ಸಾರಾಂಶ
ಮುಂಡಗೋಡ: ಪಟ್ಟಣ ಸೇರಿದಂತೆ ತಾಲೂಕಿನ ಬಹುತೇಕ ಕಡೆ ಶುಕ್ರವಾರ ಉತ್ತಮ ಮಳೆಯಾಗಿದ್ದು, ಸಾರ್ವಜನಿಕರಲ್ಲಿ ಮಂದಹಾಸ ಮೂಡಿಸಿದ್ದರೆ ಕೆಲವೆಡೆ ಬೆಳೆಹಾನಿಯಾಗಿದೆ. ಅಲ್ಲದೇ ಸಿಡಿಲು ಬಡಿದು ಐದು ಜಾನುವಾರುಗಳು ಬಲಿಯಾಗಿವೆ.
ಮಧ್ಯಾಹ್ನ ೨.೩೦ರ ಸುಮಾರಿಗೆ ಗುಡುಗು, ಮಿಂಚು, ಸಿಡಿಲು ಸಹಿತ ಪ್ರಾರಂಭವಾದ ಮಳೆ ಸುಮಾರು ೧ ಗಂಟೆಗಳ ಕಾಲ ಸುರಿಯಿತು. ೬ ತಿಂಗಳ ಬಳಿಕ ತಾಲೂಕಿನಲ್ಲಿ ಮಳೆಯಾಗಿದ್ದು, ಹರ್ಷವನ್ನುಂಟು ಮಾಡಿದ್ದು, ಬಿಸಿಲಿನ ಧಗೆಯಿಂದ ಬೆಂದು ಹೋಗಿದ್ದ ಜೀವಸಂಕುಲಕ್ಕೆ ತಂಪೆರೆದಂತಾಗಿದೆ. ಪಟ್ಟಣದಲ್ಲಿ ಕಸ ಮತ್ತು ಕೊಳಚೆ ತುಂಬಿಕೊಂಡಿದ್ದ ಚರಂಡಿಗಳು ರಭಸದ ಮಳೆಯ ನೀರಿಗೆ ಸ್ವಚ್ಛಗೊಂಡಿವೆ.ಅಪಾರ ಬೆಳೆಹಾನಿ: ಭಾರಿ ಗಾಳಿ ಮಳೆಯಿಂದಾಗಿ ಸಾವಿರಕ್ಕೂ ಅಧಿಕ ಫಸಲುಭರಿತ ಪಪ್ಪಾಯಿ ಗಿಡಗಳು ನೆಲಕ್ಕುರುಳಿ ಲಕ್ಷಾಂತರ ರುಪಾಯಿ ಮೌಲ್ಯದ ಹಾನಿಯಾದ ಘಟನೆ ತಾಲೂಕಿನ ಹುಲಿಹೊಂಡ ಗ್ರಾಮದಲ್ಲಿ ಶುಕ್ರವಾರ ಸಂಜೆ ನಡೆದಿದೆ.
ಹುಲಿಹೊಂಡ ಗ್ರಾಮ ಸರ್ವೇ ನಂ-೭೨ ಬಸವರಾಜ ನಡುವಿನಮನಿ ಅವರಿಗೆ ಸೇರಿದ ಪಪ್ಪಾಯಿ ತೋಟ ಇದಾಗಿದ್ದು, ೧ ಸಾವಿರಕ್ಕೂ ಅಧಿಕ ಫಸಲುಭರಿತವಾದ ಪಪ್ಪಾಯಿ ಗಿಡಗಳು ಮುರಿದುಬಿದ್ದಿವೆ ಎನ್ನಲಾಗಿದೆ.೭೮೬ ತೈವಾನ ರೆಡ್ ಲೇಡಿ ವಿದೇಶಿ ತಳಿಯ ಯುರೋಪ್ ಖಂಡ ಮತ್ತು ಅರಬ್ ದೇಶಗಳಿಗೆ ರಫ್ತಾಗುವ ಈ ಫಸಲುಭರಿತವಾದ ಪಪ್ಪಾಯಿ ಗಿಡಗಳು ನೆಲಕ್ಕುರುಳಿದ ಪರಿಣಾಮ ಸುಮಾರು ₹೮ ಲಕ್ಷ ಬೆಳೆಹಾನಿಯಾಗಿದೆ ಎಂದು ರೈತ ಬಸವರಾಜ ನಡುವಿನಮನಿ ತಿಳಿಸಿದ್ದಾರೆ. ಕಂದಾಯ ಇಲಾಖೆ ಅಧಿಕಾರಿಗಳು ಮಾಹಿತಿ ಪಡೆದುಕೊಂಡು ಪರಿಶೀಲಿಸಿದ್ದಾರೆ.ಐದು ಜಾನುವಾರು ಸಾವು:
ಸಿಡಿಲು ಬಡಿದು ೫ ಜಾನುವಾರುಗಳು(ಹಸು) ಮೃತಪಟ್ಟ ಘಟನೆ ತಾಲೂಕಿನ ಪಾಳಾ ಕ್ರಾಸ್ ಬಳಿ ಶುಕ್ರವಾರ ಸಂಜೆ ಸಂಭವಿಸಿದೆ.ಕಲಕೊಪ್ಪ ಗ್ರಾಮದ ಫಕ್ಕೀರಗೌಡ ಗಿರೆಗೌಡ ಕಡಬಗೇರಿ ಎಂಬವರಿಗೆ ಸೇರಿದ ಜಾನುವಾರುಗಳೇ ಸಿಡಿಲಿಗೆ ಬಲಿಯಾಗಿದ್ದು, ಎಂದಿನಂತೆ ಗದ್ದೆಯಲ್ಲಿ ಮೇಯುತ್ತಿದ್ದ ಜಾನುವಾರುಗಳಿಗೆ ಏಕಾಏಕಿ ಸಿಡಿಲು ಬಡಿದು ಸ್ಥಳದಲ್ಲಿಯೇ ಮೃತಪಟ್ಟಿವೆ.
ಕಂದಾಯ ಇಲಾಖೆ ಅಧಿಕಾರಿ ಹಾಗೂ ಗ್ರಾಪಂ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದ್ದಾರೆ.ರೈತರಲ್ಲಿ ಸಂತಸ: ಕಳೆದ ಬಾರಿ ಮಳೆಯ ಕೊರತೆಯಿಂದಾಗಿ ಕೆರೆ- ಕಟ್ಟೆಗಳೆಲ್ಲ ಖಾಲಿಯಾಗಿವೆ. ಅಲ್ಲದೇ ಅಂತರ್ಜಲ ಮಟ್ಟ ಕುಸಿತದಿಂದ ಬೋರ್‌ವೆಲ್‌ಗಳಲ್ಲಿ ನೀರಿಲ್ಲದಂತಾಗಿದ್ದು, ತಾಲೂಕಿನಲ್ಲಿ ಬೆಳೆದ ಅಡಕೆ, ಬಾಳೆ, ಮೆಕ್ಕೆಜೋಳ ಸೇರಿದಂತೆ ಬಹುತೇಕ ಬೆಳೆಗಳು ನೀರಿಲ್ಲದೆ ಒಣಗಿವೆ. ಇದರಿಂದ ತೀವ್ರ ನೊಂದಿದ್ದ ರೈತರಿಗೆ ಮುಂದೆ ಹೇಗಪ್ಪ ಎಂಬ ಚಿಂತೆ ಕಾಡತೊಡಗಿತ್ತು. ಇಂತಹ ಸಂದರ್ಭದಲ್ಲಿ ತೇಲಿ ಹೋಗುವನಿಗೆ ಹುಲ್ಲಿನ ಕಡ್ಡಿ ಆಸರೆ ಎಂಬಂತೆ ಉತ್ತಮ ಮಳೆಯಾಗಿದ್ದು, ರೈತರಲ್ಲಿ ಬೆಳೆಗಳನ್ನು ಉಳಿಸಿಕೊಳ್ಳುವ ಆಶಾಭಾವನೆ ಮೂಡಿಸಿದೆ. ಒಟ್ಟಾರೆಯಾಗಿ ಬರದಿಂದ ಕಂಗೆಟ್ಟಿದ್ದ ಜನರಿಗೆ ಈ ಮಳೆ ಜೀವಾಮೃತ ನೀಡಿದಂತಾಗಿದ್ದಂತೂ ಸುಳ್ಳಲ್ಲ.