ಕೆಲವೆಡೆ ಭಾರಿ ಮಳೆ, ಕೆಲವೆಡೆ ಸಾಧಾರಣ ಮಳೆ

| Published : May 15 2024, 01:33 AM IST

ಸಾರಾಂಶ

ಗೋಕರ್ಣ ಹಾಗೂ ಅಂಕೋಲಾದ ಕೆಲವೆಡೆ ಮಂಗಳವಾರ ಸಂಜೆ ಭಾರಿ ಮಳೆಯಾಗಿದೆ. ಗುಡುಗು ಮಿಂಚಿನ ಅಬ್ಬರದೊಂದಿಗೆ ಮಳೆ ಸುರಿದಿದೆ.

ಕಾರವಾರ: ಉತ್ತರ ಕನ್ನಡದ ವಿವಿಧೆಡೆ ಮಂಗಳವಾರ ಭಾರಿ ಮಳೆಯಾಗಿದೆ. ಕೆಲವೆಡೆ 2- 3 ದಿನಗಳಿಂದ ಮಳೆಯಾಗುತ್ತಿದ್ದರೆ, ಉಳಿದೆಡೆ ಮಂಗಳವಾರ ಮಳೆ ಕಾಣಿಸಿಕೊಂಡಿದೆ. ಶಿರಸಿಯಲ್ಲಿ ಬಿರುಗಾಳಿ, ಗುಡುಗು, ಮಿಂಚಿನೊಂದಿಗೆ ಮೂರನೇ ದಿನವಾದ ಮಂಗಳವಾರವೂ ಭಾರಿ ಮಳೆ ಸುರಿದಿದೆ. ಸಹ್ಯಾದ್ರಿ ಕಾಲನಿಯಲ್ಲಿ ಮಳೆ ಗಾಳಿಯ ಅಬ್ಬರಕ್ಕೆ ಸುಮಾರು ಹತ್ತು ಮರಗಳು ಹಾಗೂ ಹತ್ತು ವಿದ್ಯುತ್ ಕಂಬಗಳು ಉರುಳಿಬಿದ್ದು ಕೆಲಸಮಯ ರಸ್ತೆ ಸಂಚಾರವೂ ಬಂದ್ ಆಗಿತ್ತು. ಇದರಿಂದ ಆ ಪ್ರದೇಶದಲ್ಲಿ ವಿದ್ಯುತ್ ಕೂಡ ಕೈಕೊಟ್ಟಿದೆ.

ಗೋಕರ್ಣ ಹಾಗೂ ಅಂಕೋಲಾದ ಕೆಲವೆಡೆ ಮಂಗಳವಾರ ಸಂಜೆ ಭಾರಿ ಮಳೆಯಾಗಿದೆ. ಗುಡುಗು ಮಿಂಚಿನ ಅಬ್ಬರದೊಂದಿಗೆ ಮಳೆ ಸುರಿದಿದೆ.

ಹೊನ್ನಾವರದಲ್ಲಿ ಮಂಗಳವಾರ ಸಂಜೆ ಮಿಂಚು, ಗುಡುಗು, ಬಿರುಗಾಳಿ ಸಹಿತ ಭಾರಿ ಮಳೆ ಸುರಿದಿದೆ. ಕುಮಟಾದ ಕೆಲವೆಡೆಯೂ ಭಾರಿ ಮಳೆಯಾಗಿದೆ. ಜೋಯಿಡಾ, ಯಲ್ಲಾಪುರದ ಕೆಲವೆಡೆ ಅರ್ಧಗಂಟೆ ಹಾಗೂ ಭಟ್ಕಳದಲ್ಲಿ ಸಾಧಾರಣ ಮಳೆಯಾಗಿದೆ. ಅದೇ ರೀತಿ ಮುಂಡಗೋಡದಲ್ಲೂ ಅರ್ಧಗಂಟೆ ಮಳೆ ಸುರಿದಿದೆ.

ಭಾರಿ ಬಿಸಿಲು, ಕಳೆದ ಮಳೆಗಾಲದಲ್ಲಿ ಕೈಕೊಟ್ಟ ಮಳೆಯಿಂದಾಗಿ ಜಿಲ್ಲೆಯ ಹಲವೆಡೆ ನೀರಿಗೆ ಬರ ಎದುರಾಗಿದೆ. ಸೆಕೆಯಂತೂ ವಿಪರೀತವಾಗಿ ಜನತೆ ಮಳೆಗಾಗಿ ಪ್ರಾರ್ಥಿಸುತ್ತಿದ್ದರು. ಇನ್ನು ಅಡಕೆ, ತೆಂಗು, ಬಾಳೆ ತೋಟಗಳು ಒಣಗಲಾರಂಭಿಸಿದ್ದು, ತೋಟದಲ್ಲಿನ ಗಿಡ ಮರಗಳನ್ನು ರಕ್ಷಿಸಿಕೊಳ್ಳುವುದು ಹೇಗೆಂಬ ಚಿಂತೆ ಕೃಷಿಕರನ್ನು ಕಾಡುತ್ತಿತ್ತು. ಜಾನುವಾರುಗಳಿಗೂ ಕುಡಿಯುವ ನೀರಿನ ಅಭಾವ ಉಂಟಾಗಿತ್ತು. ಈಗ ಎರಡು ಮೂರು ದಿನಗಳಿಂದ ಸುರಿಯುತ್ತಿರುವ ಮಳೆ ಇದಕ್ಕೆಲ್ಲ ಪರಿಹಾರವಾಗುವಂತೆ ಕಂಡುಬರುತ್ತಿದೆ.

ಹವಾಮಾನ ಇಲಾಖೆಯ ಮಾಹಿತಿಯಂತೆ ಇನ್ನೂ 2- 3 ದಿನಗಳ ಕಾಲ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಸುರಿಯಲಿದೆ. ಘಟ್ಟದ ಮೇಲಿನ ತಾಲೂಕುಗಳಲ್ಲಿ ಮೂರು ದಿನಗಳಿಂದ ಉತ್ತಮ ಮಳೆಯಾಗಿದ್ದರೆ, ಕರಾವಳಿಯಲ್ಲಿ ಸಾಧಾರಣ ಮಳೆ ಉಂಟಾಗಿದೆ.ಶಿರಸಿಯಲ್ಲಿ ಭಾರೀ ಮಳೆ, ಉರುಳಿದ ವಿದ್ಯುತ್ ಕಂಬಗಳು

ಶಿರಸಿ: ತಾಲೂಕಿನಾದ್ಯಂತ ಮಂಗಳವಾರ ಗುಡುಗು ಸಹಿತ ಸುರಿದ ಗಾಳೆ ಮಳೆಗೆ ಮರಗಳು ಬಿದ್ದು ವಿದ್ಯುತ್ ಕಂಬಗಳು ಮುರಿದು ನೆಲಕ್ಕುರುಳಿದೆ.ಮಂಗಳವಾರ ಮಧ್ಯಾಹ್ನ ಆರಂಭವಾದ ಮಳೆಯು ತಾಲೂಕಿನಾದ್ಯಂತ ಸುರಿದು ಹಲವು ಅನಾಹುತಗಳಿಗೆ ಎಡೆಮಾಡಿಕ್ಕೊಟ್ಟಿದೆ. ಚರಂಡಿಗಳು ಬ್ಲಾಕ್ ಆಗಿ ರಸ್ತೆಯ ಮೇಲೆ ಕೊಳಚೆ ನೀರು ಹರಿದು ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಮಧ್ಯಾಹ್ನ ೩ ಗಂಟೆಯಿಂದ ರಾತ್ರಿಯವರೆಗೂ ಮೋಡ ಕವಿದು ಕೆಲವೆಡೆ ಭಾರೀ ಮಳೆಯಾಗಿದೆ.ಖುಷಿಪಟ್ಟ ಅನ್ನದಾತ: ಪ್ರಸಕ್ತ ಸಾಲಿನಲ್ಲಿ ಮಳೆ ಕೊರತೆಯಿಂದ ಸಹಕಾರಿ ಸಂಘಗಳಲ್ಲಿ ಬೆಳೆದ ಭತ್ತ, ಜೋಳ ಸೇರಿದಂತೆ ಇನ್ನಿತರ ಬೆಳೆಗಳ ನಷ್ಟದಿಂದ ರೈತರು ಆರ್ಥಿಕ ಸಂಕಷ್ಟ ಎದುರಿಸವಂತಾಗಿತ್ತು. ಜನವರಿಯಿಂದ ಮೇಲೆ ಆರಂಭದವರೆಗೂ ಮಳೆ ಬಾರದ ಹಿನ್ನೆಲೆ ಅಡಕೆ, ತೆಂಗು, ಬಾಳೆ ಮರಗಳೆಲ್ಲವೂ ಒಣಗಿ ನಿಂತಿತ್ತು. ಒಂದೆರಡು ಮಳೆಯಾದರೂ ಅಡಕೆ ಮರಗಳಿಗೆ ಜೀವ ಬರುತ್ತದೆ ಎನ್ನುತ್ತಿದ್ದ ರೈತ ಸಮುದಾಯಕ್ಕೆ ಮೇ ತಿಂಗಳಿನಲ್ಲಿ ಸುರಿದ ಮಳೆಯಿಂದ ಜೀವ ಬಂದಂತಾಗಿದೆ. ಇದರಿಂದ ಅನ್ನದಾತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.

ಮಳೆಯಿಂದ ಹಾನಿ: ಮಂಗಳವಾರ ಮಧ್ಯಾಹ್ನ ಸುರಿದ ಭಾರಿ ಮಳೆಗೆ ನಗರದ ಸೈಹಾದ್ರಿ ಕಾಲನಿಯಲ್ಲಿ ಸುಮಾರು ೧೦ ಮರ ಹಾಗೂ ವಿದ್ಯುತ್ ಕಂಬ ಮುರಿದು ರಸ್ತೆ ಸಂಪೂರ್ಣ ಬ್ಲಾಕ್ ಆಗಿತ್ತು. ಇದರಿಂದ ನಗರದ ವಿವಿಧ ಭಾಗಗಳಲ್ಲಿ ವಿದ್ಯುತ್ ವ್ಯತ್ಯಯದಿಂದ ನಗರ ಹಾಗೂ ಗ್ರಾಮೀಣ ಭಾಗದ ಜನರು ಪರದಾಡುವಂತಾಯಿತು.