಯುತ್ತಿರುವ ಮಳೆಯಿಂದ ಸಮೀಪದ ಆಚಾಪುರ ಗ್ರಾಮ ಪಂಚಾಯಿತಿಯ ಮುರುಘ ಮಠದ ಶೇಖರ್ ಪೂಜಾರಿ ಎಂಬುವರ ದನದ ಕೊಟ್ಟಿಗೆ ಗುರುವಾರ ತಡರಾತ್ರಿ ಸಂಪೂರ್ಣ ಕುಸಿದು ಬಿದ್ದಿದೆ.

ಘಟನೆಯಲ್ಲಿ ಕೊಟ್ಟಿಗೆಯಲ್ಲಿದ್ದ 12 ಹಸು ಮತ್ತು ಎಮ್ಮೆಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಆಚಾಪುರ ಗ್ರಾಪಂ ಪಿಡಿಒ ರಂಗಸ್ವಾಮಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಮಳೆಯಿಂದಾದ ಅನಾಹುತಕ್ಕೆ ಉದ್ಯೋಗ ಖಾತ್ರಿ ಯೋಜನೆ ಅಡಿ ದನದ ಕೊಟ್ಟಿಗೆ ನಿರ್ಮಾಣ ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು.