ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆ ಶುಕ್ರವಾರ ಸಂಜೆ ಗಾಳಿ‌ ಸಹಿತ ಭಾರಿ ಮಳೆ ಸುರಿಯಿತು.

ಹರಪನಹಳ್ಳಿ:

ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆ ಶುಕ್ರವಾರ ಸಂಜೆ ಗಾಳಿ‌ ಸಹಿತ ಭಾರಿ ಮಳೆ ಸುರಿಯಿತು.

ಮಳೆಯಿಂದ ಹಲವೆಡೆ ವಿದ್ಯುತ್ ಕಂಬ, ಮರಗಳು ನೆಲಕ್ಕರುಳಿದವು. ಪಟ್ಟಣದ ಮಾಜಿ ಶಾಸಕ ದಿ.ನಾರಾಯಣ್ ದಾಸ್ ಅವರ ಮನೆಯ ಮುಂದೆ ನಿಲ್ಲಿಸಿದ್ದ ಕಾರಿನ ಮೇಲೆ ಮರ ಉರುಳಿ ಬಿದ್ದು ಕಾರಿನ ಮುಂದಿನ ಭಾಗ ಜಖಂಗೊಂಡಿತ್ತು. ಪಟ್ಟಣದ ಬಸ್ ನಿಲ್ದಾಣದ ಬಳಿ ಬೇವಿನ ಮರವೊಂದು ನೆಲಕ್ಕರುಳಿ ಬಸ್ ಓಡಾಟಕ್ಕೆ ತೊಂದರೆ ಉಂಟಾಗಿತ್ತು.

ತೆಗ್ಗಿನಮಠ, ಬಿಎಸ್‌ ಎನ್ ಎಲ್‌ ಕಚೇರಿ ಬಳಿ ರಸ್ತೆ ತುಂಬಾ ನೀರು ಹರಿದು ವಾಹನ ಸಂಚಾರಕ್ಕೆ ತೊಂದರೆಯುಂಟಾಗಿತ್ತು.

ಪಟ್ಟಣದ ಹೊರವಲಯದ ಕೊಟ್ಟೂರು ರಸ್ತೆ ಕುರಿ ಸಂತೆ, ಪರ್ಲ್‌ ಪಬ್ಲಿಕ್ ಸ್ಕೂಲ್, ಹೊಂಬಳಗಟ್ಟಿ ರಸ್ತೆ ಮೇಲೆ ವಿದ್ಯುತ್ ಕಂಬಗಳು ಉರುಳಿ ಬಿದ್ದಿದ್ದ ಪರಿಣಾಮ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಸ್ಥಳಕ್ಕೆ ಬೆಸ್ಕಾಂ,ಅಧಿಕಾರಿಗಳು ಆಗಮಿಸಿ ಕಂಬಗಳನ್ನು ತೆರವುಗೊಳಿಸಿ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.

ಇನ್ನು ಚಿಗಟೇರಿ ನಾರಮುನಿ ರಥೋತ್ಸವಕ್ಕೆ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಭಕ್ತರು ಮಳೆಯಿಂದ ಪರದಾಡಿದ ದೃಶ್ಯ ಕಂಡು ಬಂತು.

ತಾಲೂಕಿನ‌ ಅರಸೀಕೆರೆ, ಚಿಗಟೇರಿ, ಹುಲಿಕಟ್ಟಿ, ಗೊವೆರಹಳ್ಳಿ, ಬಾಗಳಿ, ಶೃಂಗಾರತೋಟ ಸೇರಿದಂತೆ ಅನೇಕ ಕಡೆ ಉತ್ತಮ ಮಳೆಯಾಯಿತು.

ಬಳ್ಳಾರಿ-ಕುರುಗೋಡು ತಾಲೂಕಿನ ವಿವಿಧೆಡೆ ಸುರಿದ ಮಳೆ

ಬಳ್ಳಾರಿ ಹಾಗೂ ಕುರುಗೋಡು ತಾಲೂಕಿನ ವಿವಿಧೆಡೆ ಶುಕ್ರವಾರ ಸಂಜೆ ಮಳೆಯಾಗಿದೆ.ನಗರದಲ್ಲಿ ಸುಮಾರು ಅರ್ಧತಾಸಿಗೂ ಹೆಚ್ಚು ಹೊತ್ತು ಮಳೆ ಸುರಿಯಿತು.ಇದರಿಂದ ಕೃಷಿ ಉತ್ಪನ್ನ ಮಾರುಕಟ್ಟೆಗೆ ಖರೀದಿಗೆಂದು ತಂದಿದ್ದ ಹಿಂಗಾರು ಹಂಗಾಮಿನ ಜೋಳವನ್ನು ರಕ್ಷಿಸಿಕೊಳ್ಳಲು ರೈತರು ಪರದಾಡುವ ದೃಶ್ಯಗಳು ಕಂಡು ಬಂದವು. ಬೆಳಗ್ಗೆಯಿಂದ ನಗರದಲ್ಲಿ ಬೇಗುದಿಯಿತ್ತು. ತಾಪಮಾನ ಹೆಚ್ಚಳದಿಂದ ಸಾರ್ವಜನಿಕರು ಕಂಗೆಟ್ಟಿದ್ದರು. ಸಂಜೆ ಮಳೆ ಸುರಿಯುತ್ತಿದ್ದಂತೆಯೇ ಎಲ್ಲೆಡೆ ತಂಪಿನ ವಾತಾವರಣವಾಯಿತು. ತಾಲೂಕಿನ ಮೋಕಾ, ರೂಪನಗುಡಿ, ಬಸರಕೋಡು, ಹೊಣೆನೂರು, ಚಾನಾಳು, ಶ್ರೀಧರಗಡ್ಡೆ, ಕೊರ್ಲಗುಂದಿ ಮತ್ತಿತರ ಕಡೆಗಳಲ್ಲಿ ಉತ್ತಮ ಮಳೆಯಾಗಿದೆ. ಕುರುಗೋಡು ತಾಲೂಕಿನ ವಿವಿಧೆಡೆ ಸುಮಾರು ಅರ್ಧಗಂಟೆಗೂ ಹೆಚ್ಚು ಹೊತ್ತು ಮಳೆ ಸುರಿದಿದೆ.