ಸಾರಾಂಶ
ಕಳೆದೊಂದು ವಾರದಿಂದ ಅಬ್ಬರಿಸಿದ ಮಳೆ ತಾಲೂಕಿನ ಚಿತ್ರಣವನ್ನೇ ಬದಲಾಯಿಸಿದ್ದು, ಕೆರೆಕಟ್ಟೆಗಳು ಭರ್ತಿಯಾಗಿ ಕೋಡಿ ಬಿದ್ದಿವೆ. ನೂರಾರು ಹೆಕ್ಟೇರ್ ಬೆಳೆ ಹಾನಿಯಾಗಿದ್ದು, ಒಟ್ಟು ಹದಿನಾಲ್ಕು ಮನೆಗಳು ಭಾಗಶಃ ಕುಸಿದಿವೆ. ಲಕ್ಷಾಂತರ ರು. ನಷ್ಟ ಸಂಭವಿಸಿದೆ.
ಬಿ.ಜಿ.ಕೆರೆ ಬಸವರಾಜ
ಕನ್ನಡಪ್ರಭ ವಾರ್ತೆ ಮೊಳಕಾಲ್ಮುರುಕಳೆದೊಂದು ವಾರದಿಂದ ಅಬ್ಬರಿಸಿದ ಮಳೆ ತಾಲೂಕಿನ ಚಿತ್ರಣವನ್ನೇ ಬದಲಾಯಿಸಿದ್ದು, ಕೆರೆಕಟ್ಟೆಗಳು ಭರ್ತಿಯಾಗಿ ಕೋಡಿ ಬಿದ್ದಿವೆ. ನೂರಾರು ಹೆಕ್ಟೇರ್ ಬೆಳೆ ಹಾನಿಯಾಗಿದ್ದು, ಒಟ್ಟು ಹದಿನಾಲ್ಕು ಮನೆಗಳು ಭಾಗಶಃ ಕುಸಿದಿವೆ. ಲಕ್ಷಾಂತರ ರು. ನಷ್ಟ ಸಂಭವಿಸಿದೆ.
ದೇವಸಮುದ್ರ ಹೋಬಳಿಯ ಪಕ್ಕುರ್ತಿ, ದೇವಸಮುದ್ರ, ಗೌರಸಮುದ್ರ, ಚಿಕ್ಕನ ಹಳ್ಳಿ, ಕೆರೆಕೊಂಡಾಪುರ, ಕೋನಾಪುರ, ಕೃಷ್ಣ ರಾಜಾಪುರ, ಸಿದ್ದಾಪುರ, ಹೊಸೂರು ಸೇರಿದಂತೆ ಒಂಬತ್ತು ಕೆರೆಗಳು ಭರ್ತಿಯಾಗಿ ಕೋಡಿ ಬಿದ್ದಿದ್ದು, ಅಪಾರ ಪ್ರಮಾಣದ ನೀರು ಚಿನ್ನ ಹಗರಿ ನದಿ ಮೂಲಕ ಆಂಧ್ರಪಾಲಾಗುತ್ತಿದೆ. ಕಸಬಾ ಹೋಬಳಿಯಲ್ಲಿ ಪಟ್ಟಣ ಸೇರಿದಂತೆ ಗುಂಡ್ಲೂರು ಭಟ್ರಳ್ಳಿ, ತುಪ್ಪದಕ್ಕನಹಳ್ಳಿ, ನಾಗಸಮುದ್ರ ಕೆರೆಗಳು ತುಂಬಿ ಕೋಡಿ ಬಿದ್ದಿವೆ. ಕೋನಸಾಗರ ಹಾಗೂ ಬಿ.ಜಿ.ಕೆರೆಯ ದುಪ್ಪಿ ಕೆರೆ ಕೋಡಿ ಬೀಳುವ ಹಂತದಲ್ಲಿವೆ. ದೇವಸಮುದ್ರ ಹಾಗೂ ಕಸಬಾ ಹೋಬಳಿಯಲ್ಲಿ ತಲಾ ಏಳು ಮನೆಗಳು ಭಾಗಶಃ ಕುಸಿದಿದ್ದು, ಲಕ್ಷಾಂತರ ರು. ನಷ್ಟವಾಗಿದೆ. ಇನ್ನು ಬಿಜಿಕೆರೆ ಬಸವೇಶ್ವರ ನಗರದಲ್ಲಿ ಹತ್ತಕ್ಕೂ ಹೆಚ್ಚು ಮನೆಗಳಲ್ಲಿ ನೀರು ನುಗ್ಗಿದೆ. ಬಿಎಸ್‌ಎನ್‌ಎಲ್ ಕಚೇರಿ ಸಮೀಪದಲ್ಲಿ ಸೂಕ್ತ ಚರಂಡಿ ಇಲ್ಲದೆ ಸ್ವಾಮಿ ಎಂಬುವರ ಮನೆಗೆ ನೀರು ನುಗ್ಗಿ ಭಾರೀ ಆವಾಂತರ ಸೃಷ್ಟಿ ಮಾಡಿದೆ.54 ಹೆಕ್ಟೇರ್ ಪ್ರದೇಶದಲ್ಲಿ ಮಳೆ ಹಾನಿ: ತಾಲೂಕಿನಲ್ಲಿ ಬಿಟ್ಟೂಬಿಡದೆ ಸುರಿದ ಭರ್ಜರಿ ಮಳೆಯಿಂದ ದೇವಸಮುದ್ರ ಕೆರೆಯ ಹಿನ್ನೀರು 150 ಹೆಕ್ಟೇರ್ ಪ್ರದೇಶವನ್ನು ಆವರಿಸಿ ಬೆಳೆ ಹಾನಿ ಮಾಡಿದೆ. ಇದು ಪ್ರತಿ ಬಾರಿ ಕೆರೆ ತುಂಬಿದಾಗ ಎದುರಾಗುವ ಈ ಭಾಗದ ರೈತರ ಸಮಸ್ಯೆ. ಇನ್ನು ಈ ಬಾರಿ ಶೇಂಗಾ, ಹತ್ತಿ, ಜೋಳ, ರಾಗಿ ಸೇರಿದಂತೆ ಒಟ್ಟು 54 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಈಗಾಗಲೇ ಸರ್ಕಾರಕ್ಕೆ ವರದಿ ನೀಡಲಾಗಿದೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರಕಾಶ್ ತಿಳಿಸಿದ್ದಾರೆ.ಮೈದುಂಬಿದ ಜಲಪಾತ: ದೇವಸಮುದ್ರ ಹೋಬಳಿಯ ಮೆಗಳ ಕಣಿವೆ ಸಮೀಪದ ಮಿಂಚು ಗುಡ್ಡದಲ್ಲಿ ನೀರು ಮೈದುಂಬಿ ಹರಿಯುತ್ತಿದೆ. ಸುತ್ತಲೂ ಬೆಟ್ಟದ ಸಾಲುಗಳ ಮಧ್ಯೆ ಇರುವ ಮಿಂಚು ಗುಡ್ಡದಲ್ಲಿ ನೀರು ಜಲಪಾತದಂತೆ ಧುಮ್ಮಿಕ್ಕುತ್ತಿದೆ. ಕಮಲಾಪುರ ರಾಜ್ಯ ಹೆದ್ದಾರಿಗೆ ಅಂಟಿಕೊಂಡಿರುವ ಜಲಪಾತ ನಿಸರ್ಗ ರಮಣೀಯವಾಗಿ ಮಲೆನಾಡನ್ನು ನಾಚಿಸುವಂತೆ ಸುತ್ತಲಿನ ಜನರನ್ನು ಆಕರ್ಷಿಸುತ್ತಿದೆ.ತುಂಬಿ ಹರಿದ ಗುಂಡೇರ ಹಳ್ಳ: ಪಕ್ಕುರ್ತಿ ಕೆರೆ ಕೋಡಿ ನೀರಿನಿಂದ ರಾಂಪುರ ಸಮೀಪದ ಗುಂಡೇರಹಳ್ಳ ತುಂಬಿ ಹರಿಯುತ್ತಿದೆ. ಗುಂಡೇರಹಳ್ಳದ ಜಾಕ್ ವಾಲ್ ನ ಪೈಪುಗಳು ತುಂಬಿ ಕಟ್ಟಡದ ಮೇಲೆ ಎರಡು ಅಡಿಗೂ ಹೆಚ್ಚು ಎತ್ತರದಲ್ಲಿ ನೀರು ಹರಿಯುತ್ತಿದೆ. ದೇವಸಮುದ್ರ ಕೆರೆ ಕೊಡಿಯಿಂದ ಗ್ರಾಮದ ಮನೆಗಳಿಗೆ ಹಾನಿಯಾಗಿರುವ ಪರಿಣಾಮವಾಗಿ ಗುಂಡೇರ ಹಳ್ಳದಲ್ಲಿ ನೀರನ್ನು ಬಂದ್ ಮಾಡಲಾಗಿದೆ. ಇದರಿಂದ ಪಕ್ಕುರ್ತಿ ಕೋಡಿ ನೀರು ಕೆರೆ ಕೊಂಡಾಪುರ, ತಿಮ್ಲಾಪುರ ಮಾರ್ಗವಾಗಿ ಚಿನ್ನ ಹಗರಿ ಸೇರುತ್ತಿದೆ. ಕಳೆದ ನಲವತ್ತು ವರ್ಷಗಳಲ್ಲಿ ಗುಂಡೇರಹಳ್ಳ ಇಷ್ಟೊಂದು ಸಮೃದ್ಧಿಯಾಗಿ ಹರಿಯುತ್ತಿರುವುದು ಇದೇ ಮೊದಲು ಎಂದು ರೈತ ಬಿ.ಎಂ.ಬಸವರಾಜ ಸಂತಸ ವ್ಯಕ್ತ ಪಡಿಸುತ್ತಿದ್ದಾರೆ.ಪಟ್ಟಣದಲ್ಲಿ ಬಹುತೇಕ ಜಲ ಮೂಲಗಳು ಭರ್ತಿಯಾಗಿವೆ. ದವಲಪ್ಪನ ಕುಂಟೆ, ಕೋತಲ ಕುಂಟೆ ಕೋಡಿ ಬಿದ್ದಿವೆ. ಸೀಗಲಗೊಂದಿಯಲ್ಲಿ ಜಲಪಾತ ಸೃಷ್ಟಿಯಾಗಿದೆ. ಪಟ್ಟಣದ ನಾಗರಿಕರು ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ.
ಕೆರೆಗಳ ದುಸ್ಥಿತಿ: ತಾಲೂಕಿನ ಬಹುತೇಕ ಕೆರೆಗಳು ನಿರ್ವಹಣೆ ಇಲ್ಲದೆ ಸೊರಗಿವೆ. ಕೆರೆಗಳಲ್ಲಿ ಬಳ್ಳಾರಿ ಜಾಲಿ ಗಿಡಗಳಿಂದ ಆವೃತವಾಗಿವೆ. ನರೇಗಾ ಯೋಜನೆಯಲ್ಲಿ ಕೋಟ್ಯಾಂತರ ರು.ಗಳು ಖರ್ಚು ಮಾಡಿ ಕೆರೆ ಹೂಳೆತ್ತುವ ಕಾಮಗಾರಿ ಮಾಡಿದ್ದರೂ ನೆಪ ಮಾತ್ರ ಎನ್ನುವಂತಾಗಿದೆ. ಮುತ್ತಿಗಾರಹಳ್ಳಿ ಕೆರೆಯಲ್ಲಿ ಮುಕ್ಕಾಲು ಭಾಗ ಗಿಡಗಳು ಬೆಳೆದು ನಿಂತಿವೆ. ಇಲ್ಲಿ ಕೆರೆ ಹೂಳೆತ್ತುವ ಕಾಮಗಾರಿ ಮಾಡಿದ್ದರೂ ಗಿಡಗಳು ತೆರವಾಗಿಲ್ಲ ಎಂದು ಗ್ರಾಪಂ ಸದಸ್ಯ ಪಾಪಣ್ಣ ತೀವ್ರ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.ಸದಾ ಬರಕ್ಕೆ ಸಿಲುಕುವ ರಂಗಯ್ಯನ ದುರ್ಗ ಜಲಾಶಯ ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗಿದೆ. ಎರಡನೇ ಬಾರಿ ಜಲಾಶದಿಂದ ನೀರನ್ನು ಚಿನ್ನ ಹಗರಿಗೆ ಬಿಡಲಾಗಿದೆ. ಇದರಿಂದಾಗಿ ನಾಗಸಮುದ್ರ ಸೇತುವೆ ಮುಳುಗಿ ಮುಖ್ಯ ರಸ್ತೆ ಸಂಪರ್ಕ ಕಡಿತ ಗೊಂಡಿದೆ. ಚಿನ್ನಹಗರಿಯ ನೀರಿನ ಮಟ್ಟ ಏರಿದೆ. ಚಿತ್ರದುರ್ಗ ತಾಲೂಕಿನ ಸಂಗೇನ ಹಳ್ಳಿ ಕೆರೆಯು ಕೋಡಿ ಬಿದ್ದಿರುವ ಪರಿಣಾಮ ನೀರಿನ ಹರಿವು ಇನ್ನಷ್ಟು ಹೆಚ್ಚಾಗಿದೆ.